ದಿನವಿಡೀ ಬೆಳಗಿದ ಸೂರ್ಯ ಮುಳುಗುತ್ತಿದ್ದಂತೆಯೇ ಝಗಜಗಿಸುವ ಕೃತಕ ದೀಪಗಳು ನಗರ ಪ್ರದೇಶದಲ್ಲಿ ಕೆಲಸ ಶುರುಮಾಡುವುದು ಸರಿಯಷ್ಟೇ. ಬಹು ಎತ್ತರದ ಕಟ್ಟಡದ ಮೇಲಿನಿಂದ ನೋಡಿದರಂತೂ, ತೆಳು ನೀಲವರ್ಣದ ಆಗಸದ ಹಿನ್ನೆಲೆಯಲ್ಲಿ ಆ ಭೂದೃಶ್ಯ ( Cityscape) ಮತ್ತೂಂದು ಲೋಕವನ್ನೇ ಸೃಷ್ಟಿಸುವುದಂತೂ ಸತ್ಯ. ಉದ್ದುದ್ದ ದೊಡ್ಡ ರಸ್ತೆಗಳಲ್ಲಿ ಚಲಿಸುವ ವಾಹನಗಳ ಮುಂಬದಿಯ ಬಿಳಿ ಬೆಳಕು , ಹಿಂಬದಿಯ ಕೆಂಪು- ಹಳದಿ ಬೆಳಕು ಅಲ್ಲಲ್ಲಿ ನಿಯಾನ್ ಅಥವಾ ಎಲ್ಇಡಿ ಬೃಹತ್ ದೀಪಗಳ ವರ್ಣಮಯ ಪ್ರಭೆಯಿಂದ ಬೆಳಗುವ ವಿವಿಧ ವಾಸ್ತು ವಿಶೇಷ ನಿರ್ಮಿತ ವಾಣಿಜ್ಯ ಕಟ್ಟಡಗಳೂ , ಮರಗಿಡಗಳೂ ಹಿನ್ನೆಲೆಗೆ ಪುಷ್ಟಿನೀಡುತ್ತಿರುತ್ತವೆ. ಇಂಥ ಸದಾವಕಾಶವನ್ನು ಕಲಾತ್ಮಕ ಪ್ರಜ್ಞೆಯುಳ್ಳ ಛಾಯಾಗ್ರಾಹಕರು ತಪ್ಪಿಸಿಕೊಳ್ಳಬಾರದು. ಬನ್ನಿ, ಕ್ಯಾಮೆರಾ ಜೊತೆ ಅನನ್ಯವಾದ ಚಿತ್ರಣ ಮಾಡೋದು ಹೇಗೆ ಎಂದು ನೋಡೋಣ.
ಮೊದಲು ಗಮನಿಸಬೇಕಾದ್ದು, ಚಿತ್ರಗ್ರಹಣದ ವೇಳೆ – ರವಿ ಮರೆಯಾದ ಸಂಧ್ಯಾಕಾಲ. ಆಗಸದಲ್ಲಿ ಇನ್ನೂ ತೆಳು ನೀಲವರ್ಣ ಇರುವಾಗ ಅಥವಾ ಮೋಡ ಕವಿದಿದ್ದರೂ ಸರಿ. ಫೋಟೋಗ್ರಫಿಗೆ ಅದೂ ಪೂರಕವೇ. ಅದರಿಂದ, ಕಡು ನೆರಳಿನಿಂದ ಕಂದಾದ ಕಟ್ಟಡಗಳ ಅಥವಾ ಮರಗಳ ಭಾಗಗಳು ಕಪ್ಪು ಆಕಾಶದೊಂದಿಗೆ ಸೇರಿ ಏನೂ ಕಾಣಿಸದಂತೆ ಕೂಡಿಕೊಳ್ಳುವ (merge) ಅಪಾಯವನ್ನು ತಪ್ಪಿಸಬಹುದು. ಎರಡನೆಯದು, ಕ್ಯಾಮೆರಾದ ಕೋನ. ಬಹು ಎತ್ತರದ ಕಟ್ಟಡದ ಮೇಲಿನಿಂದ (Elevated level) ಅಥವಾ ನೆಲದ ಮೇಲಿನಿಂದ (Ground level) ಸಾಧ್ಯವ ಎರಡು ಪ್ರಭೇದಗಳು. ದೃಶ್ಯದ ಅಭಿವ್ಯಕ್ತಿಗೆ ಅನುಗುಣವಾಗಿ ಅವುಗಳಲ್ಲೊಂದರ ಆಯ್ಕೆ ಛಾಯಾಗ್ರಾಹಕರದ್ದು. ಎರಡೂ ಸಂದರ್ಭದಲ್ಲಿ ಬಹು ನಿಧಾನ ಗತಿಯಲ್ಲಿ (Slow shutter speed) ಚಿತ್ರೀಕರಿಸುವುದು ಮುಖ್ಯವಾಗಿರುವುದರಿಂದ, ಟ್ರೈಪಾಡ್ ಮೇಲೆ ಕ್ಯಾಮೆರಾವನ್ನು ಭದ್ರಪಡಿಸಿಕೊಂಡು ದೃಶ್ಯವನ್ನು ಸೆರೆಹಿಡಿಯುವುದು. ಸಾಧ್ಯವಾದರೆ, ಕ್ಲಿಕ್ ಗುಂಡಿಯ ಬದಲು ಅಲುಗಾಡದಂತೆ ರಿಮೋಟ್ ಟ್ರಿಗರ್ ಅಳವಡಿಸುವುದು ಸೂಕ್ತ.
