ಹೊಸದಿಲ್ಲಿ: ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ
ಯೆಸ್ ಬ್ಯಾಂಕ್ ಮೇಲೆ ರಿಸರ್ವ್ ಬ್ಯಾಂಕ್ ನಿಷೇಧ ಹೇರಿದ್ದು, ಅದರ ನೇರ ಪರಿಣಾಮ
ಫೋನ್ ಪೇ ಮೇಲಾಗಿದೆ.
ಹಣ ವರ್ಗಾವಣಾ ಮೊಬೈಲ್ ಆಪ್ ಫೋನ್ ಪೇ ಯೆಸ್ ಬ್ಯಾಂಕ್ ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿತ್ತು. ಆದರೆ ಇದೀಗ ಯೆಸ್ ಬ್ಯಾಂಕ್ ಮೇಲಿನ ದಿಢೀರ್ ಬೆಳವಣಿಗೆಯಿಂದ ಫೋನ್ ಪೇ ಸೇವೆಗಳು ಅಲಭ್ಯವಾಗಿದೆ.
ನಾವು ತಾತ್ಕಾಲಿಕವಾಗಿ ಲಭ್ಯವಿಲ್ಲ. ಅನಿಗದಿತ ನಿರ್ವಹಣೆಯಲ್ಲಿದ್ದೇವೆ. ನಮ್ಮ ಅಲಭ್ಯತೆಗಾಗಿ ನಾವು ಕ್ಷಮೆ ಕೇಳುತ್ತೇವೆ ಎಂದು ಫೋನ್ ಪೇ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹೇಳಿಕೊಂಡಿದೆ.
ಪ್ರೀತಿಯ ಗ್ರಾಹಕರೇ, ದೀರ್ಘಕಾಲದ ಅಡಚಣೆಗಾಗಿ ನಾವು ವಿಷಾದಿಸುತ್ತೇವೆ. ನಮ್ಮ ಪಾಲುದಾರ ಬ್ಯಾಂಕ್ ಯೆಸ್ ಬ್ಯಾಂಕ್ ನ್ನು ಆರ್ ಬಿಐ ನಿಷೇಧಿಸಿದೆ. ಸೇವೆಗೆ ಮರಳುವಂತಾಗಲು ನಮ್ಮ ತಂಡ ಶ್ರಮಿಸುತ್ತಿದೆ. ಕೆಲವೇ ಗಂಟೆಗಳಲ್ಲಿ ಮತ್ತೆ ಮರಳಿ ಬರುತ್ತೇವೆ ಎಂದು ನಂಬಿದ್ದೇವೆ. ನಿಮ್ಮ ತಾಳ್ಮೆಗೆ ಧನ್ಯವಾದಗಳು ಎಂದು ಫೋನ್ ಪೇ ಸಿಇಓ ಸಮೀರ್ ನಿಗಮ್ ಟ್ವೀಟ್ ಮಾಡಿದ್ದಾರೆ.
ತೀವ್ರ ಹಣಕಾಸು ಬಿಕ್ಕಟ್ಟಿಗೆ ಸಿಲುಕಿರುವ ಖಾಸಗಿ ಸ್ವಾಮ್ಯದ ಯೆಸ್ ಬ್ಯಾಂಕ್ ನ ನಿರ್ದೇಶಕ ಮಂಡಳಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಆರ್ ಬಿಐ ಗುರುವಾರ ರದ್ದು ಪಡಿಸಿತ್ತು. ಗ್ರಾಹಕರು ಪ್ರತಿ ಖಾತೆಯಿಂದ 50 ಸಾವಿರ ರೂಪಾಯಿವರೆಗೆ ಮಾತ್ರ ಹಿಂದಕ್ಕೆ ಪಡೆಯಲು ನಿರ್ಬಂಧ ಹೇರಿದೆ.