Advertisement

ಕಡಲಾಳದ ಪರ್ವತಗಳಲ್ಲೂ ಪಾಸ್ಫರೈಟ್‌ ನಿಕ್ಷೇಪ! ಮಂಗಳೂರು, ಕಾರವಾರದ ಸಮುದ್ರ ತಳದಲ್ಲಿ ಪತ್ತೆ

01:08 AM Apr 03, 2024 | Team Udayavani |

ಮಂಗಳೂರು: ಭಾರತದಂತಹ ಕೃಷಿ ಪ್ರಧಾನ ರಾಷ್ಟ್ರಕ್ಕೆ ದೊಡ್ಡ ಪ್ರಮಾಣದಲ್ಲಿ ರಸಗೊಬ್ಬರ ಅಗತ್ಯ. ಈ ರಸಗೊಬ್ಬರ ತಯಾರಿಕೆಗೆ ಪಾಸ್ಫೋರಸ್‌ (ರಂಜಕ) ಎನ್ನುವುದು ಅತಿಮುಖ್ಯ ಕಚ್ಚಾವಸ್ತು.

Advertisement

ಇದುವರೆಗೆ ಭೂಭಾಗದ ವಿವಿಧ ಪ್ರದೇ ಶಗಳಲ್ಲಿ ರಂಜಕವನ್ನು ಪಡೆಯಲಾಗುತ್ತಿತ್ತು. ಇನ್ನು ಮುಂದೆ ಸಾಗರದಾಳ ದಿಂದಲೂ ಪಡೆಯಬಹುದು. ಅದಕ್ಕೆ ಪೂರಕವಾಗಿ ಸಾಗರದಾಳದಲ್ಲಿನ ಬೃಹತ್‌ ಪರ್ವತಗಳಲ್ಲಿ ಪಾಸ್ಫರೈಟ್‌ ಎನ್ನುವ ವಸ್ತು ಸಿಗುವುದನ್ನು ಭಾರತೀಯ ಭೂಸರ್ವೇಕ್ಷಣಾ ಸಂಸ್ಥೆ (ಜಿಎಸ್‌ಐ) ಖಚಿತಪಡಿಸಿದೆ.

ಜಿಎಸ್‌ಐನ ಸಾಗರ ಮತ್ತು ಕರಾವಳಿ ಸಮೀಕ್ಷಾ ವಿಭಾಗದವರು ಸರ್ವೇಕ್ಷಣೆ ನೌಕೆಗಳನ್ನು ಬಳಸಿ ಪಶ್ಚಿಮದ ಅರಬ್ಬಿ ಸಮುದ್ರದಲ್ಲಿ ನಡೆಸಿದ ಸಮೀಕ್ಷೆ, ಅಧ್ಯಯನಗಳಲ್ಲಿ ರತ್ನಗಿರಿ, ಕಾರವಾರ, ಮಂಗಳೂರು ಹಾಗೂ ಕೋಯಿಕ್ಕೋಡ್‌ಗಳಲ್ಲಿ ರಂಜಕ ಇರು ವುದನ್ನು ಪತ್ತೆ ಹಚ್ಚಿದ್ದಾರೆ. ಈ ಬಗ್ಗೆ ಜಿಎಸ್‌ಐ ವಿಜ್ಞಾನಿಗಳು ವೈಜ್ಞಾನಿಕ ನಿಯತಕಾಲಿಕಗಳಲ್ಲಿ ವಿಷಯ ಹಂಚಿಕೊಂಡಿದ್ದಾರೆ.

ಅರಬ್ಬಿ ಸಮುದ್ರದಲ್ಲಿರುವ ಸಾಗರ ಪರ್ವತಗಳ ಮೇಲ್ಭಾಗದಿಂದ ಪಾಸ್ಫರೈಟ್‌ನ ವಿವಿಧ ಮಾದರಿಗಳನ್ನು ಸಂಗ್ರಹಿಸಿ ಲ್ಯಾಬ್‌ಗಳಲ್ಲಿ ಅವುಗಳಲ್ಲಿರುವ ಪಾಸ್ಫೋರಸ್‌ ಪ್ರಮಾಣವನ್ನು ದಾಖಲಿಸಲಾಗಿದೆ. ಪ್ರಸ್ತುತ ಇದು ಕೈಗಾರಿಕೆಗೆ ಬಳಸುವಷ್ಟು ಪ್ರಮಾಣದಲ್ಲಿ ಇಲ್ಲವಾದರೂ ಮುಂದೆ ಈ ಪರ್ವತಗಳ ಆಳಕ್ಕಿಳಿದರೆ ಹೆಚ್ಚಿನ ಪ್ರಮಾಣ ಲಭ್ಯವಾಗುವ ಆಶಾಭಾವ ತಜ್ಞರದ್ದು. ತಂತ್ರಜ್ಞಾನವನ್ನು ಸುಧಾರಿಸಿಕೊಂಡರೆ ಪಾಸ್ಫೋರಸ್‌ ಪ್ರಮಾಣವನ್ನು ಹೆಚ್ಚಿಸಬಹುದು.

