Advertisement

ವೈದ್ಯ, ರೋಗಿ ಮತ್ತು ಭಕ್ತಿ

10:18 AM Feb 24, 2020 | mahesh |

ವಿದ್ಯಾರ್ಥಿಗಳಿಗಂತೂ ಪರೀಕ್ಷೆಯ ಹೊತ್ತಲ್ಲಿ ದೈವ ಭಕ್ತಿ ಅಧಿಕ. “ಈ ಒಂದು ಬಾರಿ ಪಾಸು ಮಾಡಿಬಿಡಪ್ಪ ದೇವರೇ, ಮುಂದಿನ ಬಾರಿ ಖಂಡಿತ ಓದುತ್ತೀನಿ’ ಎಂದು ಪ್ರಾರ್ಥಿಸುತ್ತಾರೆ. ನಪಾಸಾದ ತಕ್ಷಣ, “ದೇವರು ಕೈಬಿಟ್ಟ’ ಎನ್ನುತ್ತಾರೆ. ನಾನು ಅವರಿಗೆ ಹೇಳುವುದಿಷ್ಟೆ- “ನೀನು ಪುಸ್ತಕವನ್ನು ಯಾವಾಗ ಕೈಬಿಟ್ಟೆಯೋ, ಆವಾಗಲೇ ದೇವರೂ ನಿನ್ನ ಕೈಬಿಡುತ್ತಾನೆ. ನೀನು ಪುಸ್ತಕವನ್ನು ಹಿಡಿದರೆ, ದೇವರೂ ನಿನ್ನ ಕೈ ಹಿಡಿಯುತ್ತಾನೆ…’

Advertisement

ಆರೋಗ್ಯವಂತನಾಗೇ ಇದ್ದ ವ್ಯಕ್ತಿಯೊಬ್ಬನಿಗೆ ಅಚಾನಕ್ಕಾಗಿ ದೊಡ್ಡ ಖಾಯಿಲೆಯೊಂದು ಅಂಟಿಕೊಂಡುಬಿಟ್ಟಿತು. ಜೀವನಪರ್ಯಂತ ಒಂದೇ ಒಂದು ಕೆಟ್ಟ ಚಟ ಹಚ್ಚಿಕೊಳ್ಳದೇ, ಸಾತ್ವಿಕವಾಗಿಯೇ ಬದುಕಿದ್ದ ಆ ವ್ಯಕ್ತಿಗೆ ತೀವ್ರ ಆಘಾತ ತಂದ ವಿಷಯವದು. ಬಹಳ ಧಾರ್ಮಿಕನಾಗಿದ್ದ ಆ ವ್ಯಕ್ತಿ, ದೇವರೇ ನನ್ನನ್ನು ಬದುಕಿಸಪ್ಪ ಎಂದು ಬೇಡಿಕೊಳ್ಳುತ್ತಲೇ ಇದ್ದ. ಮನೆಯವರೂ ಈತ ಚೇತರಿಸಿಕೊಳ್ಳಲಿ ಎಂದು ವಿಶೇಷ ಪೂಜೆ ಪುನಸ್ಕಾರಗಳನ್ನೂ ಮಾಡಿಸಿದರು.

ರೋಗ ಉಲ್ಪಣಿಸುತ್ತಲೇ ಹೋಯಿತು. ಆತನನ್ನು ದೊಡ್ಡ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಯಿತು. ಎಲ್ಲಾ ಪರೀಕ್ಷೆಗಳನ್ನೂ ನಡೆಸಿದ ವೈದ್ಯರು “ಚಿಕಿತ್ಸೆ ಬಹಳ ಕಾಂಪ್ಲಿಕೇಟೆಡ್‌ ಇದೆ, ನಾವು ಗ್ಯಾರಂಟಿ ಕೊಡುವುದಕ್ಕೆ ಆಗುವುದಿಲ್ಲ, ಬದುಕಿಸುವುದು ಕಷ್ಟ’ ಎಂಬ ಧಾಟಿಯಲ್ಲೇ ಮಾತನಾಡಿದರು. ಆಗ ಮನೆಯವರೆಲ್ಲ ಕಂಬನಿ ಹಾಕುತ್ತಲೇ, ಶಸ್ತ್ರಚಿಕಿತ್ಸೆಗೆ ಅನುಮತಿ ಕೊಟ್ಟರು. ಆಪರೇಷನ್‌ ಮುಗಿಯಿತು. ಹೊರಬಂದ ವೈದ್ಯರು ಹೇಳಿದರು- “ಆಪರೇ ಷನ್‌ ಯಶಸ್ವಿಯಾಗಿದೆ, ಅವರು ಬೇಗನೇ ಚೇತರಿಸಿಕೊಳ್ಳುತ್ತಾರೆ, ಹೆದರಬೇಡಿ.’