ಮೊದಲಿನ ಚಿತ್ರ, ವಾಹನ ದಟ್ಟಣೆಗೆ ತಡೆ , ಮೆಟ್ರೋ ಬಳಕೆಗೆ ಮೊರೆ. ಇದು, ಬೆಂಗಳೂರಿನ ವೆಬೆರೊನ್ ಸಂಸ್ಥೆಯಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿರುವ ಪರಿಣಿತ ಹವ್ಯಾಸಿ ಛಾಯಾಚಿತ್ರಕಾರ ವಿಕಾಸ್ ಶಾಸ್ತ್ರಿ ತೆಗೆದಿರುವ ಚಿತ್ರ. ಅವರು ಲಾಲ್ ಬಾಗ್ ಸಮೀಪದ ನಿರ್ಮಾಣ ಹಂತದ ಬಹುಎತ್ತರದ ಕಟ್ಟಡವೊಂದರ ಮೇಲ್ಛಾವಣಿಯಿಂದ ನಾರ್ತ್ ರೋಡ್‌ನಲ್ಲಿ ಸಾಗುವ ಅಡ್ಡಾದಿಡ್ಡಿ ವಾಹನಗಳ ದಟ್ಟಣೆ ಮತ್ತು ಪಕ್ಕದಲ್ಲೇ ವಿಪರ್ಯಾಸದಂತೆ ಶಾಂತವಾಗಿ ಸಾಗುವ ಮೆಟ್ರೋ ರೈಲಿನ ಓಟ ಸೇರಿಸಿ ತೆಗೆದಿರುವ ಚಿತ್ರ. ಚಕ್ಕನೆ ಬಹಳ ವೇಗದ ಕವಾಟವನ್ನು ಇಟ್ಟಿದ್ದರೆ, ವಾಹನಗಳು ಮತ್ತು ರೈಲು ಸು#ಟವಾಗಿ ದಾಖಲಾಗಿ ಬಿಡುತ್ತಿದ್ದವು. ಅವುಗಳ ಹೆಡ್ ಲೈಟ್ ಮತ್ತು ಟೇಲ್ ಲೈಟ್‌ಗಳನ್ನು ದೊಡ್ಡ- ಸಣ್ಣ ಬಿಂದುಗಳಾಗಿ ಕಾಣಿಸಬಹುದಿತ್ತು . ವಾಹನಗಳ ಚಲನೆಯಂತೂ ನೋಡುಗನ ಅನುಭವಕ್ಕೆ ಬರುತ್ತಿರಲಿಲ್ಲ. ಆದರೆ, ವಿಕಾಸ್ ಶಾಸ್ತ್ರಿಯವರು ಕ್ಯಾಮೆರಾವನ್ನು ಕೆಳಗೆ ಕಾಣುವ ದೃಶ್ಯದೆಡೆಗೆ ವಿಸ್ತಾರ ಮಸೂರದಲ್ಲಿ ( Wide angle lens) ಸಂಯೋಜಿಸಿ, ಟ್ರೈಪಾಡ್ ಮೇಲೆ ದೃಢೀಕರಿಸಿ, ಅಪಚರ್‌ಅನ್ನು ದೊಡ್ಡದಾಗಿಸಿ, ರಿಮೋಟ್ ಟ್ರಿಗರ್ ಮೂಲಕ 1/ 30 ಸೆಕೆಂಡ್ ಕಾಲ ಸತತವಾಗಿ ಕ್ಯಾಮೆರಾ ಅಲುಗಾಡಿಸದೇ ಏಳು ಬಾರಿ ಸೆರೆಹಿಡಿದಿದ್ದಾರೆ. ಆ ಎಲ್ಲಾ ಏಳು ಪ್ರೇಮ್ ಗಳನ್ನೂ ಫೋಟೋಶಾಪ್ ಮೂಲಕ ಜೋಡಿಸಿ ಅಂತಿಮವಾಗಿ ಒಂದೇ ಚಿತ್ರಣವನ್ನಾಗಿ ಮಾಡಿದ್ದಾರೆ. ಅಂತೆಯೇ, 2-3 ಸೆಕೆಂಡ್‌ಗಳ ಕಾಲ ಚಲನೆಯಲ್ಲಿದ್ದ ವಾಹನಗಳು ಮತ್ತು ರೈಲುಗಳು