Advertisement

ಎಲ್ಲಾ ಬೆಳಕಿನಾಟವಯ್ಯಾ

10:30 AM Jan 22, 2020 | mahesh |

ಫೋಟೋ ಎಂದರೆ ಬೆಳಕು. ಗ್ರಫಿ ಎಂದರೆ ಬರೆಯುವುದು. ಬೆಳಕು ವಸ್ತುವಿನ ಮೇಲೆ ಬಿದ್ದಾಗ, ನೋಡುಗನ ಕಣ್ಣಿಗೆ ಕಾಣಿಸುವಂತೆ, ಹಾಗೆ ಕಂಡದ್ದನ್ನು ದೃಶ್ಯವಾಗಿ ದಾಖಲಿಸುವ ತಂತ್ರಜ್ಞಾನವೇ ಫೋಟೋಗ್ರಫಿ. ಛಾಯಾಗ್ರಹಣ ಎಂಬುದು ಹಿಂದಿಯಿಂದ ಬಂದ ಪ್ರಚಲಿತ ಹೆಸರು. ಆದರೆ ಕನ್ನಡದಲ್ಲಿ ಅದು ಬೆಳಕಿನ ಬರಹ ಎಂದಿದ್ದರೆ ಹೆಚ್ಚು ಸೂಕ್ತ.

Advertisement

ಇರಲಿ ಬಿಡಿ. ಬೆಳಕಿನ ಮೂಲ ಹಲವು. ಸಹಜ ಸೂರ್ಯರಶ್ಮಿ, ಚಂದ್ರಕಿರಣ, ಬೆಂಕಿ, ಮೇಣದಬತ್ತಿ, ವಿವಿಧ ಬಗೆಯ ದೀಪಗಳು, ವಿದ್ಯುತ್‌ ದೀಪಗಳು, ಫ್ಲಾಶ್‌ ಲೈಟ್, ಇತ್ಯಾದಿ. ಅವುಗಳಲ್ಲಿ ಕೆಲವು ಪ್ರಖರವಾಗಿ ನೇರವಾದದ್ದು (Direct & Incident) , ಮಂದವಾದ ಪ್ರಭೆಯುಳ್ಳದ್ದು (Diff used), ಪ್ರಮುಖ ಬೆಳಕು ( Key Light), ಪ್ರತಿಫ‌ಲಿತ ( Refl ected ),

ಹಿಂಬದಿಯಿಂದ ಬೆಳಗಿದ್ದು ( Back lighting), ಓರೆಯಾಗಿದ್ದು (side), ನೆರಳು-ನಿಯಂತ್ರಕ ಹರವು (Shadow-fi llinm), ಪರಿಣಾಮಕಾರಿ, ಮುನ್ನೆಲೆ, ಹಿನ್ನೆಲೆಯ ಬೆಳಕು (Foreground & Background) , ಮೇಲಿನಿಂದ ಬೀಳುವ ಬೆಳಕು ( Top Lighting) )ಒಟ್ಟಾರೆ ಎಲ್ಲೆಡೆಯಿಂದ ವಾತಾವರಣದ ಸಹಜ ಬೆಳಕು ( Ambient ) ಇತರೆ ಬಗೆಯವು. ಅವುಗಳೆಲ್ಲದರಲ್ಲೂ ಒಂದೊಂದು ವಿಶೇಷ ಗುಣವಿದ್ದದ್ದೇ. ಸಂದರ್ಭಕ್ಕೆ ಹೊಂದುವ ರೀತಿ ಅವನ್ನು ಬಳಸುವ ಚಾಕಚಕ್ಯತೆಯು ಉತ್ತಮವಾಗಿ ಫೋಟೋ ತೆಗೆಯಲು ಅವಶ್ಯಕ.

ಈ ಬಾರಿ, ಹಿಂಬದಿ ಬೆಳಕು ಮತ್ತು ನೆರಳು ನಿಯಂತ್ರಕ ರೀತಿಯನ್ನು ನೋಡೋಣ :

