Advertisement
ಉದಯವಾಣಿಯ ಮಣಿಪಾಲ ಕಚೇರಿಯಲ್ಲಿ ಮಂಗಳವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೋಗದ ಲಕ್ಷಣ, ಚಿಕಿತ್ಸಾ ಕ್ರಮ, ಆರೈಕೆ, ಲಸಿಕೆ ವಿತರಣೆಗೆ ಸಂಬಂಧಿಸಿ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು.
Related Articles
Advertisement
ದುಬಾೖಯಿಂದ ಕರೆ
ಬೆಳ್ತಂಗಡಿಯ ನಿವಾಸಿ ದುಬಾೖಯಲ್ಲಿ ನೆಲೆಸಿರುವ ದಿವಾಕರ್ ಹೆಗ್ಡೆ ಕರೆ ಮಾಡಿ ಬೆಳ್ತಂಗಡಿಯ ಮನೆಯಲ್ಲಿರುವ ಜಾನುವಾರುಗಳಿಗೆ ಚರ್ಮಗಂಟು ರೋಗ ಲಕ್ಷಣ ಕಾಣಿಸಿಕೊಂಡಿದ್ದು, ಜಾನುವಾರುಗಳನ್ನು ಮನೆಯ ಮಕ್ಕಳಂತೆ ಸಲಹುತ್ತಿರುವ ನಮಗೆ ಇದು ತೀರಾ ಆತಂಕ ತಂದಿದೆ ಎಂದರು. ಇಲಾಖೆಯಿಂದ ಕೊಡುತ್ತಿರುವ ಚಿಕಿತ್ಸೆಯನ್ನು ಪಡೆಯುವಂತೆ ತಜ್ಞ ವೈದ್ಯರು ಸಲಹೆ ನೀಡಿದರು. ದ.ಕ. ಮತ್ತು ಉಡುಪಿ ಜಿಲ್ಲೆಯ ರೈತರು, ಹೈನುಗಾರರು ವೈದ್ಯರಿಂದ ಮಾಹಿತಿ ಪಡೆದುಕೊಂಡರು.
ಸಂತೋಷ್ ಶೆಟ್ಟಿ ಆಜ್ರಿ, ಸದಾನಂದ ಆತ್ರಾಡಿ, ಪ್ರಶಾಂತ್ ಬೆಳ್ತಂಗಡಿ
-ಕರುವಿಗೆ ಗುಳ್ಳೆ ಮತ್ತು ಗಂಟು ಕಾಣಿಸಿಕೊಂಡಿದೆ. ಚಿಕಿತ್ಸಾ ಕ್ರಮ ಹೇಗೆ ?
4 ತಿಂಗಳ ಒಳಗಿದ್ದರೆ ಲಸಿಕೆ ಬೇಡ, ಪ್ರತ್ಯೇಕವಾಗಿರಿಸಿ ಹಾರೈಕೆ ಮಾಡಿರಿ, ಮಿಥಲಿನ್ ಬ್ಲೂ ದ್ರಾವಣ ಮೈಗೆ ಹಚ್ಚಬೇಕು. ಬೇವಿನ ಹಚ್ಚಬೇಕು.
– ಹಮೀದ್ ವಿಟ್ಲ
– ರೋಗ ಹರಡುವ ರೀತಿ ಹೇಗೆ?
ವೈರಸ್‌ನಿಂದ ಹರಡುವ ಕಾಯಿಲೆಯಾಗಿದ್ದು, ನೊಣ, ಸೊಳ್ಳೆಗಳಿಂದ ಒಂದು ಜಾನುವಾರಿನಿಂದ ಇನ್ನೊಂದು ಜಾನುವಾರಿಗೆ ಹಬ್ಬಿಸುತ್ತದೆ.
– ಅನುಶೀಲ, ಕೋಟ ಮೂಡುಗಿಳಿಯಾರು
– ರೋಗದ ಲಕ್ಷಣಗಳನ್ನು ಹೇಗೆ ಗುರುತಿಸುವುದು?
