ನವದೆಹಲಿ: ಕಳೆದ ಹಲವು ದಿನಗಳಿಂದ ಒಂದಲ್ಲಾ ಒಂದು ರದ್ದಾಂತಗಳಿಂದ ಸುದ್ದಿಯಾಗುತ್ತಿರುವ ಜನಪ್ರಿಯ ಫೇಸ್ ಬುಕ್ ಒಡೆತನದ ವಾಟ್ಸಾಪ್ ಇದೀಗ ಮತ್ತೊಂದು ಕಾರಣಕ್ಕೆ ಸುದ್ದಿಯಾಗುತ್ತಿದೆ. ವಾಟ್ಸಾಪ್ ವೆಬ್ ಬಳಕೆದಾರರ ಫೋನ್ ನಂಬರ್ ಗಳು ಇಂಡೆಕ್ಸಿಂಗ್ ಮೂಲಕ ಗೂಗಲ್ ಸರ್ಚ್ ನಲ್ಲಿ ಲಭ್ಯವಿದ್ದು ಹಲವು ಅಪಾಯಗಳಿಗೆ ಎಡೆ ಮಾಡಿಕೊಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಕಳೆದ 5 ದಿನಗಳ ಹಿಂದೆ ಗೂಗಲ್ ಸರ್ಚ್ ನಲ್ಲಿ ವಾಟ್ಸಾಪ್ ಗ್ರೂಪ್ ಗಳ ಮಾಹಿತಿ ಲಭ್ಯವಾಗುತ್ತಿದೆ ಎಂದು ವರದಿಯಾಗಿತ್ತು. ಇದರರ್ಥ ಯಾರು ಬೇಕಾದರೂ ಗೂಗಲ್ ಸರ್ಚ್ ಮೂಲಕ ವಾಟ್ಸಾಪ್ ಗ್ರೂಪ್ ಗಳನ್ನು ಪತ್ತೆಹಚ್ಚಿ ಸುಲಭವಾಗಿ ಜಾಯಿನ್ ಆಗಬಹುದಿತ್ತು.
ಸೆಕ್ಯೂರಿಟಿ ರಿಸರ್ಚರ್ ರಾಜಶೇಖರ್ ರಜಾರಿಯಾ ಅವರ ಹೇಳುವಂತೆ ‘ ವಾಟ್ಸಾಪ್ ವೆಬ್ ಬಳಕೆದಾರರ ಮೊಬೈಲ್ ಸಂಖ್ಯೆಗಳು ಗೂಗಲ್ ಸರ್ಚ್ ನಲ್ಲಿ ಕಾಣಸಿಗುತ್ತಿದೆ. ವಾಟ್ಸಾಪ್ ಅಪ್ಲಿಕೇಶನ್ ನನ್ನು ಸ್ಮಾರ್ಟ್ ಪೋನ್ ಮೂಲಕ ಮಾತ್ರವಲ್ಲದೆ ಲ್ಯಾಪ್ ಟಾಪ್, ಕಂಪ್ಯೂಟರ್ ಗಳ ಮೂಲಕವು ಬಳಕೆ ಮಾಡಬಹುದು. ಮೊಬೈಲ್ ನಂಬರ್ ಗಳ ಸೋರಿಕೆ ವಾಟ್ಸಾಪ್ ವೆಬ್ ಮೂಲಕ ನಡೆದಿದೆ. ಯಾರಾದರೂ ಈ ಅಪ್ಲಿಕೇಶನ್ ನನ್ನು ಲ್ಯಾಪ್ ಟ್ಯಾಪ್ ಮತ್ತು ಪಿ.ಸಿಗಳ ಮೂಲಕ ಬಳಸಿದಾಗ ಅವರ ಮೊಬೈಲ್ ಸಂಖ್ಯೆ ಗೂಗಲ್ ಸರ್ಚ್ ನಲ್ಲಿ ಇಂಡೆಕ್ಸೆಡ್ ಆಗುವ ಮೂಲಕ ಕಾಣಿಸುತ್ತದೆ. ಇದು ಬಳಕೆದಾರರ ವ್ಯೆಯಕ್ತಿಕ ನಂಬರ್ ಗಳಾಗಿದ್ದು, ಯಾವುದೇ ಬ್ಯುಸಿನೆಸ್ ನಂಬರ್ ಗಳಲ್ಲ ಎಂದು ರಜಾರಿಯಾ ತಿಳಿಸಿದ್ದಾರೆ.
