ವಿಜಯಪುರ: ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ಎಂದು ನಾವೇನೂ ಕೇಳಿರಲಿಲ್ಲ. ನಮ್ಮ ರಾಜ್ಯದ ಪೊಲೀಸರಲ್ಲೇ ಸಿಬಿಐ ಕೂಡ ತನಿಖೆ ಮಾಡಲಾಗದ ಪ್ರಕರಣ ಬೇಧಿಸಿರುವ ದಕ್ಷ ಅಧಿಕಾರಿಗಳಿದ್ದಾರೆ. ಆದರೂ ಸಿ.ಎಂ. ಯಡಿಯೂರಪ್ಪ ಅವರ ನಿರ್ಧಾ ಸೂಕ್ತವೆನಿಸಿಲ್ಲ ಎಂದು ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪೋನ್ ಕದ್ದಾಲಿಕೆ ಪ್ರಕರಣವನ್ನ ಸಿಬಿಐಗೆ ಕೊಡುವಂತಹ ಅವಶ್ಯಕತೆ ಇರಲಿಲ್ಲ. ಈಗಲೂ ನನ್ನ ಈ ಹೇಳಿಕೆಗೆ ಬದ್ಧವಾಗಿದ್ದೇನೆ ಎಂದರು.
ನಮ್ಮ ಪೊಲೀಸ್ ಇಲಾಖೆಯಲ್ಲೆ ಅನೇಕರು ದಕ್ಷ , ಪ್ರಾಮಾಣಿಕ ಅಧಿಕಾರಿಗಳಿದ್ದಾರೆ.
ಸಿಬಿಐ ಸಂಸ್ಥೆಯಿಂದ ತನಿಖೆ ಆಗದ ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ ಅವರ ಹತ್ಯೆಯ ಪ್ರಕಣ ಬೇಧಿಸಿದ್ದೇ ಕರ್ನಾಟಕ ಪೊಲೀಸ್ ಎಂಬುದನ್ನು ಮರೆಯಬಾರದು ಎಂದರು.
ಆದರೂ ರಾಜ್ಯ ಸರಕಾರ ಸಿಬಿಐ ತನಿಖೆಗೆ ವಹಿಸಿದೆ. ಇದರ ಜೊತೆಗೆ ಆಪರೇಷನ್ ಕಮಲದ ಸಂದರ್ಭದಲ್ಲಿ ಕೇಂದ್ರ ಸರಕಾರ ಫೋನ್ ಕದ್ದಾಲಿಕೆ ಮಾಡಿರುವ ಆರೋಪ ಇದೆ. ಅದನ್ನು ಸಿಬಿಐ ತನಿಖೆ ಮಾಡಲಿ ಎಂದು ಆಗ್ರಹಿಸಿದರು.
ಐಎಂಎ ಪ್ರಕರಣದಲ್ಲಿ ನಾವು ಯಾರನ್ನ ರಕ್ಷಿಸಲು ಇಲ್ಲಿ ಹೊರಟಿಲ್ಲ. ಅಂತರರಾಜ್ಯ ಪ್ರಕರಣ ಆಗಿರುವ ಇದನ್ನು ಸಿಬಿಐ ತನಿಖೆಗೆ ಕೊಡಲು ನಮ್ಮ ಅಭ್ಯಂತರ ಇಲ್ಲ ಎಂದರು.