ಈಗ ಈ ವ್ಯಕ್ತಿ ತುಂಬಾ ಚೇತರಿಸಿಕೊಂಡಿದ್ದಾರೆ. ಬಹಳ ದಿನಗಳ ನಂತರ ಇತ್ತೀಚೆಗೆ ನನ್ನ ಪ್ರವಚನ ಕೇಳಲು ಬಂದಿದ್ದರು. ಬಿಡುವಿನ ಸಮಯದಲ್ಲಿ ಆದದ್ದನ್ನೆಲ್ಲ ನನ್ನ ಬಳಿ ವಿವರಿಸುತ್ತಾ ಎದೆಯುಬ್ಬಿಸಿ ಹೇಳಿದರು: “ನೋಡಿ ಸ್ವಾಮೀಜಿ. ಈ ವೈದ್ಯರಿಗೆ ನನ್ನನ್ನು ಉಳಿಸಬಹುದೆಂಬ ಕಾನ್ಫಿಡೆನ್ಸೇ ಇರಲಿಲ್ಲ. ಆದರೆ, ನನಗೇನೂ ಆಗಲ್ಲ, ನಾನು ಬದುಕಿಯೇ ಬದುಕುತ್ತೇನೆ ಎಂಬ ಭರವಸೆ ನನಗಿತ್ತು. ಏಕೆಂದರೆ, “ನನ್ನನ್ನು ಬದುಕಿಸಪ್ಪ’ ಎಂದು ನನ್ನ ಆರಾಧ್ಯ ದೈವದಲ್ಲಿ ಬೇಡಿಕೊಂಡಿದೆ. ಭಕ್ತಿಯ ಶಕ್ತಿಯ ಮುಂದೆ ಯಾವುದೂ ಇಲ್ಲ’ ಎಂದರು.

ಅವರ ಮಾತಿನಲ್ಲಿ ವೈದ್ಯರ ಶ್ರಮದ ಬಗ್ಗೆ ಇದ್ದ ಅಸಡ್ಡೆಯನ್ನು ನಾನು ಗಮನಿಸಿದೆ. “ಹಾಗಿದ್ದರೆ, ವೈದ್ಯರು ನಿಮಗೆ ಆಪರೇಷನ್‌ ಮಾಡಲಿಲ್ಲವೇ?’- ಎಂದು ಕೇಳಿದೆ..
“ಮಾಡಿದರು’- ಅಂದರು
“ಈಗ ನೀವು ಔಷಧಿ ಸೇವಿಸುತ್ತಿಲ್ಲವೇ?’ ಎಂದು ಕೇಳಿದೆ.
“ಸೇವಿಸುತ್ತಿದ್ದೇನೆ ಸ್ವಾಮೀಜಿ. ತುಂಬಾ ಔಷಧ ಇವೆ’ ಅಂದರು.
“ಹಾಗಿದ್ದರೆ, ನಿಮ್ಮ ಪ್ರಾಣ ಉಳಿಸಿದ ವೈದ್ಯರಿಗೆ, ಔಷಧ ತಯಾರಿಸಿದ ವಿಜ್ಞಾನಿಗಳಿಗೆ ನೀವು ಕೃತಜ್ಞರಾಗಿಯೇ ಇಲ್ಲವಲ್ಲ?’ ಎಂದು ಕೇಳಿದೆ.
“ಅಲ್ಲ ಸ್ವಾಮೀಜಿ, ನಾನು ಬದುಕುವುದೇ ಡೌಟು ಎನ್ನುವಂತೆ ಮಾತನಾಡಿದರಲ್ಲ ಅವರೆಲ್ಲ’ ಅಂದ.

