ಹೊಳಲ್ಕೆರೆ: ಭಾರತದ ಎಲ್ಲಾ ಪ್ರಜೆಗಳಿಗೂ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ ದೊರಕಿಸಿಕೊಡುವುದೇ ಸಂವಿಧಾನದ ಗುರಿ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ ಹೇಳಿದರು.
ಪಟ್ಟಣದ ವಕೀಲರ ಸಂಘದ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ವತಿಯಿಂದ ಶನಿವಾರ ಏರ್ಪಡಿಸಿದ್ದ ಕಾನೂನು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜವಾದಿ ಸಮಾಜದಲ್ಲಿ ಸ್ವಾತಂತ್ರ್ಯಾ ಎಂಬ ಪದ ಕೇವಲ ಘೋಷಣೆಯಾಗಿ ಉಳಿಯಬಾರದು. ಸ್ವಾತಂತ್ರ್ಯಾವೆಂದರೆ ಸಮೃದ್ಧ ಜೀವನಾವಕಾಶ ಎಂದರ್ಥ. ಪ್ರತಿಯೊಬ್ಬರ ಸಾಂಸ್ಕೃತಿಕ, ಬೌದ್ಧಿಕ ಹಾಗೂ ಭೌತಿಕ ಬೆಳವಣಿಗೆಯೇ ನಿಜವಾದ ಸ್ವಾತಂತ್ರ್ಯಾ. ವಕೀಲರು ಸತತ ಆಧ್ಯಯನದಲ್ಲಿ ತೊಡಗಬೇಕು. ಸಾಕ್ಷ್ಯಾ ಅಧಿನಿಯಮದಲ್ಲಿರುವ ಮಹತ್ವವನ್ನು ಅರಿತುಕೊಳ್ಳಬೇಕು. ಆಗ ಮಾತ್ರ ಉತ್ತಮ ವಕೀಲರಾಗಿ ಹೊರಹೊಮ್ಮಲು ಸಾಧ್ಯ ಎಂದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಬಿ. ವಸ್ತ್ರಮಠ ಮಾತನಾಡಿ, ನ್ಯಾಯಮೂರ್ತಿ ಬಿಲ್ಲಪ್ಪ ಅವರು ನ್ಯಾಯಾಂಗದ ಮಹತ್ವವನ್ನು ತಿಳಿಸಿಕೊಡುತ್ತಿದ್ದಾರೆ. ನಿವೃತ್ತಿ ಹೊಂದಿದ್ದರೂ ಜಿಲ್ಲೆಯಲ್ಲಿ ನಡೆಯುವ ಕಾನೂನು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾರ್ಗದರ್ಶನ
ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ವಕೀಲರ ಸಂಘದ ಅಧ್ಯಕ್ಷ ಜಿ.ಈ. ರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶೆ ಪ್ರೇಮಾ ವಸಂತ ರಾವ್ ಪವಾರ್, ಕಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ವಿ. ರವಿಕುಮಾರ್, ಹಿರಿಯ ವಕೀಲರಾದ ಎಸ್.ಎಂ. ಆನಂದಮೂರ್ತಿ, ಜಿ.
ಗೋವಿಂದರಾಜ್, ಎಂ. ಶಿವಶಂಕರ್, ವಕೀಲರ ಸಂಘದ ಉಪಾಧ್ಯಕ್ಷ ಆರ್. ಜಗದೀಶ್, ಕಾರ್ಯದರ್ಶಿ ಪ್ರದೀಪ್ ಕುಮಾರ್ ಹಾಗೂ ವಕೀಲರ ಸಂಘದ ಸದಸ್ಯರು ಇದ್ದರು. ಬಿ.ಎನ್. ಪ್ರಶಾಂತ್ ಸ್ವಾಗತಿಸಿದರು. ಎಸ್. ವೇದಮೂರ್ತಿ ನಿರೂಪಿಸಿದರು. ಇದೇ ಸಂದರ್ಭದಲ್ಲಿ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಬರೆದಿರುವ “ಸಂವಿಧಾನ ಓದು’ ಪುಸ್ತಕವನ್ನು ಉಚಿತವಾಗಿ ವಿತರಿಸಲಾಯಿತು.