ಮಕ್ಕಳ ಫೋಟೋ ಎಂದರೆ ಕ್ಯಾಮೆರಾ ಹಿಡಿದವರಿಗೆ ಎಲ್ಲಿಲ್ಲದ ಖುಷಿ. ಆಟ ಪಾಟಗಳಲ್ಲಿ ತೊಡಗಿರುವ ಅವರ ಮುಖಭಾವಗಳು ಸೂಸುವ ಸಾವಿರ ಸ್ತರ, ಸ್ನಿಗ್ದ ಸೌಂದರ್ಯ, ಲಾಸ್ಯ, ಅಚ್ಚರಿ, ಕೌತುಕ, ಸಂತಸ, ಕ್ಷಣ ಕ್ಷಣಕ್ಕೂ ಬದಲಾಗುವ ಭಾವಗಳ ಮಿಂಚಿನ ನೋಟಗಳು. ಇವನ್ನು ಹಿಡಿದಿಡಲು ಬೆಳಕಿನ ಮೂಲಗಳ ಪರಿಜ್ಞಾನ ಸಹಕಾರಿಯಾಗುತ್ತದೆ. ಶಿರಸಿ ಬಳಿಯ ನಾಗೇಂದ್ರ ಮುತ್ಮರ್ಡು ತಮ್ಮ ಮನೆಯ ಹಿಂಬದಿಯ ಹಳ್ಳದ ಬದಿ ಹಸಿರು ಹೊದ್ದ ಮರಗಳ ದಂಡೆಯ ಮೇಲೆ ಚಿಣ್ಣರಿಬ್ಬರ ಸಹಜ ಆಟ-ಪಾಟದ ಕ್ಷಣವನ್ನು ದೂರದಿಂದ ಜೂಂ ಲೆನ್ಸ್‌ ಕ್ಯಾಮೆರಾ ಬಳಸಿ ಸೆರೆ ಹಿಡಿದಿರುವುದು ಇದಕ್ಕೊಂದು ಸಮರ್ಪಕ ಮಾದರಿ.

Advertisement

ಮಕ್ಕಳಿಗೆ ಅರಿವಿಲ್ಲದಂತೆಯೇ ತೆಗೆದ ಚಿತ್ರ ಇದಲ್ಲದಿರಬಹುದು. ಸೂಕ್ಷ್ಮವಾಗಿ ಗಮನಿಸಿ, ಬೆಳಕಿನಾಟಕ್ಕೆ ಹೊಂದುವ ಸ್ಥಳವನ್ನು, ಸೂರ್ಯಕಿರಣಗಳು ಹಿಂಬದಿಯಿಂದ ಓರೆಯಾಗಿ ಬೀಳುವ ಸಮಯವನ್ನೂ ಅಭ್ಯಸಿಸಿಕೊಂಡಿದ್ದು ಛಾಯಾಗ್ರಾಹಕ ಮಾಡಿಕೊಳ್ಳಬೇಕಾದ ಪೂರ್ವ ತಯಾರಿ. ದಟ್ಟ ಕಾಡಿನ ಗಾಢ ಹಸಿರು ಹಿನ್ನೆಲೆ, ಮರದ ಕೊಂಬೆಗಳ ಹಿಂಬದಿಯಿಂದ ಬೆಳಕುಬಿದ್ದು ಹೊಳಪಿನಿಂದ ಬಣ್ಣದ ಎಲೆಗಳು ಕೂಡುವ ಸಮಯಕ್ಕೆ ತಾಳೆನೋಡಿ, ಕೈಯ್ಯಲ್ಲಿ ಹಿಡಿದಿರುವ ಪುಸ್ತಕಗಳ ಬಿಳಿ ಹಾಳೆಗಳ ಮೇಲೆ ಬಿದ್ದ ಸೂರ್ಯನ ಬೆಳಕು ಪ್ರತಿಫ‌ಲನಗೊಂಡು ನೆರಳಿನಿಂದ ಮರೆಯಾಗಬಹುದಾದ ಮಕ್ಕಳ ಮುಖದ ಭಾಗಗಳನ್ನು ಪೂರಕವಾಗಿ ಬೆಳಗುತ್ತಿರುವಂತೆ ಎಚ್ಚರವಹಿಸಿರುವುದೂ ಬೆಳಕಿನ ಮೌಲ್ಯವನ್ನು ಇಮ್ಮಡಿಸಿದೆ. ಇಡೀ ದೃಶ್ಯವನ್ನೇ ಕಲಾತ್ಮಕವಾಗಿ ಸಂಯೋಜಿಸಿ, ಅನನ್ಯ ಕ್ಷಣವೊಂದನ್ನು ಸೆರೆಹಿಡಿದಿರುವುದು ಛಾಯಾಗ್ರಾಹಕರ ಸಂಯೋಜನಾ ಚತುರತೆ, ಸಮಯಪ್ರಜ್ಞೆಗೆ ಸಾಕ್ಷಿಯಾಗಿವೆ.

