Advertisement

ಕನಸನ್ನೇ ವೃತ್ತಿಯಾಗಿಸಿಕೊಂಡ ಛಾಯಾಗ್ರಾಹಕಿ ವಿಮಲಾ

10:59 PM Jan 08, 2020 | Team Udayavani |

ಉಡುಪಿಯ ಹಲವೆಡೆ ನಡೆಯವ ಸಾಂಸ್ಕೃತಿಕ ಮತ್ತು ಸಭಾ ಕಾರ್ಯಕ್ರಮ, ಮದುವೆ-ಮುಂಜಿ ಮುಂತಾದ ಕಾರ್ಯಕ್ರಮಗಳಲ್ಲಿ ಮಹಿಳೆಯೊಬ್ಬರು ಕೆಮರಾ ಹಿಡಿದು, ಫೋಟೋ ಕ್ಲಿಕ್ಕಿಸುವ ದೃಶ್ಯವನ್ನು ಸಾಮಾನ್ಯವಾಗಿ ನೀವು ನೋಡಿರಬಹುದು. ಇವರೇ ವಿಮಲ ಕೊಟ್ಯಾನ್‌ ಕಲ್ಮಾಡಿ. ಇವರು ಮಲ್ಪೆ ಬಳಿಯ ಕಲ್ಮಾಡಿಯವರು. ಕಾಂತಪ್ಪ ಪೂಜಾರಿ ಮತ್ತು ಕಿಟ್ಟಿ ಪೂಜಾರ್ತಿಯ ಮಗಳು. ವಿಮಲ ಕೈಯಲ್ಲಿ ಕೆಮರಾ ಹಿಡಿದು 15 ವರ್ಷಗಳು ಕಳೆದಿವೆ. ಕಲ್ಯಾಣ ಮಂಟಪದಲ್ಲಿ ವಧೂ ವಿವಿಧ ಹಾವ ಭಾವವನ್ನು ವಿವಿಧ ಭಂಗಿಗಳಲ್ಲಿ ಚಿತ್ರ ಸೆರೆ ಹಿಡಿಯವಲ್ಲಿ ಸಿದ್ಧ ಹಸ್ತರು ಇವರು. ಎತೆಗೆ ಆ ಚಿತ್ರಗಳನ್ನು ಸಂಕಲಿಸಿ ಮತ್ತಷ್ಟು ಸುರೂಪಗೊಳಿಸುವ ಚಾಣಾಕ್ಷತನವೂ ಇವರಿಗಿರುವುದು ವಿಶೇಷ.

Advertisement

ವಿಮಲ ಕಲ್ಮಾಡಿ ಅವರು ಶಿಕ್ಷಕ ತರಬೇತಿ ಪಡೆಯಲು 2004 ರಲ್ಲಿ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಆಹ್ವಾನವೂ ಬಂದಿತು. ಆದರೆ ಒಂದು ದಿನ ಪತ್ರಿಕೆ ಪುಟ ತೆರೆಯುವಾಗ, ಫೋಟೋ ಸ್ಟುಡಿಯೋವೊಂದಕ್ಕೆ ಛಾಯಾಗ್ರಾಹಕರು ಬೇಕಾಗಿದ್ದಾರೆ ಎಂಬ ಜಾಹೀರಾತು ಕಂಡರಂತೆ. ಕೆಮರಾ ಹಿಡಿಯಬೇಕೆಂಬ ಆಸೆ ಮೊದಲಿಂದಲೂ ಇತ್ತು. ಕೂಡಲೇ ತಡಮಾಡದೇ ನಗರದ ಕವಿ ಮುದ್ದಣ ಮಾರ್ಗದಲ್ಲಿದ್ದ ಚೇತನಾ ಸ್ಟುಡಿಯೋವನ್ನು ಸಂಪರ್ಕಿಸಿದರಂತೆ. ಮಹಿಳೆಯಾಗಿದ್ದು ಕೊಂಡು ಛಾಯಾಗ್ರಾಹಕರಾಗಲು ತೋರಿದ ಆಸಕ್ತಿಯನ್ನು ಕಂಡು ಅದರ ಮಾಲಕರಾದ ರಾಘವ ಪದ್ಮಶಾಲಿ ಅಚ್ಚರಿ ಪಟ್ಟರಂತೆ.

ಪ್ರಾರಂಭಿಕ ಹಂತದಲ್ಲಿ ವಿಮಲ ಅವರಿಗೆ ಸ್ಟುಡಿಯೋದಲ್ಲಿ ಕೆಲಸ. ಬಳಿಕ ನಿಧಾನವಾಗಿ ಛಾಯಾಗ್ರಹಣ ಕಲೆಯನ್ನು ಕರಗತ ಮಾಡಿಕೊಂಡರು ವಿಮಲಾ. ಸಭೆ ಸಮಾರಂಭಗಳಿಗೆ ಫೋಟೋ ತೆಗೆಯಲು ಕರೆ ಬಂದಾಗ ಹಿಂಜರಿಯಲಿಲ್ಲ. ಈಗ ಅದೇ ಅವರ ವೃತ್ತಿ ಮತ್ತು ಬದುಕು.

ಚೇತನಾ ಸ್ಟುಡಿಯೋಗೆ ಈಗ 50 ವರ್ಷ. ತಾನು ಈ ಎತ್ತರಕ್ಕೆ ಬೆಳೆಯಲು ಗುರು ರಾಘವ ಪದ್ಮಶಾಲಿ ಯವರೇ ಕಾರಣ ಎನ್ನುವ ವಿಮಲಾ, ಅವರ ಸಹಾಯವನ್ನು ಮರೆಯುವುದಿಲ್ಲ. ವಿಮಲಾ ಅವರ ಸಾಧನೆಯನ್ನು ಗುರುತಿಸಿ ಹಲವು ಸಂಘ ಸಂಸ್ಥೆಗಳು ಸಮ್ಮಾನಿಸಿ ಗೌರವಿಸಿವೆ. ಆತ್ಮವಿಶ್ವಾಸದಿಂದ ಯಾವುದಕ್ಕೂ ಹಿಂಜರಿಯದೇ ಮುನ್ನುಗ್ಗಿದ್ದರೆ ಮಹತ್ತರ ಸಾಧನೆ ಸಾಧ್ಯ ಎಂಬುದಕ್ಕೆ ವಿಮಲಾ ಅವರೇ ನಿದರ್ಶನ.

-ತಾರಾನಾಥ್‌ ಮೇಸ್ತ ಶಿರೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next