Advertisement

“ಆದರೆ ಅವರು ಪ್ರಯತ್ನಪಟ್ಟು ಗಂಟೆಗಟ್ಟಲೇ ಶ್ರಮಿಸಿ, ತಮ್ಮ ದಶಕಗಳ ವೈದ್ಯಕೀಯ ಅನುಭವವನ್ನು ಧಾರೆ ಎರೆದು ಆಪರೇಷನ್‌ ಮಾಡದೇ ಇರುತ್ತಿದ್ದರೆ… ಲಕ್ಷಾಂತರ ಕೋಟಿ ಹೂಡಿಕೆ ಮಾಡಿ ಸಂಶೋಧಿಸಿದ ಔಷಧಗಳು ನಿಮಗೆ ಸಿಗದೇ ಹೋದರೆ, ನೀವು ಬದುಕುತ್ತಿದ್ದಿರಾ ಹೇಳಿ?’
ಅವರು ನಗುತ್ತಾ ಅಂದರು- “ಅದೂ ನಿಜ. ಆದರೂ…’

ನಾನು ಈ ಮಾತನ್ನು ಬಹಳ ಕೇಳಿದ್ದೇನೆ. ವೈದ್ಯರು ಕೈಚೆಲ್ಲಿದ್ದರು, ಆದರೆ ನಾನೇ ನನ್ನ ಇಚ್ಛಾಶಕ್ತಿಯಿಂದ ಬದುಕುಳಿದೆ, ವೈದ್ಯಕೀಯ ಲೋಕವನ್ನು ದಂಗುಬಡಿಸಿದೆ ಎಂಬ ಧಾಟಿಯಲ್ಲಿ ಅನೇಕರು ವಿತಂಡ ವಾದ ಮಾಡುತ್ತಾರೆ. ಖಂಡಿತ ದೈವ ಭಕ್ತಿ ಮತ್ತು ಇಚ್ಛಾಶಕ್ತಿಯು ನೀವು ಗುಣಮುಖರಾಗುವಲ್ಲಿ ಪಾತ್ರ ವಹಿಸಿರುತ್ತದೆ. ಆದರೆ ಹಾಗೆಂದು, ನಿಮ್ಮನ್ನು ಬದುಕುಳಿಸಲು ಶ್ರಮಿಸಿದವರಿಗೆ ನೀವು ಶ್ರೇಯಸ್ಸು ಕೊಡದೇ, ಕೇವಲ ನಿಮ್ಮ ದೈವ ಭಕ್ತಿಯೇ ನಿಮ್ಮ ಜೀವ ಉಳಿಸಿತು ಎನ್ನುವುದು ಸರಿಯಲ್ಲ.
ಅನೇಕರ ಸಮಸ್ಯೆ ಇದು. ದೇವರೇ ಎಲ್ಲವನ್ನೂ ಮಾಡುತ್ತಾನೆ, ತಮ್ಮ ಸಂಕಷ್ಟಗಳನ್ನು ಪರಿಹರಿಸುತ್ತಾನೆ ಎಂದು ಭಾವಿಸುತ್ತಾರೆ. ಇದರಲ್ಲಿ ತಪ್ಪೇನೂ ಇಲ್ಲ, ಆದರೆ, ಕರ್ಮವನ್ನೇ ಮಾಡದೇ ಫ‌ಲವನ್ನು ನಿರೀಕ್ಷಿಸಿದರೆ ಸಿಗುವುದೇನು? ಹೊಟ್ಟೆ ತುಂಬಾ ಊಟ ದಯಪಾಲಿಸು ದೇವರೇ ಎಂದು ಬೇಡಿದರೆ ಸಿಗುತ್ತದೇನು ಊಟ? ವಿದ್ಯಾರ್ಥಿಗಳಿಗಂತೂ ಪರೀಕ್ಷೆಯ ಹೊತ್ತಲ್ಲಿ ದೈವ ಭಕ್ತಿ ಅಧಿಕ. “ಈ ಒಂದು ಬಾರಿ ಪಾಸು ಮಾಡಿಬಿಡಪ್ಪ ದೇವರೇ, ಮುಂದಿನ ಬಾರಿ ಖಂಡಿತ ಓದುತ್ತೀನಿ’ ಎಂದು ಪ್ರಾರ್ಥಿಸುತ್ತಾರೆ. ನಪಾಸಾದ ತಕ್ಷಣ, “ದೇವರು ಕೈಬಿಟ್ಟ’ ಎನ್ನುತ್ತಾರೆ. ನಾನು ಅವರಿಗೆ ಹೇಳುವುದಿಷ್ಟೆ- “ನೀನು ಪುಸ್ತಕವನ್ನು ಯಾವಾಗ ಕೈಬಿಟ್ಟೆಯೋ, ಆವಾಗಲೇ ದೇವರೂ ನಿನ್ನ ಕೈಬಿಡುತ್ತಾನೆ. ನೀನು ಪುಸ್ತಕವನ್ನು ಹಿಡಿದರೆ, ದೇವರೂ ನಿನ್ನ ಕೈ ಹಿಡಿಯುತ್ತಾನೆ.’