ಇದನ್ನೂ ಓದಿ:ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಮೂರು ಭಾರತೀಯ ಚಿತ್ರಗಳು
ಕೆಲದಿನಗಳ ಹಿಂದೆ ಗೂಗಲ್ ಸರ್ಚ್ ನಲ್ಲಿ ಹಲವು ಗ್ರೂಪ್ ಚಾಟ್ ಗಳು ಲಿಂಕ್ ಗಳು ಲಭ್ಯವಾಗಿದ್ದು, ಯಾರು ಬೇಕಾದರೂ ಈ ಲಿಂಕ್ ಗಳ ಸಹಾಯದಿಂದ ವಾಟ್ಸಾಪ್ ಗ್ರೂಪ್ ಗಳಿಗೆ ಯಾವ ಅನುಮತಿ ಇಲ್ಲದೆ ಸೇರಿಕೊಳ್ಳಬಹುದಿತ್ತು. ಈ ಕುರಿತಾಗಿ ವಾಟ್ಸಾಪ್ ಸಂಸ್ಥೆ ಅಂತಹ ಎಲ್ಲಾ ಲಿಂಕ್ ಗಳನ್ನು ತೆಗೆದುಹಾಕುವಂತೆ ಮನವಿ ಮಾಡಿದ ಬಳಿಕ ಗೂಗಲ್ ತನ್ನ ಗೂಗಲ್ ಸರ್ಚ್ ನಲ್ಲಿದ್ದ ಗ್ರೂಪ್ ಚಾಟ್ ಲಿಂಕ್ ಗಳನ್ನು ಡಿಲೀಟ್ ಮಾಡಿತ್ತು ಎಂದು ವರದಿಯಾಗಿದೆ.
ಇದನ್ನೂ ಓದಿ:ಕರ್ನಾಟಕ ಆಕ್ರಮಿತ ಕೆಲಭಾಗಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಲಿದ್ದೇವೆ: ಉದ್ಧವ್ ಠಾಕ್ರೆ
ಈ ಕುರಿತಾಗಿ ಬಳಕೆದಾರರಿಗೆ ಮಾಹಿತಿ ನೀಡಿರುವ ವಾಟ್ಸಾಪ್ ಸಂಸ್ಥೆ ಒಂದು ವೇಳೆ ಯಾವುದೇ ಅಪರಿಚಿತ ವ್ಯಕ್ತಿ ನಿಮ್ಮ ಚಾಟ್ ಗ್ರೂಪ್ ಗಳಲ್ಲಿ ಕಾಣಿಸಿಕೊಂಡರೆ ಅಡ್ಮಿನ್ ಆದವರಿಗೆ ಅಂತಹ ವ್ಯಕ್ತಿಯನ್ನು ಯಾವುದೇ ಸಮಯದಲ್ಲಿ ರಿಮೂವ್ ಮಾಡುವ ಅವಕಾಶವಿದೆ ಎಂದಿದೆ. ಮಾತ್ರವಲ್ಲದೆ ಗೂಗಲ್ ಸರ್ಚ್ ನಲ್ಲಿ ವಾಟ್ಸಾಪ್ ನಂಬರ್ ಕಾಣಿಸಿಕೊಂಡ ಸಮಸ್ಯೆಯನ್ನು ತಕ್ಷಣ ಬಗೆಹರಿಸಲಾಗಿದೆ. ಈಗ ಯಾವುದೇ ಬಳಕೆದಾರರ ವ್ಯೆಯಕ್ತಿಕ ನಂಬರ್ ಗೂಗಲ್ ಸರ್ಚ್ ನಲ್ಲಿ ಲಭ್ಯವಿಲ್ಲ ಎಂದು ಸ್ಪಷ್ಟನೆ ನೀಡಿದೆ.