Advertisement
ಪಾರ್ಕಿನ್ಸನ್ ಕಾಯಿಲೆಯೆಂದರೆ ಇದೊಂದು ನರ-ಕ್ಷೀಣಗೊಳ್ಳುವ ಸ್ಥಿತಿಯಾಗಿದ್ದು, ಇದು ವಯಸ್ಸಾದಂತೆ ಹೆಚ್ಚುತ್ತಾ ಹೋಗುವ ಒಂದು ಆರೋಗ್ಯ ಸಮಸ್ಯೆ ಎಂದು ಬೆಂಗಳೂರು ಜಯನಗರದಲ್ಲಿರುವ ಆರ್ ವಿ ಕಾಲೇಜ್ ಆಫ್ ಫಿಸಿಯೋಥೆರಪಿಯ ಸಹಾಯಕ ಪ್ರಾಧ್ಯಾಪಕಿ ಡಾ.ತೃಪ್ತಿ ಕಾಮತ್ ಅಭಿಪ್ರಾಯ ಪಡುತ್ತಾರೆ.
Related Articles
Advertisement
ಕೆಲವು ಸಂಶೋಧನಾ ಅಧ್ಯಯನಗಳು ಹೇಳುವಂತೆ ಹೈಪೋಸ್ಮಿಯಾ ಅಂದರೆ ವಾಸನೆಗೆ ಸಂಬಂಧಿಸಿದ ಸಂವೇದನೆ ಕಡಿಮೆಯಾಗುವುದು ಸಹಾ ಈ ರೋಗದ ಸಾಮಾನ್ಯ ಲಕ್ಷಣವಾಗಿದೆ, ಇದು ವಿಶಿಷ್ಟವಾಗಿ ಚಲನಶೀಲತೆಗೆ ಸಂಬಂಧಿಸಿದ ರೋಗಲಕ್ಷಣಗಳನ್ನು ಹಲವಾರು ವರ್ಷಗಳಿಗೆ ಮುಂಚೆಯೇ ಕಾಣಿಸಿಕೊಳ್ಳಲು ಕಾರಣವಾಗುವ ಸಾಧ್ಯತೆಗಳಿವೆ. ಹೆಚ್ಚಿನ ಹರಡುವಿಕೆಯ ಜೊತೆಗೆ, ಹೈಪೋಸ್ಮಿಯಾ ಸಂಭವಿಸುವ ಕಾರಣವಾಗಿ ಈ ರೋಗಿಗಳಲ್ಲಿ ಹೆಚ್ಚಿನ ಅಪಾಯವನ್ನು ನಿರೀಕ್ಷಿಸಬಹುದು. ಪಾರ್ಕಿನ್ಸನ್ ಕಾಯಿಲೆಗೆ ನಿಖರವಾದ ಕಾರಣ ತಿಳಿದಿಲ್ಲ. ಇದು ಆನುವಂಶಿಕ ಮತ್ತು ಪರಿಸರ ಸಂಬಂಧಿ ಕಾರಣಗಳನ್ನು ಹೊಂದಿರಬಹುದು.
ತಡವಾದ ರೋಗನಿರ್ಣಯವು ಅನೇಕ ತೊಡಕುಗಳಿಗೆ ಕಾರಣವಾಗಬಹುದು, ಅದು ಹಲ್ಲುಜ್ಜುವಂತಹ ಸರಳವಾದ ದೈನಂದಿನ ಚಟುವಟಿಕೆಗಳಿಗೆ ಕೂಡಾ ಅಡ್ಡಿಯಾಗಬಹುದು. ವೈದ್ಯಕೀಯ ಚಿಕಿತ್ಸೆಯ ಮೊದಲ ಹಂತ ಸಿಂಡೋಪಾ ಆಗಿರುತ್ತದೆ. ಇತ್ತೀಚಿನ ಶಸ್ತ್ರಚಿಕಿತ್ಸಾ ಆಯ್ಕೆಗಳಾದ ಡೀಪ್ ಬ್ರೈನ್ ಸ್ಟಿಮ್ಯುಲೇಶನ್, ಲೆವೊಡೋಪಾ-ಕಾರ್ಬಿಡೋಪಾ ಇಂಟೆಸ್ಟೈನಲ್ ಪಂಪ್, ಥಾಲಮೊಟಮಿ ಮತ್ತು ಸ್ಟೆಮ್ ಸೆಲ್ ಥೆರಪಿಯು ಸಕಾರಾತ್ಮಕ ಫಲಿತಾಂಶಗಳನ್ನು ತೋರಿಸುತ್ತಿದೆ. ಆದರೆ ಅತ್ಯಂತ ಭರವಸೆಯ ಔಷಧೀಯ ಪ್ರಯೋಗವಿಲ್ಲದ( ನಾನ್-ಫಾರ್ಮಾಕೊಜೆನಿಕ್), ಶಸ್ತ್ರ ಪ್ರಯೋಗವಿಲ್ಲದ (ನಾನ್-ಇನ್ವೇಸಿವ್) ಮತ್ತು ಶೂನ್ಯ ಅಡ್ಡ-ಪರಿಣಾಮದ ಚಿಕಿತ್ಸೆಯು ಭೌತ ಚಿಕಿತ್ಸಾ ಪದ್ದತಿ(ಫಿಸಿಯೋಥೆರಪಿ)ಯದಾಗಿದೆ.