ನೆನಪಿನ ಪಯಣ. ನೆನಪು ಎಂಬುದು ಮೂರಕ್ಷರವೇ ಆದರು ಅದರ ಒಳಾರ್ಥ ಸಾವಿರಾರು ಬಗೆಯಲ್ಲಿದೆ. ಒಂದೊಂದು ಕ್ಷಣದಲ್ಲಿ ಕಳೆದು ಹೋದಂತಹ ಕ್ಷಣಗಳನ್ನು ಮೆಲುಕು ಹಾಕುವುದೇ ಈ ನೆನಪು ಎಂಬುದು.
ಈ ನೆನಪಿನ ಕ್ಷಣಗಳನೆಲ್ಲಾ ನೆನೆಸಿಕೊಂಡಾಗ ಕಣ್ಣಂಚಿನಲ್ಲಿ ನೀರು ಬರುವುದು ಸಹಜವೇ. ಆದರೆ ಕಣ್ತುಂಬಿಕೊಂಡ ನೀರು ಸಂತೋಷದ ವಿಷಯಗಳಿಗೆ ಆಗಿರಬಹುದು ಅಥವಾ ದುಃಖದ ವಿಷಯಗಳಿಗೂ ಆಗಿರಬಹುದು.
ನಮ್ಮೆಲ್ಲರಲ್ಲೂ ನಮ್ಮ ಬಾಲ್ಯದಿಂದ ಹಿಡಿದು ಇಲ್ಲಿಯವರೆಗಿನ ಜೀವನದ ಹಲವು ನೆನಪುಗಳಿವೆ. ಅದು ಸಿಹಿ ನೆನಪೇ ಆಗಿರಬಹುದು ಅಥವಾ ಕಹಿ ನೆನಪುಗಳೇ ಇರಬಹುದು. ಆದರೆ ಕಹಿ ನೆನಪುಗಳಿಂದ ದೂರ ಸರಿದು ಸಿಹಿ ನೆನಪುಗಳನ್ನು ನಮ್ಮಲ್ಲಿರಿಸಿ ಮುಂದಿನ ಒಳ್ಳೆಯ ಕ್ಷಣಕ್ಕಾಗಿ ನಮ್ಮ ನೆನಪಿನ ಬುಟ್ಟಿಯನ್ನು ತುಂಬಿಕೊಳ್ಳುತ್ತಾ ಜೀವನ ಮುನ್ನಡೆಸುತ್ತಾ ಹೋಗಬೇಕು.
ನಮ್ಮಿಂದ ಇನ್ನೇನು ಮಾಡಲು ಸಾಧ್ಯವಿಲ್ಲ ಎಂದು ಬೇಸರದಿಂದ ಕುಳಿತಾಗ ಈ ಹಿಂದೆ ಸಾಗಿ ಬಂದ ಜೀವನದ ನೆನಪು ನಮ್ಮ ಕಣ್ಣೆದುರು ಬರಬಹುದು. ಏನೂ ಬೇಡ ಎಂದು ಸುಮ್ಮನಾಗಿದ್ದಾಗ ಈ ನೆನಪು ಎಂಬುದು ನಾವು ಧೈರ್ಯದಿಂದ ಸಾಗಿ ಬಂದ ಕ್ಷಣವನ್ನು ಕಣ್ಣೆದುರು ತಂದು ಬಿಡುತ್ತದೆ. ಸುಮ್ಮನಾಗಿದ್ದ ನಮ್ಮಲ್ಲಿ ಈ ನೆನಪು ಹೊಸ ಚೈತನ್ಯ ಮೂಡುವಂತೆ ಮಾಡುತ್ತದೆ. ಸಾಧಿಸುವ ಛಲವನ್ನು ನೆನಪಿಸಿ ನಮ್ಮಲ್ಲಿ ಹುರಿದುಂಬಿಸುತ್ತದೆ.
