ಬೀದರ: ಹಿರಿಯ ಛಾಯಾಗ್ರಾಹಕ ಮಾರುತಿರಾವ್ ತಾಂದಳೆ ಅವರು ಸಂಗ್ರಹಿಸಿದ ಫೋಟೋಗ್ರಾಫಿಗಳ ಮೇಲೆ ವಿಶೇಷ ಅಂಚೆ ಲಕೋಟೆಯನ್ನು ಸೋಮವಾರ ಬಿಡುಗಡೆ ಮಾಡಲಾಯಿತು.
ನಗರದ ಕರ್ನಾಟಕ ಕಾಲೇಜಿನ ಆಡಿಟೋರಿಯಂನಲ್ಲಿ ಬೀದರ್ ಅಂಚೆ ವಿಭಾಗದಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾರುತಿರಾವ್ ತಾಂದಳೆ ಅವರ ವಿಶೇಷ ಅಂಚೆ ಲಕೋಟೆಯನ್ನು ಉತ್ತರ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ವೀಣಾ ಶ್ರೀನಿವಾಸ್ ಅವರು ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು, ಅಂಚೆ ಚೀಟಿ ಸಂಗ್ರಹಣೆಯಲ್ಲಿ ಫಿಲಾಟೇಲಿ ಕ್ಲಬ್‌ಗಳ ಪಾತ್ರ ಹಿರಿದಾಗಿದೆ. ಅಂಚೆ ಚೀಟಿ ಸಂಗ್ರಹಣೆಯಲ್ಲಿ, ವಿಶೇಷ ಅಂಚೆ ಲಕೋಟೆ ಬಿಡುಗಡೆಯಲ್ಲಿ ಹಾಗೂ ಫಿಲಾಟೇಲಿ ಕ್ಲಬ್‌ಗಳ ರಚನೆಯಲ್ಲಿ ಇಡೀ ರಾಜ್ಯಕ್ಕೆ ಬೀದರ್ ಅಂಚೆ ಕಚೇರಿ ಮಾದರಿಯಾಗಿದೆ ಎಂದು ಬಣ್ಣಿಸಿದರು.
ಹಿರಿಯ ಛಾಯಾಗ್ರಾಹಕ ಮಾರುತಿರಾವ್ ತಾಂದಳೆ ಅವರ ಫೋಟೋಗ್ರಾಫಿ ಸಂಗ್ರಹಣೆಯ ಚಿತ್ರವುಳ್ಳ ಅಂಚೆ ಲಕೋಟೆಯ 2000 ಪ್ರತಿಗಳನ್ನು ತಯಾರಿಸಲಾಗಿದ್ದು, ಇಂದು ವಿಶ್ವ ಛಾಯಾಗ್ರಾಹಣ ದಿನದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇನ್ನು ಮುಂದೆ ಇವು ಮರು ಮುದ್ರಣವಾಗಲಾರವು. ಆದ್ದರಿಂದ ಸಾರ್ವಜನಿಕರು ಇದರ ಸದುಪಯೋಗ ಪಡೆದು ಇಂದೇ ಖರೀದಿಸುವಂತೆ ಕೋರಿದರು.
ಧಾರವಾಡದ ಹಿರಿಯ ಅಂಚೆ ಅಧಿಕಾರಿ ಎಚ್.ಬಿ. ಹಸಬಿ ಮಾತನಾಡಿ, ಹೈದ್ರಾಬಾದ್ ಕರ್ನಾಟಕ ಹಿಂದುಳಿದ ಭಾಗ ಎಂಬುದನ್ನು ಬೀದರ್ ಅಂಚೆ ಅಧಿಕಾರಿಗಳು ವಿಶೇಷ ಲಕೋಟೆ ಬಿಡುಗಡೆ ಮಾಡುವ ಮೂಲಕ ಸುಳ್ಳು ಮಾಡಿದ್ದಾರೆ. ಇಡೀ ರಾಜ್ಯಕ್ಕೆ ಹೋಲಿಸಿದರೆ ಅಂಚೆ ಕಾರ್ಯದಲ್ಲಿ ಈ ಭಾಗವೇ ಹೆಸರು ಮಾಡಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪ್ರೇಮಸಾಗರ ದಾಂಡೇಕರ್ ಮಾತನಾಡಿ, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಗೆ ಒಳಪಡುವ ಡಾ|ಬಿ.ಆರ್. ಅಂಬೇಡ್ಕರ್ ವಸತಿ ನಿಲಯ, ಅಟಲ ಬಿಹಾರಿ ವಾಜಪೆಯ ವಸತಿ ಶಾಲೆ, ಮೂರಾರ್ಜಿ ದೇಸಾಯಿ ವಸತಿ ಶಾಲೆ, ಇಂದಿರಾ ಗಾಂಧಿ ವಸತಿ ಶಾಲೆ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳು ಸೇರಿ ಜಿಲ್ಲೆಯ ಒಟ್ಟು 29 ವಸತಿ ಶಾಲೆಗಳಲ್ಲಿ ಫಿಲಾಟೇಲಿ ಕ್ಲಬ್‌ಗಳನ್ನು ಸ್ಥಾಪಿಸಿ ಅಂಚೆ ಚೀಟಿ ಸಂಗ್ರಹಣೆಯ ಹವ್ಯಾಸ ಬೆಳೆಸುವ ಉದ್ದೇಶ ಹೊಂದಲಾಗಿದೆ ಎಂದರು.
ಅಂಚೆ ಇಲಾಖೆಯ ಅಧಿಕ್ಷಕ ವಿ.ಎಸ್.ಎಲ್. ನರಸಿಂಹರಾವ್ ಪ್ರಾಸ್ತಾವಿಕ ಮಾತನಾಡಿದರು. ಜಿ.ಕೆ. ಕನಸ್ಟ್ರೆಕ್ಷನ್ಸ್‌ನ ವ್ಯವಸ್ಥಾಪಕ ಗುರುನಾಥ ಕೊಳ್ಳುರ್, ಮಾಣಿಕಪ್ಪ ಗಾದಾ, ಬಿ.ಎಸ್. ಕುದುರೆ, ಮಲ್ಲಿನಾಥ ಫುಲೇಕರ್, ವಿದ್ಯಾವತಿ ತಾಂದಳೆ, ಗೋಪಿಚಂದ್ ತಾಂದಳೆ ಸೇರಿದಂತೆ ಅನೇಕರು ಇದ್ದರು.