Advertisement

ಸಾಧನೆ ಮಾಹಿತಿ ಕಲ್ಪಿಸಲು ಛಾಯಾಚಿತ್ರ ಪ್ರದರ್ಶನ

09:53 PM Dec 21, 2019 | Team Udayavani |

ಚಾಮರಾಜನಗರ: ರಾಜ್ಯ ಸರ್ಕಾರದ ನೂರು ದಿನಗಳ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ನೆರೆ, ಪ್ರವಾಹ ಸಂದರ್ಭದಲ್ಲಿ ಕೈಗೊಂಡ ಪರಿಹಾರ ಕಾರ್ಯಗಳ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಗರದ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದಲ್ಲಿ ಆಯೋಜಿಸಿರುವ ಮೂರು ದಿನಗಳ ಛಾಯಾಚಿತ್ರ ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಚಾಲನೆ ನೀಡಿದರು.

Advertisement

ಈ ವೇಳೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿವಿಧ ಕಾರ್ಯಕ್ರಮ ಹಾಗೂ ಸಾಧನೆಗಳ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಲು ಛಾಯಾಚಿತ್ರ ಪ್ರದರ್ಶನ ಏರ್ಪಾಡಾಗಿದೆ. ರಾಜ್ಯ ಸರ್ಕಾರ ನೂರು ದಿನಗಳ ಅವಧಿಯಲ್ಲಿ ಜಾರಿಗೆ ತಂದಿರುವ ವಿವಿಧ ಇಲಾಖೆಗಳ ಯೋಜನೆಗಳು ಹಾಗೂ ಪ್ರವಾಹ ವೇಳೆ ಸರ್ಕಾರ ಸ್ಪಂದನೆ ಹಾಗೂ ಪರಿಹಾರ ಕಾರ್ಯದ ಸಂಕ್ಷಿಪ್ತ ನೋಟವನ್ನು ಛಾಯಾಚಿತ್ರ ಪ್ರದರ್ಶನ ನೀಡಿದೆ. ಸಂಕ್ಷಿಪ್ತವಾಗಿದ್ದರೂ ಮಾಹಿತಿದಾಯಕವಾಗಿರುವುದು ವಿಶೇಷ. ಹೀಗಾಗಿ ಎಲ್ಲಾ ಕಾರ್ಯಕ್ರಮಗಳ ಮಾಹಿತಿ ನೀಡುವ ಈ ವಸ್ತು ಪ್ರದರ್ಶನ ಸದುಪಯೋಗವಾಗಬೇಕು ಎಂದು ಹೇಳಿದರು.

ಮಾಹಿತಿ ಫ‌ಲಕ ಪ್ರದರ್ಶನ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹಾಗೂ ಅನುಷ್ಠಾನಗೊಳಿಸುತ್ತಿರುವ ವಿವಿಧ ಇಲಾಖೆಗಳ ಕಾರ್ಯಕ್ರಮಗಳು, ಸಾಧನೆ ಕುರಿತ ಮಾಹಿತಿ ಫ‌ಲಕಗಳನ್ನು ಪ್ರದರ್ಶನದ ಭಾಗವಾಗಿದ್ದವು. ಪ್ರವಾಹ ಪರಿಸ್ಥಿತಿ ಎದುರಾದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಜನತೆಗೆ ಸ್ಪಂದಿಸಿದ ರೀತಿ ಹಾಗೂ ಮನೆ, ಹೊಲ, ಜಾನುವಾರು ಕಳೆದುಕೊಂಡವರಿಗೆ ಸರ್ಕಾರ ನೀಡಿದ ಪರಿಹಾರ ಕಾರ್ಯಗಳ ಬಗ್ಗೆ ಛಾಯಾಚಿತ್ರ ಪ್ರದರ್ಶನ ಬೆಳಕು ಚೆಲ್ಲಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಡಿಯಲ್ಲಿ ಪ್ರವಾಹ ಎದುರಾದ ಸ್ಥಳಗಳಲ್ಲಿ ನಿರ್ಮಿಸಿರುವ ಕುಡಿಯುವ ನೀರಿನ ಘಟಕಗಳು, ಶೌಚಾಲಯ ಮುಂತಾದ ಮೂಲ ಸೌಕರ್ಯಗಳ ಬಗೆಗಿನ ಮಾಹಿತಿ ಪ್ರದರ್ಶನದಲ್ಲಿದೆ.

ವಿವಿಧ ಯೋಜನೆಗೆ ಮಾಹಿತಿ: ನೇಕಾರರ ಸಾಲಮನ್ನಾ, ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್‌ ಹಾಗೂ ಸಹಾಯಧನ ವಿತರಣೆ, ಆಯುಷ್ಮಾನ್‌ ಆರೋಗ್ಯ ಕರ್ನಾಟಕ ಕಾರ್ಡ್‌ ವಿತರಣೆ, ಆಶಾ ಕಾರ್ಯಕರ್ತೆಯರಿಗೆ ನೀಡಲಾಗಿರುವ ಗೌರವಧನ, ಪೌಷ್ಠಿಕ ಪುನಶ್ಚೇತನ ಕೇಂದ್ರಗಳ ಸ್ಥಾಪನೆ, ಮಾತೃವಂದನಾ ಯೋಜನೆ, ಮಹಿಳಾ ಉದ್ದಿಮೆದಾರರಿಗೆ ಸಹಾಯಧನ, ಪ್ರವಾಸಿ ತಾಣಗಳ ಅಭಿವೃದ್ಧಿ ಕುರಿತಾದ ಸಂಕ್ಷಿಪ್ತ ಮಾಹಿತಿ ಛಾಯಾಚಿತ್ರ ಪ್ರದರ್ಶನದಲ್ಲಿ ಲಭ್ಯವಿದೆ.

ಪ್ರಧಾನಮಂತ್ರಿ ಕಿಸಾನ್‌ ಯೋಜನೆಗೆ ರಾಜ್ಯ ಸರ್ಕಾರ ನೀಡುತ್ತಿರುವ ಹೆಚ್ಚುವರಿ ಸಹಾಯಧನ, ಪ್ರಧಾನಮಂತ್ರಿ ಆವಾಸ್‌ ಯೋಜನೆಯ ಪ್ರಗತಿ, 200ಕ್ಕೂ ಹೆಚ್ಚು ಅಂಗನವಾಡಿ ಕಟ್ಟಡಗಳ ನಿರ್ಮಾಣ ಕುರಿತ ಮಾಹಿತಿ. ಜತೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗದವರ ಶ್ರೇಯೋಭಿವೃದ್ಧಿಗೆ ಜಾರಿಗೆ ತಂದಿರುವ ವಿವಿಧ ಕಲ್ಯಾಣ ಕಾರ್ಯಕ್ರಮಗಳ ವಿವರ ಮತ್ತು ಕೈಗಾರಿಕೆ, ಐಟಿ-ಬಿಟಿ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿ ಬಗೆಗೆ ಛಾಯಾಚಿತ್ರ ಪ್ರದರ್ಶನ ಮಾಹಿತಿ ನೀಡಲಿದೆ. ಈ ವೇಳೆ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್‌, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಎ. ರಮೇಶ್‌, ಕೆಎಸ್‌ಆರ್‌ಟಿಸಿ ಸಿಬ್ಬಂದಿ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next