ಅದಲ್ಲದೆ ಜತೆ ಕಳೆದ ಕ್ಷಣದ ನೆನಪು, ಬೇಸರದಿಂದ ಕಳೆದ ಕ್ಷಣ, ಕಾರಣವಿಲ್ಲದೆ ಸ್ನೇಹಿತರಿಂದ ದೂರವಾದ ನೆನಪು, ಚೆನ್ನಾಗಿ ನಂಬಿಕೆಯಿಂದ ಕೂಡಿದ್ದ ಸ್ನೇಹ ಒಂದೇ ಕ್ಷಣಾರ್ಧದಲ್ಲಿ ಛಿದ್ರ-ಛಿದ್ರವಾಗಿ ದೂರವಾದ ನೆನಪು, ಏನು ತಪ್ಪು ಮಾಡದೆ ಶಿಕ್ಷೆ ಪಡೆದ ನೆನಪು, ಅದರ ಜತೆ ಸಿಕ್ಕ ಅವಕಾಶಗಳಿಂದ ವಂಚಿತರಾದ ನೆನಪು ಈ ರೀತಿಯ ಕಹಿ ನೆನಪುಗಳು ಜತೆಯಲ್ಲಿದ್ದರೆ ಸಾಧಿಸುವ ಛಲ ಎಂಬುದು ನಮ್ಮಲ್ಲಿ ಇರುತ್ತದೆ. ಇದು ಕಹಿ ನೆನಪುಗಳೇ ಆದರು ಜೀವನಕ್ಕೆ ಮಾರ್ಗ ತೋರಿಸುವಂತಹವು.
ಒಳ್ಳೊಳ್ಳೆ ಸ್ನೇಹಿತರ ಜತೆ ಕಳೆದ ಸುಂದರ ಕ್ಷಣ, ಅಪ್ಪ ಅಮ್ಮನ ಜತೆ ಪ್ರೀತಿಯಿಂದ ಕಳೆದ, ಅಕ್ಕ ತಂಗಿಯ ಜತೆ ಜಗಳವಾಡಿದ, ಶಿಕ್ಷಕರಿಂದ ಒಳ್ಳೆಯ ವಿದ್ಯಾರ್ಥಿ ಎಂದು ಎನಿಸಿಕೊಂಡ ಕ್ಷಣ ಇವೆಲ್ಲವೂ ಜೀವನದ ಸಿಹಿ ನೆನಪುಗಳು. ಈ ಸಿಹಿ ನೆನಪುಗಳೆಂಬುದು ಒಂದು ಸುಂದರವಾದ ಪ್ರಪಂಚದಲ್ಲಿ ನಾವು ಕಳೆದ ಈ ಕ್ಷಣದ ನೆನಪು ಎನ್ನಬಹುದು.
ಕಹಿ ನೆನಪು ಎಂಬುದು ಆವಾಗಾವಾಗ ಮರುಕಳಿಸುತ್ತಿರುತ್ತದೆ. ಏಕೆಂದರೆ ಇವೇ ನಮ್ಮ ಜೀವನದ ಪಯಣದಲ್ಲಿ ಇನ್ನೊಂದು ಹೆಜ್ಜೆ ಮುಂದೆ ಇಡಲು ಸಹಾಯ ಮಾಡುವಂತಹದ್ದು.
ಈ ಎಲ್ಲ ಕಾರಣದಿಂದ ನೆನಪುಗಳ ಸರಮಾಲೆ ಎಂಬುವುದು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಬಹಳ ಮುಖ್ಯ. ಈ ರೀತಿಯಿಂದಲೇ ಕ್ಷಣದೊಂದಿಗೆ ನೆನಪುಗಳ ಮರುಕಳಿಸುತ್ತಾ ಜೀವನದ ಪಯಣವನ್ನು ತುಂಬಾ ಸಂಭ್ರಮದಿಂದ ಕಳೆಯೋಣ.
-ಪ್ರತೀಕ್ಷಾ ರಾವ್ ಶಿರ್ಲಾಲ್
ಸರಕಾರಿ ಪ್ರಥಮ ದರ್ಜೆ
ಕಾಲೇಜು ಕಾರ್ಕಳ