ಮಂಗಳೂರು: ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿ ಮೇಲೆ ಸಹಕೈದಿಗಳು ಹಲ್ಲೆ ನಡೆಸಿ ಮಾನಸಿಕ ಹಿಂಸೆ ನೀಡಿ, ಆತನ ತಂದೆಯಿಂದ 15 ಲ.ರೂ. ವಸೂಲಿ ಮಾಡಿರುವ ಘಟನೆ ನಡೆದಿದೆ.
ವಿಚಾರಣಾಧೀನ ಕೈದಿ ಸಿರಿನ್ ಮಧುಸೂದನ್ ಹಣ ಕಳೆದುಕೊಂಡ ವನು. ಕೈದಿಗಳಾದ ತಿಲಕ್, ಮಿಥುನ್, ಶಿವು, ನಿಖೀಲ್, ರಾಜು, ಚರಣ್ ಸಹಿತ 8 ಮಂದಿ ಕೃತ್ಯದಲ್ಲಿ ಶಾಮೀಲಾಗಿದ್ದಾರೆಂದು ತಿಳಿದು ಬಂದಿದೆ.
ಐಒಬಿ ಬ್ಯಾಂಕ್ ಖಾತೆಯಿಂದ ಕೆಆರ್‌ಐಡಿಎಲ್‌ಗೆ ಸೇರಿದ 55 ಕೋ. ರೂ. ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿರವ ಬ್ಯಾಂಕಿನ ಕುಳಾಯಿ ಶಾಖೆ ಮ್ಯಾನೇಜರ್ ಸಿರಿನ್ ಮಧುಸೂದನ್ ಮಂಗಳೂರು ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಈ ಸೆಲ್‌ನಲ್ಲಿಯೇ ಕೋಡಿಕೆರೆ ಗ್ಯಾಂಗ್‌ನ ತಿಲಕ್ ಮತ್ತಿತರರಿದ್ದು, ಹಣಕ್ಕಾಗಿ ಸಿರಿನ್‌ಗೆ ಬೇಡಿಕೆಯಿಟ್ಟಿದ್ದರು. ಹಣ ಕೊಡಲು ನಿರಾಕರಿಸಿದಾಗ ಆತನಿಗೆ ದೈಹಿಕವಾಗಿ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಕೆಆರ್‌ಐಡಿಎಲ್ ಸಂಸ್ಥೆಗೆ ವಂಚಿಸಿ ಹಣದಲ್ಲಿ ತಮಗೂ ಪಾಲು ನೀಡುವಂತೆ ಒತ್ತಾಯಿಸಿ ಸಿರಿನ್ ಮೇಲೆ ನಿರಂತರ ಹಲ್ಲೆ ನಡೆಸುತ್ತಿದ್ದರು. ರ್ಯಾಗಿಂಗ್ ಮಾಡಿ, ಜೈಲಿನ ಒಳಗಿಂದಲೇ ಮೊಬೈಲ್ ಮೂಲಕ ಸಿರಿನ್ ಪೋಷಕರಿಗೆ ಕರೆ ಮಾಡಿ ಹಣ ತರುವಂತೆ ಹೇಳಿದ್ದಾರೆ. ಈ ಬೆದರಿಕೆಗೆ ಮಣಿದ ಪೋಷಕರು 3 ಕಂತಿನಲ್ಲಿ 15 ಲ. ರೂ. ನೀಡಿರುವುದು ತಿಳಿದು ಬಂದಿದೆ. ಈ ಬಗ್ಗೆ ಸಿರಿನ್ ಪೋಷಕರು ಬರ್ಕೆ ಠಾಣೆಗೆ ದೂರು ನೀಡಿದ್ದು, ವಿಚಾರಣೆ ನಡೆಯುತ್ತಿದೆ.