ಕೊಲ್ಕತ್ತಾ: ಲಾಕ್ ಡೌನ್ ಹಿನ್ನಲೆಯಲ್ಲಿ ಅಗತ್ಯ ವಸ್ತುಗಳನ್ನು ತರಲೆಂದು ಮನೆಯಿಂದ ಹೊರಗೆ ಹೋಗುವ ಸಂದರ್ಭದಲ್ಲಿ ಮಾಸ್ಕ್ ಧರಿಸಲು ನಿರಾಕರಿಸಿದಕ್ಕೆ ತಂದೆಯೇ ವಿಶೇಷ ಚೇತನ ಮಗನನ್ನು ಹತ್ಯೆಗೈದ ಘಟನೆ ಶನಿವಾರ ಉತ್ತರ ಕೊಲ್ಕತ್ತಾದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಹತ್ಯೆಗೈದ ಆರೋಪಿಯನ್ನು ಬನ್ಸಿಧರ್ ಮಲ್ಲಿಕ್ (75) ಎಂದು ಗುರುತಿಸಲಾಗಿದ್ದು ಆತನ ಮಗ ಶಿರ್ಷೆಂದು ಮಲ್ಲಿಕ್ (45) ವಿಕಲಚೇತನನಾಗಿದ್ದ.
ಮಗನನ್ನು ಹತ್ಯೆಗೈದ ನಂತರ ಬನ್ಸಿಧರ್ ಮಲ್ಲಿಕ್ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಶನಿವಾರ ಸಂಜೆ ಸುಮಾರು 7 ಗಂಟೆಯ ವೇಳೆಗೆ ಆರೋಪಿ ಬನ್ಶಿಧರ್ ಮಲ್ಲಿಕ್ ಶ್ಯಾಂಪುಕೂರ್ ಪೊಲೀಸ್ ಠಾಣೆಗೆ ಶರಣಾಗಿದ್ದು, ಸಂಜೆ 5:30 ರ ಸುಮಾರಿಗೆ ತನ್ನ ಮಗ ಸಿರ್ಷೆಂದು ಮಲ್ಲಿಕ್‌ನನ್ನು ಕತ್ತು ಹಿಸುಕಿ ಹತ್ಯೆಗೈದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಕೋಲ್ಕತಾ ಪೊಲೀಸ್ ಉನ್ನತ ಅಧಿಕಾರಿ ತಿಳಿಸಿದ್ದಾರೆ.
ತನಿಖಾ ಅಧಿಕಾರಿಗಳ ಪ್ರಕಾರ, ಆರೋಪಿ ತನ್ನ ಮಗನೊಂದಿಗೆ ಸೌಹಾರ್ದಯುತ ಸಂಬಂಧವನ್ನು ಹೊಂದಿರಲಿಲ್ಲ. ಮಾತ್ರವಲ್ಲದೆ ಅವರು ನಿರಂತರವಾಗಿ ಜಗಳವಾಡುತ್ತಿದ್ದರು. ತಂದೆ ಖಾಸಗಿ ಸಂಸ್ಥೆಯ ನಿವೃತ್ತ ಉದ್ಯೋಗಿಯಾಗಿದ್ದರೆ, ಅವನ ಮಗ ನಿರುದ್ಯೋಗಿಯಾಗಿದ್ದರು. ಅದರ ಜೊತೆಗೆ ಮಗ ಬಾಲ್ಯದಿಂದಲೂ ದೈಹಿಕ ವಿಕಲಾಂಗತೆಯಿಂದ ಬಳಲುತ್ತಿದ್ದರು ಎಂದು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಮಾಸ್ಕ್ ಧರಿಸುವ ವಿಚಾರಕ್ಕೆ ಅಗಿಂದ್ದಾಗೆ ಕಲಹಗಳಾಗುತ್ತಿದ್ದವು. ಪ್ರತಿ ಬಾರಿ ಮನೆಯಿಂದ ಹೊರಗಡೆ ತೆರಳುವಾಗ ತಂದೆ ಮಗನಿಗೆ ಮಾಸ್ಕ್ ಧರಿಸುವಂತೆ ಹೇಳುತ್ತಿದ್ದರು. ಆದರೆ ಮಗ ಅದನ್ನು ತಿರಸ್ಕರಿಸುತ್ತಾನೆ. ಈ ಜಗಳ ವಿಕೊಪಕ್ಕೆ ತಿರುಗಿ ಶನಿವಾರ ಮಗನ ಹತ್ಯೆಯಲ್ಲಿ ಅಂತ್ಯವಾಗಿದೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡು ಸ್ಥಳೀಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.