ಮಂಗಳೂರು/
ಕಾರವಾರ ಮೌಂಟ್‌
ಕರ್ನಾಟಕದಲ್ಲಿ ಕಾರವಾರ ಮತ್ತು ಮಂಗಳೂರ‌ಲ್ಲಿ ಸಾಗರ ಪರ್ವತಗಳಲ್ಲಿ ಪಾಸ್ಫರೈಟ್‌ ನಿಕ್ಷೇಪವನ್ನು ಪತ್ತೆ ಮಾಡಲಾಗಿದೆ. ಮಂಗಳೂರಿನ ಸಮುದ್ರದಲ್ಲಿ ನಡೆಸಲಾದ ಸಮೀಕ್ಷೆಯ ವೇಳೆ 1800 ಮೀಟರ್‌ನಷ್ಟು ಕೆಳಭಾಗದ ಸಾಗರ ಪರ್ವತದಿಂದ ಪಾಸೆಟಿಕ್‌ ಮಾದರಿಗಳನ್ನು ಪಡೆಯ ಲಾಗಿದೆ. ಶೇ. 20ರಿಂದ 30ರ ವರೆಗಿನ ಪಾಸ್ಫೋರಸ್‌ಇರುವುದಾಗಿ ತಿಳಿಸಲಾಗಿದೆ.

Advertisement

ಕಾರವಾರದ ಕಡಲಿನಲ್ಲಿ 316 ಮೀಟರ್‌ ಹಾಗೂ 535 ಮೀಟರ್‌ ಆಳದಲ್ಲಿರುವ ಪ್ರತಾಪ್‌ ರಿಜ್‌ ಎನ್ನುವ ಸಾಗರದಾಳದ ಬೆಟ್ಟದಿಂದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಸಮುದ್ರ ರತ್ನಾಕರ ಹಡಗಿನಲ್ಲಿ ತೆರಳಿ ನಿಕ್ಷೇಪದ ಮಾದರಿ ಸಂಗ್ರಹಿಸಿದ್ದು 1ರಿಂದ 3 ಸೆಂಟಿ ಮೀಟರ್‌ ಗಾತ್ರದ ಮಾದರಿಗಳು ಸಿಕ್ಕಿವೆ.

ಅದೇ ರೀತಿ ಕೋಯಿಕ್ಕೋಡ್‌ನ‌ 650ರಿಂದ 710 ಮೀಟರ್‌ ಸಮುದ್ರದಾಳದಿಂದ ಪಾಸ್ಫರೈಟ್‌ ಮಾದರಿ ಸಂಗ್ರಹಿಸಲಾಗಿದೆ. ಗುಜರಾತ್‌ ರಾಜ್ಯದ ಓಖಾದಲ್ಲಿ 360ರಿಂದ 800 ಮೀಟರ್‌ ಸಮುದ್ರದಾಳದಲ್ಲಿ ಹರಡಿರುವ ಬೆಟ್ಟಗಳಿಂದ ಮಾದರಿ ಸಂಗ್ರಹಿಸಲಾಗಿದೆ. ಅಲ್ಲದೆ ಮಹಾರಾಷ್ಟ್ರದ ಅಂಗ್ರಿಯಾ ಬ್ಯಾಂಕ್‌ ಎಂಬಲ್ಲಿಂದಲೂ 600 ಮೀಟರ್‌ ಸಮುದ್ರದಾಳದಿಂದ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಿಸಲಾಗಿದೆ.

ಪಾಸ್ಫೋರಸ್‌ ತಯಾರಿಸಲು ಬೇಕಾದ ಅದಿರು ಪಾಸ್ಫರೈಟ್‌. ಇದು ಕಲ್ಲಿನಂತಹ ವಸ್ತು. ತನ್ನಲ್ಲಿ ಅಧಿಕ ಪ್ರಮಾಣದ ಪಾಸೆ#àಟ್‌ ಖನಿಜವನ್ನು ಇದು ಹೊಂದಿರುತ್ತದೆ. ಇದು ನವೀಕರಿಸಬಹುದಾದ ವಸ್ತುವಲ್ಲ, ಹಾಗಾಗಿ ಕೃಷಿಗೆ ಅತ್ಯಂತ ಉಪಯುಕ್ತ ಹಾಗೂ ಮೌಲ್ಯಯುತವಾದ ಅದಿರು ಎಂದೇ ಪರಿಗಣಿಸಲ್ಪಟ್ಟಿದೆ.

ಪಾಸ್ಫರೈಟ್‌ ಅದಿರಿನ ಹೊಸ ನಿಕ್ಷೇಪಗಳು ಪತ್ತೆಯಾಗುವುದು ಭಾರತದಂತಹ ದೇಶದಲ್ಲಿ ಅತಿ ಮಹತ್ವದ್ದು. ಜಗತ್ತಿನಲ್ಲಿ ಬಹುತೇಕ ಪಾಸ್ಫರೈಟ್‌ ಅನ್ನು ನೆಲದಾಳದಿಂದಲೇ ಪಡೆಯಲಾಗುತ್ತದೆ. ಆದರೆ ಮುಂದೆ ಇದು ಖಾಲಿಯಾದರೆ ಸಾಗರದಿಂದಲೂ ಪಡೆಯಲು ಸಾಧ್ಯ ಎನ್ನುವುದನ್ನು ಈ ಸಂಶೋಧನೆಗಳು ತೋರಿಸಿಕೊಟ್ಟಿವೆ.

ಇನ್ನಷ್ಟು ಸಂಶೋಧನೆ ನಡೆಯಬೇಕು
ತಜ್ಞರ ಪ್ರಕಾರ ಸಾಗರದಡಿಯಲ್ಲಿ ಹಲವು ಖನಿಜಗಳು ಲಭ್ಯವಾಗುವ ಸಾಧ್ಯತೆಗಳಿರುತ್ತವೆ. ಇದಕ್ಕೆ ಹೆಚ್ಚಿನ ಸಂಶೋಧನೆ ಅಗತ್ಯ. ಈಗಾಗಲೇ ಸಮುದ್ರದಾಳದಲ್ಲಿ ಲೈಮ್‌ಸ್ಯಾಂಡ್‌ ಎನ್ನುವ ವಿವಿಧ ಕೈಗಾರಿಕೆಗಳಲ್ಲಿ ಬಳಸಲಾಗುವ ಒಂದು ಬಗೆಯ ಮರಳಿನ ನಿಕ್ಷೇಪವನ್ನೂ ಜಿಎಸ್‌ಐ ಕೊಚ್ಚಿ, ಗುಜರಾತ್‌, ಮಹಾರಾಷ್ಟ್ರದ ಸಮುದ್ರದಲ್ಲಿ ಪತ್ತೆ ಮಾಡಿದೆ. ಅಲ್ಲದೆ ನಿರ್ಮಾಣ ಕಾಮಗಾರಿಗೆ ಬೇಕಾಗುವ ಸಾಗರ ಮರಳಿನ ದೊಡ್ಡ ನಿಕ್ಷೇಪಗಳನ್ನೂ ಕೇರಳ ಸಮುದ್ರದಲ್ಲಿ ಶೋಧಿಸಲಾಗಿದೆ.

ಸಮುದ್ರ ರತ್ನಾಕರ
ಜಿಎಸ್‌ಐ ತನ್ನ ಅತ್ಯಾಧುನಿಕ ಸಮುದ್ರ ರತ್ನಾಕರ ನೌಕೆಯನ್ನು ಬಳಸಿಕೊಂಡು ಸಾಗರ ಸಂಶೋಧನೆಯನ್ನು ಕೈಗೊಳ್ಳುತ್ತದೆ. ವಾರ್ಷಿಕವಾಗಿ ಸಮುದ್ರದಲ್ಲಿ ಖನಿಜಗಳ ಪರಿಶೋಧನೆ, ವಿಶೇಷ ಸರ್ವೇಕ್ಷಣ ಕಾರ್ಯಗಳನ್ನು ಕೈಗೊಳ್ಳಲು ಬೇಕಾದ ವೈಜ್ಞಾನಿಕ ಉಪಕರಣಗಳನ್ನು ಹೊಂದಿದೆ.

– ವೇಣುವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next