ಯಕ್ಷಲೋಕದಿಂದ ಬಂದ.. ಚಿತ್ರ – ಕೆ.ಎಸ್‌.ರಾಜಾರಾಮ್, 50 ಎಂ.ಎಂ. ಲೆನ್ಸ್‌ , ಅಪರ್ಚರ್‌ 11, ಕವಾಟ ವೇಗ 1/ 125 ಸೆಕೆಂಡ್‌, ಐ.ಎಸ್‌.ಒ- 200, ಫ್ಲಾಶ್‌ ಬಳಸಿಲ್ಲ.

ಮತ್ತೂಂದು ಕಪ್ಪು ಬಿಳುಪು ಚಿತ್ರ 3 ದಶಕಗಳ ಹಿಂದಿನದು. ಮುಂಜಾವಿನಲ್ಲೆದ್ದು ಹಿತ್ತಲಿನ ಮಂದಾರ ಗಿಡದ ಮೇಲೆ ಹರಿದಾಡುತ್ತಿದ್ದ ಚಿಟ್ಟೆಗಳನ್ನು ಕ್ಯಾಮೆರಾದಲ್ಲಿ ಹಿಡಿಯಲು ನಾನು ತವಕಿಸುತ್ತಿದ್ದಾಗ ಓಡಿ ಬಂದ ಮಗನನ್ನು ಚಿಟ್ಟೆಗಳು ಹಾರಿ ಹೋದಾವೆಂದು ಕೂಗಿ ತಡಿಹಿಡಿದಿದ್ದೆ. ಆಗ ನನಗೆ ಕಂಡಿದ್ದು ಚಿಟ್ಟೆಗಳಾಗಿರಲಿಲ್ಲ. ಆ ಮಗು ಶಿಲಾ ಪ್ರತಿಮೆಯಂತೆ ನಿಂತ ಭಂಗಿ. ಅದೂ, ಹಿಂಬದಿಯಿಂದ ಬೀಳುತ್ತಿದ್ದ ಸೂರ್ಯನ ಬೆಳಕಿನಲ್ಲಿ ಅವನ ಮೈ ಅಂಚುಗಳೆಲ್ಲಾ ಮಿಂದೆದಿದ್ದವು. ಮಿಂಚಿಸುತ್ತಿದ್ದ ಮಂದಾರ ಎಲೆಗಳೂ ಅವನ ಸುತ್ತುವರಿದು ಮೋಹಕವಾಗಿ ಕಾಣುತ್ತಿದ್ದವು. ಸಾಲದ್ದಕ್ಕೆ ಆತನೆದುರು ಕೆಲವೇ ಅಡಿ ಅಂತರದಲ್ಲಿ ಸೂರ್ಯನ ಬಿಸಿಲಿಗೆ ಮೈಯೊಡ್ಡಿದ್ದ ಉದ್ದನೆಯ ಹಗ್ಗವೊಂದಕ್ಕೆ ಒಣಗಲು ಹರವಿದ್ದ ಅಜ್ಜನ ಬಿಳಿ ಪಂಚೆಯೊಂದು ಪ್ರತಿಫ‌ಲನದಂತೆ ನೆರಳು-ನಿಯಂತ್ರಕ ಬೆಳಕಿನ ಮೂಲವಾಗಿ ಸಾಕಷ್ಟು ಬೆಳಕನ್ನು ಮಗುವಿನ ಮೈ- ಮುಖದ ನೆರಳಿನ ಭಾಗಗಳನ್ನೂ ಬೆಳಗಿಸಿತ್ತು. ಇಲ್ಲಿ ಕೂಡ ಹಿಂಭಾಗದಿಂದ ಬೀಳುವ ಬೆಳಕು ಮತ್ತು ಅದರಿಂದ ಉಂಟಾಗುವ ಕಡು ನೆರಳಿನ ನಿಯಂತ್ರಣದ ನಿದರ್ಶನ ಸಿಗುತ್ತದೆ.

ಓದುವ ಆಟ ಚಿತ್ರ- ನಾಗೇಂದ್ರ ಮುತ್ಮರ್ಡು, 200 ಎಂ.ಎಂ. ಜೂಮ್‌ ಲೆನ್ಸ್‌ ನಲ್ಲಿ ಅಪರ್ಚರ್‌ 5.6, ಕವಾಟ ವೇಗ 1 / 250 ಸೆಕೆಂಡ್‌, ಐ.ಎಸ್‌.ಒ- 200, ಫ್ಲಾಶ್‌ ಬಳಸಿಲ್ಲ.

ಕೆ.ಎಸ್‌.ರಾಜಾರಾಮ್‌

Advertisement

Udayavani is now on Telegram. Click here to join our channel and stay updated with the latest news.

Next