ಚಿತ್ರದಲ್ಲಿ ದಾಖಲಾಗಿಲ್ಲ. ಕೇವಲ ಮುಂಬದಿ ಹಾಗೂ ಹಿಂಬದಿಯಲ್ಲಿ ಬೆಳಗುತ್ತಿದ್ದ ವಾಹನಗಳ ದೀಪಗಳು ಮೊದಲನೆಯ ಸ್ಥಳದಿಂದ ಕೊನೆಯವರೆಗೆ ಎಳೆ ಎಳೆಯಾಗಿ ದಾಖಲಾಗಿ ಉದ್ದನೆಯ ಗೀರುಗಳಾಗಿ ಗೋಚರಿಸುವುದೇ ದೃಶ್ಯಕ್ಕೆ ಮೆರಗು ನೀಡಿದಂತಿದೆ. ಸ್ಥಿರವಾಗಿದ್ದ ಮೆಟ್ರೊ ಲೈನ್, ರಸ್ತೆಯ ಭಾಗ, ಕಟ್ಟಡಗಳು, ಅಲ್ಲಲ್ಲಿಯ ರಸ್ತೆ ದೀಪಗಳು, ಅಲುಗದೇ ಚೆನ್ನಾಗಿಯೇ ಮೂಡಿವೆ.
ಈ ತರಹದ ಸನ್ನಿವೇಶಗಳು ನಗರ ಪ್ರದೇಶಗಳಲ್ಲಿ ಸಹಜವೇ ಆಗಿದ್ದರೂ, ಅವುಗಳನ್ನು ಚೆಂದವಾಗಿ ಸೆರೆಹಿಡಿಯುವುದು ಛಾಯಾಗ್ರಾಹಕರಿಗೆ ಒಂದು ಸವಾಲು. ಅದನ್ನು ವಿಕಾಸ್ ಶಾಸ್ತ್ರಿಯವರ ಕೈಚಳಕ ಸುಲಭ ಸಾಧ್ಯವೆನಿಸಿದೆ! ನೀವೂ ಪ್ರಯತ್ನಿಸಿ.
ಮತ್ತೂಂದು ಚಿತ್ರ ಕೇಂಬ್ರಿಡ್ಜ್ ರಸ್ತೆಯ ಕೊರಳ ಹಾರ ಗ್ರೌಂಡ್ ಲೆವೆಲ್‌ನದ್ದು. ನಾನು ಕೇಂಬ್ರಿಡ್ಜ್ ನಲ್ಲಿ ಮೂರು ದೊಡ್ಡ ರಸ್ತೆ ಕೂಡುವಲ್ಲಿ ಒಂದು ಬದಿಯ ಪಾದಚಾರಿ ರಸ್ತೆಯಂಚಿನಲ್ಲಿ ಕ್ಯಾಮೆರಾವನ್ನು ಟ್ರೈಪಾಡ್ ಮೇಲೆ ಇಟ್ಟು ತೆಗೆದದ್ದು. ಇಲ್ಲಿ ರಸ್ತೆ ಬದಿ ಪ್ರಕಾಶಮಾನವಾದ ದೀಪಗಳು, ಎದುರು ಬರುವ ವಾಹನಗಳ ಮುಂಭಾಗದ ದೀಪಗಳು ಎಲ್ಲವೂ ಹತ್ತಿರವೇ ಇದ್ದಿದ್ದರಿಂದ, ಓವರ್-ಎಕ್ಸ್ ಪೋಸ್ ಆಗಿಬಿಡುವುದನ್ನು ಹಿಡಿತದಲ್ಲಿಡಲು ಮತ್ತು ರಸ್ತೆಯ ದೀಪಗಳಿಗೆ ನಕ್ಷತ್ರದ ಮೆರಗು ತರಲು ಬೇಕಾದ ಸಣ್ಣದಾದ ಅಪರ್ಚರ್ f 16 ಅಳವಡಿಸಿ , ಲಾಂಗ್ ಎಕ್ಸ್ ಪೋಶ್‌ರ್‌ನಲ್ಲಿ ಸೆರೆಹಿಡಿದದ್ದು.
ಕೇಂಬ್ರಿಡ್ಜ್ ರಸ್ತೆಯ ಕೊರಳ ಹಾರ: ಫೋಕಲ್ ಲೆಂಗ್ತ್ 25 ಎಂ.ಎಂ. ‘ f 16, 1 ಸೆಕೆಂಡ್ , ಐ.ಎಸ್.ಒ 80
ಕೆ.ಎಸ್.ರಾಜಾರಾಮ್