ಒಂದು ಸುಂದರವಾದ ದೇವರ ಮೂರ್ತಿ, ಮಂದಿರದ ಕೆತ್ತನೆಯಲ್ಲೂ ಮಾನವ ಪ್ರಯತ್ನವಿರುತ್ತದೆ. ನಂತರ ಜಪತಪಾದಿಗಳ ಮೂಲಕ ಮೂರ್ತಿಯಲ್ಲಿ ಪ್ರಾಣಪ್ರತಿಷ್ಠೆ ಮಾಡಲಾಗುತ್ತದೆ. ಅಂದರೆ, ದೇವರ ಗುಡಿ ಕೂಡ ಮಾನವ ಪ್ರಯತ್ನವಿಲ್ಲದೇ ನಿರ್ಮಾಣವಾಗುವುದಿಲ್ಲ. ದೇವರ ಭಕ್ತಿ ಎನ್ನುವುದು ಅತ್ಯವಶ್ಯ ಕವೇ. ಆದರೆ, ಅದು ಜವಾಬ್ದಾರಿಗಳಿಂದ ಪಲಾಯನ ಮಾಡುವ ಮಾರ್ಗವಾ ಗದಿರಲಿ. “ನಾನು ಮಹಾಭಕ್ತ’ ಎಂಬ ಅಹಂ ಬೆಳೆಯಲು ಕಾರಣವಾಗದಿರಲಿ. ಅದು ಮುನ್ನುಗ್ಗುವುದಕ್ಕೆ, ಬಿದ್ದರೆ ಎದ್ದುನಿಲ್ಲುವುದಕ್ಕೆ ಪ್ರೇರಕ ಶಕ್ತಿಯಾಗಲಿ.

ಜೀವನದಲ್ಲಿ ಸಮಸ್ಯೆಗಳು ಎದುರಾದಾಗ, ಅದನ್ನು ಎದುರಿಸುವ ಶಕ್ತಿ ಕೊಡಪ್ಪ ದೇವರೇ ಎಂದು ಆತನಲ್ಲಿ ಪ್ರಾರ್ಥಿಸಿ, ನಮ್ಮ ಕೈಲಾದ ಎಲ್ಲಾ ಪ್ರಯತ್ನವನ್ನೂ ಮಾಡಬೇಕು. ದೇವರು ಏನೂ ಕೊಡಲಿಲ್ಲ ಎಂದು ಗೋಳಾಡಿದರೆ ಏನು ಫ‌ಲ? ನಮಗೆ ಇಂಥ ಅತ್ಯಮೂಲ್ಯ ಜೀವನವನ್ನೇ ಕೊಟ್ಟಿಲ್ಲವೇನು ಆತ?

– ಸ್ವಾಮಿ ಜ್ಞಾನದಾತಾರ

Advertisement

Udayavani is now on Telegram. Click here to join our channel and stay updated with the latest news.

Next