Advertisement
ಚಂಡಮಾರುತದ ಹಿನ್ನೆಲೆಯಲ್ಲಿ ಈಗಾಗಲೇ ಮೂರೂವರೆ ಲಕ್ಷಕ್ಕಿಂತ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, ಒಟ್ಟು 11.54 ಲಕ್ಷ ಮಂದಿಯನ್ನು ಸ್ಥಳಾಂತರ ಮಾಡುವ ಗುರಿ ಹಾಕಿ ಕೊಳ್ಳಲಾಗಿದೆ. ಇವರಿಗೆಲ್ಲ ಶಾಲೆ, ಕಾಲೇಜು ಸಹಿತ ಲಭ್ಯವಿರುವ ಕಟ್ಟಡಗಳಲ್ಲಿ ನಿಲ್ಲಲು ವ್ಯವಸ್ಥೆ ಮಾಡಲಾಗಿದೆ. ಜನರನ್ನು ಸಾಗಿಸಲು ಲಭ್ಯವಿರುವ ಎಲ್ಲ ಸಂಚಾರ ಮೂಲಗಳನ್ನೂ ಬಳಸಿಕೊಳ್ಳಲಾಗಿದೆ ಎಂದು ನೈಸರ್ಗಿಕ ವಿಕೋಪ ತುರ್ತು ಪರಿಹಾರ ಪಡೆ ಹೇಳಿದೆ. ನಾಗರಿಕ ವಿಮಾನ ಯಾನ ಸಚಿವ ಸುರೇಶ್ ಪ್ರಭು, ಎಲ್ಲ ವಿಮಾನ ನಿಲ್ದಾಣಗಳಿಗೂ ಪರಿಹಾರ ಕಾರ್ಯಗಳಿಗೆ ಸನ್ನದ್ಧರಾಗಿರುವಂತೆ ಸೂಚನೆ ನೀಡಿದ್ದಾರೆ.
ಒಡಿಶಾದ 15 ಜಿಲ್ಲೆಗಳಲ್ಲಿ ಫೋನಿ ಚಂಡಮಾರುತದಿಂದ ಹಾನಿಯಾಗಬಹುದು ಎಂದು ಅಂದಾಜಿಸಲಾಗಿದೆ. ಪುರಿ, ಜಗತ್‌ಸಿಂಗಾಪುರ, ಕೇಂದ್ರಪುರ, ಬಾಲಸೋರ್, ಭದ್ರಕ್, ಗಂಜಮ್, ಖುರ್ದಾ, ಜೈಪುರ, ನಯಾಗರ್, ಕಟಕ್, ಗಜಪತಿ, ಮಯೂರ್‌ಭಂಜ್, ಧಂಕೇನಾಲ್ ಮತ್ತು ಕೋಂಜೇಹಾರ್ ಜಿಲ್ಲೆಗಳಲ್ಲಿ ಹೆಚ್ಚು ಹಾನಿಯುಂಟು ಮಾಡಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
Related Articles
ಫೋನಿ ಚಂಡಮಾರುತದ ಹಿನ್ನೆಲೆಯಲ್ಲಿ ಸುಮಾರು 223 ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ. ಅಲ್ಲದೆ, ಮೂರು ವಿಶೇಷ ರೈಲುಗಳನ್ನು ಜನರನ್ನು ಸಾಗಾಟ ಮಾಡುವ ಸಲುವಾಗಿ ಸನ್ನದ್ಧವಾಗಿ ನಿಲ್ಲಿಸಲಾಗಿದೆ. ಎನ್‌ಡಿಆರ್‌ಎಫ್ 81 ತಂಡಗಳನ್ನು ಪರಿಹಾರ ಕಾರ್ಯಗಳಿಗಾಗಿ ನಿಯೋಜನೆ ಮಾಡಲಾಗಿದೆ. 4,000 ಸಿಬಂದಿ ಪರಿಹಾರ ಕಾರ್ಯ ನಡೆಸಲಿದ್ದಾರೆ.
Advertisement
1999ಕ್ಕಿಂತಲೂ ಭೀಕರ?1999ರಲ್ಲಿ ಒಡಿಶಾವನ್ನು ಕಾಡಿದ ಸೂಪರ್ ಸೈಕ್ಲೋನ್‌ಗಿಂತಲೂ ಅಪಾಯಕಾರಿಯೇ ಈ ಫೋನಿ ಚಂಡ ಮಾರುತ? ಹೌದು ಎನ್ನುತ್ತಿವೆ ಹವಾ ಮಾನ ಇಲಾಖೆ ಮೂಲಗಳು. ಆ ವರ್ಷದ ಚಂಡ ಮಾರುತದ ಹೊಡೆತದಿಂದಾಗಿ ಒಡಿಶಾದಲ್ಲೇ 10 ಸಾವಿರ ಮಂದಿ ಜೀವ ಕಳೆದುಕೊಂಡಿದ್ದರು. ಈ ಬಾರಿ ಅಂದಿಗಿಂತಲೂ ಹೆಚ್ಚು ಅಪಾಯಕಾರಿ ವೇಗದಲ್ಲಿ ಫೋನಿ ಆಗಮಿಸುತ್ತಿದೆ. 200 ಕಿ.ಮೀ. ವೇಗ
ಫೋನಿ ಚಂಡಮಾರುತ 200 ಕಿ.ಮೀ. ವೇಗದಲ್ಲಿ ಬಂದು ಅಪ್ಪಳಿಸಲಿದೆ. ಗುರುವಾರ ಸಂಜೆಯ ವೇಳೆಗೆ ಫೋನಿ ಚಂಡಮಾರುತವು ಪುರಿಯಿಂದ 350 ಕಿ.ಮೀ. ದೂರದ ದಕ್ಷಿಣ- ನೈಋತ್ಯ ದಿಕ್ಕಿನ ಬಂಗಾಲ ಕೊಲ್ಲಿ ಸಮುದ್ರದಲ್ಲಿ ಕೇಂದ್ರೀಕೃತವಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಆರಂಭದಲ್ಲಿ ಶುಕ್ರವಾರ ಬೆಳಗ್ಗೆಯೇ ಫೋನಿ ಚಂಡ ಮಾರುತ ಪುರಿಗೆ ಅಪ್ಪಳಿಸಬಹುದು ಎಂದು ಹೇಳಲಾಗಿತ್ತು. ಆದರೆ ಅನಂತರದಲ್ಲಿ ಪರಿಷ್ಕೃತ ವರದಿ ನೀಡಿದ ಹವಾಮಾನ ಇಲಾಖೆ ಮಧ್ಯಾಹ್ನ 12 ರಿಂದ 2 ಗಂಟೆ ವೇಳೆಗೆ ಪುರಿಗೆ ಬಂದು ಅಪ್ಪಳಿಸಲಿದೆ ಎಂದು ಹೇಳಿದೆ.