ಪಾರ್ಕಿನ್ಸನ್ ರೋಗಿಗಳಿಗೆ ಫಿಸಿಯೋಥೆರಪಿ ಹೇಗೆ ಸಹಾಯ ಮಾಡುತ್ತದೆ? ನರವೈಜ್ಞಾನಿಕ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡುವಲ್ಲಿ ಪರಿಣಿತರಾಗಿರುವ ಒಬ್ಬ ಅರ್ಹ ಭೌತಚಿಕಿತ್ಸಕ ರೋಗಿಯ ಅಗತ್ಯಗಳನ್ನು ನಿರ್ದಿಷ್ಟವಾಗಿ ಗುರಿಪಡಿಸುವ ಸೂಕ್ತವಾದ ಚಿಕಿತ್ಸಾ ಯೋಜನೆಯನ್ನು ರೂಪಿಸುತ್ತಾನೆ. ವಿಶ್ರಾಂತಿ ವ್ಯಾಯಾಮಗಳು, ನಮ್ಯತೆ(ಫ್ಲೆಕ್ಸಿಬಲಿಟಿ) ವ್ಯಾಯಾಮಗಳು, ಬಲಪಡಿಸುವ ವ್ಯಾಯಾಮಗಳು, ಕ್ರಿಯಾತ್ಮಕ ತರಬೇತಿ, ಸಮತೋಲನ ತರಬೇತಿ, ನಡಿಗೆ ತರಬೇತಿ ಮತ್ತು ಹೃದಯ-ಶ್ವಾಸಕೋಶ ಯುಗಳ (ಕಾರ್ಡಿಯೋಪಲ್ಮನರಿ) ತರಬೇತಿಯು ಪಾರ್ಕಿನ್ಸನ್ ರೋಗಿಗಳ ಒಟ್ಟಾರೆ ಯೋಗಕ್ಷೇಮವನ್ನು ಸುಧಾರಿಸುತ್ತದೆ ಮತ್ತು ಉತ್ತಮ ಸಾಮಾಜಿಕವಾದ ಒಳಗೊಳ್ಳುವಿಕೆ ಮತ್ತು ಮನರಂಜನೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಅನುವಾಗಿಸುತ್ತದೆ. “ದೃಶ್ಶಾಧಾರಿತ ಅಥವಾ ಧ್ವನಿಯಾಧಾರಿತ ಸೂಚನೆ ( ಕ್ಯೂಯಿಂಗ್)ಗಳಂತಹ ಪರಿಹಾರ ತಂತ್ರಗಳು ಅಸಮರ್ಪಕ ಮಿದುಳಿನ ಕಾರ್ಯವನ್ನು ಬದಲಿಸಲು ಸಹಾಯ ಮಾಡುತ್ತದೆ” ಎಂದು ಆರ್‌ವಿ ಕಾಲೇಜ್ ಆಫ್ ಫಿಸಿಯೋಥೆರಪಿ ಉಪನ್ಯಾಸಕಿ ಡಾ. ಮಲ್ಲಿಕಾ ಪಂಡಿತ್ (ಪಿಟಿ) ಅಭಿಪ್ರಾಯಪಡುತ್ತಾರೆ. ಇತ್ತೀಚಿನ ಅಧ್ಯಯನಗಳು ಖಿನ್ನತೆ, ಆಯಾಸ, ನಿದ್ರಾಭಂಗ ಮತ್ತು ಪ್ರೇರಣೆಯ ಕೊರತೆ ಸೇರಿದಂತೆ ಪಾರ್ಕಿನ್ಸನ್ ರೋಗಿಯಲ್ಲಿ ಚಲನಶೀಲತೆಗೆ ಸಂಬಂಧಿಸದ ಲಕ್ಷಣಗಳನ್ನು ಸಹ ವ್ಯಾಯಾಮ ಸುಧಾರಿಸುತ್ತದೆ ಎಂದು ತೋರಿಸಿದೆ. ಪಾರ್ಕ್‌ಫಿಟ್ ಪ್ರೋಗ್ರಾಂ ಮತ್ತು ಲೀ ಸಿಲ್ವರ್‌ಮ್ಯಾನ್ ವಾಯ್ಸ್ ಟ್ರೀಟ್‌ಮೆಂಟ್-ಬಿಗ್ (ಎಲ್‌ಎಸ್‌ವಿಟಿ-ಬಿಗ್) ವಿಶೇಷ ವ್ಯಾಯಾಮ ಕಾರ್ಯಕ್ರಮಗಳು ದೈಹಿಕ ಚಟುವಟಿಕೆಯ ಮಟ್ಟವನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ. ಅಲ್ಲದೆ, ಜಲಾಧಾರಿತ(ಆಕ್ವಾಟಿಕ್) ಚಿಕಿತ್ಸೆಯು ಸಹಾ ಭೂ-ಆಧಾರಿತ ವ್ಯಾಯಾಮಕ್ಕೆ ಪರ್ಯಾಯವಾಗಿದ್ದು, ಇದು ಸ್ನಾಯುವಿನ ಬಿಗಿತವನ್ನು ಕಡಿಮೆ ಮಾಡಲು ಮತ್ತು ಕ್ರಿಯಾತ್ಮಕ ಸಾಮರ್ಥ್ಯಗಳನ್ನು ಸುಧಾರಿಸುವುದೆಂದು ಸಾಬೀತಾಗಿದೆ. ಭೌತಚಿಕಿತ್ಸೆಯ ಇತ್ತೀಚಿನ ಪ್ರವೃತ್ತಿಗಳು ವರ್ಚುವಲ್ ರಿಯಾಲಿಟಿ, ಡ್ಯಾನ್ಸ್ ಥೆರಪಿ, ಮ್ಯೂಸಿಕ್ ಥೆರಪಿ ಮತ್ತು ಸಮರ ಕಲೆಗಳನ್ನು ಆಧರಿಸಿದ ತೈ-ಚಿ ಮತ್ತು ಕರಾಟೆಗಳನ್ನು ಸಹ ಒಳಗೊಂಡಿವೆ. ಪಾರ್ಕಿನ್ಸನ್ ರೋಗದಿಂದ ಗುಣಮುಖರಾಗಿರುವ 79 ವರ್ಷದ ರಾಮಸ್ವಾಮಿ(ಹೆಸರು ಬದಲಿಸಲಾಗಿದೆ) ಅವರು ಔಷಧೀಯ ಚಿಕಿತ್ಸೆಯ ನಂತರವೂ ಹಾಸಿಗೆಯಿಂದ ಏಳಲು ಮತ್ತು ಮನೆಯೊಳಗೆ ನಡೆಯಲು ಕಷ್ಟಪಡುತ್ತಿದ್ದರು. ಅವರು ತಮ್ಮ ಸ್ನಾಯುವಿನ ಶಕ್ತಿ ಮತ್ತು ಸಹಿಷ್ಣುತೆ, ಸಮತೋಲನ ಮತ್ತು ವಾಕಿಂಗ್ ತರಬೇತಿಯನ್ನು ಗುರಿಯಾಗಿಟ್ಟುಕೊಂಡ ಭೌತಚಿಕಿತ್ಸೆಯ ದೈನಂದಿನ ತರಬೇತಿಗೆ ಒಳಗಾದರು. ಈಗ ನಾಲ್ಕು ತಿಂಗಳ ನಂತರ ಹೀಗೆ ಹೇಳುತ್ತಾರೆ “ಈಗ, ನಾನು ಸಾರ್ವಜನಿಕವಾಗಿ ಯಾತ ಸಹಾಯವೂ ಇಲ್ಲದೇ ಒಬ್ಬನೇ ಪ್ರಯಾಣಿಸುತ್ತೇನೆ ಮತ್ತು ಸಾಮಾಜಿಕ ಕೂಟಗಳಲ್ಲಿ ಭಾಗವಹಿಸುತ್ತೇನೆ.” ಆರಂಭಿಕ ರೋಗನಿರ್ಣಯವು ಉತ್ತಮ ಫಲಿತಾಂಶಕ್ಕೆ ಪ್ರಮುಖ ಕೀಲಿಯಾಗಿದೆ ಎಂದು ಡಾ.ತೃಪ್ತಿ ಕಾಮತ್ , ಬಲವಾಗಿ ಪ್ರತಿಪಾದಿಸುತ್ತಾರೆ. ಸಕ್ರಿಯ ಜೀವನಶೈಲಿಯನ್ನು ಉತ್ತೇಜಿಸಲು, ಜೀವನದ ಗುಣಮಟ್ಟವನ್ನು ಸುಧಾರಿಸಲು ಮತ್ತು ಆ ಮೂಲಕ ರೋಗದ ಹೊರೆಯನ್ನು ಕಡಿಮೆ ಮಾಡಲು ಈ ರೋಗಿಗಳಿಗೆ ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಭೌತ ಚಿಕಿತ್ಸೆಯನ್ನು ಪ್ರಾರಂಭದಿಂದಲೇ ನೀಡಬೇಕು ಎನ್ನುವುದೂ ಅವರ ಸಲಹೆ. ಮಾಹಿತಿ:ಡಾ. ತೃಪ್ತಿ ಕಾಮತ್, ಆರ್‌ವಿ ಕಾಲೇಜ್ ಆಫ್ ಫಿಸಿಯೋಥೆರಪಿ, ಜಯನಗರ
ನಿರೂಪಣೆ : ಶ್ರೀಧರ ಬಾಣಾವರ