ಬೆಂಗಳೂರು: ರಾಜ್ಯ ಸರ್ಕಾರವು ಪ್ರಮುಖ ರಾಜಕಾರಣಿಗಳು ಹಾಗೂ ಅಧಿಕಾರಿಗಳ ದೂರವಾಣಿ ಕದ್ದಾಲಿಕೆ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೇರಿದಂತೆ ಬಿಜೆಪಿ ನಾಯಕರು ಮತ್ತೆ ಗಂಭೀರ ಆರೋಪ ಮಾಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ಸಮ್ಮಿಶ್ರ ಸರ್ಕಾರ ಸದಾ ಅಸ್ಥಿರತೆಯಿಂದ ನರಳುತ್ತಿದ್ದು ಯಾರು ಏನು ಸಂಚು ಮಾಡುತ್ತಿದ್ದಾರೋ ಎಂದು ರಾಜಕಾರಣಿಗಳು ಹಾಗೂ ಅಧಿಕಾರಿಗಳ ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ. ಇದರ ಬಗ್ಗೆ ತನಿಖೆಯಾಗಬೇಕಿದೆ ಎಂದು ಆಗ್ರಹಿಸಿದರು.
ನನಗೂ ಫೋನ್ ಟ್ಯಾಪಿಂಗ್ ಅನುಭವ ಆಗಿದೆ. ದೂರವಾಣಿ ಕರೆ ಸ್ವೀಕರಿಸಿ ಮಾತನಾಡುವಾಗ ವಿಚಿತ್ರ ಸದ್ದು ಉಂಟಾಗುತ್ತದೆ. ಈ ಬಗ್ಗೆ ವಿಚಾರಿಸಿದಾಗ ಫೋನ್ ಟ್ಯಾಪಿಂಗ್ ಎಂದು ಗೊತ್ತಾಯಿತು ಎಂದರು.
ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಮಾತನಾಡಿ, ಆಪರೇಷನ್ ಕಮಲ ಕಾರ್ಯಾಚರಣೆ ಭಯದಿಂದ ದೂರವಾಣಿ ಕದ್ದಾಲಿಕೆ ಮಾಡಲಾಗುತ್ತಿದೆ. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ ಯಡಿಯೂರಪ್ಪ , ಜೆಡಿಎಸ್‌ನ ಕೆಲವು ಶಾಸಕರ ಫೋನ್ ಟ್ಯಾಪಿಂಗ್ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಈ ಬಗ್ಗೆ 100 ಕ್ಕೆ 100 ರಷ್ಟು ನಮ್ಮ ಬಳಿ ಮಾಹಿತಿಯಿದೆ ಎಂದು ಹೇಳಿದರು.
ಫೋನ್ ಟ್ಯಾಪಿಂಗ್ ಸಂಬಂಧ ಸಮಗ್ರ ತನಿಖೆ ನಡೆಸಬೇಕು. ರಾಜ್ಯದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದ್ದು ಮುಖ್ಯಮಂತ್ರಿ ಹಾಗೂ ಸರ್ಕಾರದ ವಿರುದ್ಧ ಯಾರೂ ಮಾತನಾಬಾರದು ಎಂಬಂತಾಗಿದೆ ಎಂದು ತಿಳಿಸಿದರು.