ಜಾನುವಾರುಗಳಲ್ಲಿ ಎಲ್ಲ ಕಾಯಿಲೆಗಳಂತೆ ಆರಂಭದಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ. ಜಾನುವಾರುಗಳು ದೈಹಿಕವಾಗಿ ಕುಂದುತ್ತವೆ. ಮೂಗು ಬಾಯಿಯಲ್ಲಿ ಜೊಲ್ಲು ಸುರಿಯುತ್ತದೆ, ಹಾಲು ಕಡಿಮೆ ಯಾಗುತ್ತದೆ.
ಸುಮನಾ ಶೆಟ್ಟಿ, ನಾಡ ಗುಡ್ಡೆಯಂಗಡಿ, ಎಂ. ಎಂ. ಶೆಟ್ಟಿ ಆವರ್ಸೆ, ಲಿಯೋ ಡಿ’ಕೂನ್ ಮಡ್ಯಂತಾರು.
– ಒಂದೆರಡು ದನಗಳಿಗೆ ಲಕ್ಷಣ ಕಾಣಿಸಿಕೊಂಡ ಅನಂತರ ಗುಂಪಿನಲ್ಲಿರುವ ಎಲ್ಲ ದನಗಳಿಗೆ ಇದು ಹರಡುವುದೇ ?
ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಲಕ್ಷಣವಿರುವ ಜಾನುವಾರುಗಳನ್ನು ಕ್ವಾರಂಟೈನ್ ಮಾಡಬೇಕು (ಜಾನುವಾರು ಗುಂಪಿನಿಂದ ಪ್ರತ್ಯೇಕವಾಗಿಸಬೇಕು).
– ರವಿ ಪ್ರಸಾದ್ ಪುತ್ತೂರು, ರವಿಚಂದ್ರ ಪೂಜಾರಿ, ಗಣೇಶ್ ಹೊಸಾಳ ಬಾರಕೂರು
– ರೋಗ ಬಾರದಂತೆ ಹೇಗೆ ಮುಂಜಾಗ್ರತೆ ವಹಿಸಬೇಕು, ಲಸಿಕೆ ಪೂರ್ಣಪ್ರಮಾಣದಲ್ಲಿ ಲಭ್ಯವಿದೆಯೇ ? ಕೆಲವು ಕಡೆಗಳಲ್ಲಿ ಲಸಿಕೆ ಇನ್ನೂ ಬಂದಿಲ್ಲ.
ರೋಗಕ್ಕೆ ನಿಖರವಾದ ಲಸಿಕೆ ಇನ್ನೂ ಬಂದಿಲ್ಲ. ರೋಗ ಬಾರದಂತೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಲಸಿಕೆ ಇದ್ದು, ಇದನ್ನು ಜಾನುವಾರುಗಳಿಗೆ ಹಾಕಿಸಬೇಕು. ನೊಣ, ಸೊಳ್ಳೆಗಳಿಂದ ಹಬ್ಬುವುದರಿಂದ ಇವುಗಳು ಪರಿಸರದಲ್ಲಿ ಬಾರದಂತೆ ನೋಡಿಕೊಳ್ಳಬೇಕು. ಉಡುಪಿ, ದ.ಕ. ಜಿಲ್ಲೆಯಲ್ಲಿ ಲಸಿಕೆ ಲಭ್ಯವಿದ್ದು, ಸಮರೋಪಾದಿಯಲ್ಲಿ ಲಸಿಕಾಕರಣ ನಡೆಯುತ್ತಿದೆ. ಸಿಬಂದಿ ಕೊರತೆ ನಡುವೆಯೂ ಹೊರಗುತ್ತಿಗೆ ಸಿಬಂದಿ, ಕೆಎಂಎಫ್ ಸಿಬಂದಿ ಅವರಿಂದಲೂ ಸಹಕಾರ ಪಡೆದು ಲಸಿಕೆ ನೀಡುವ ಕೆಲಸ ನಡೆಯುತ್ತಿದೆ. ಲಸಿಕೆ ಆಗದ ಪ್ರದೇಶಗಳನ್ನು ಗುರುತಿಸಿ ಕೂಡಲೆ ಲಸಿಕೆ ಕಾರ್ಯ ತ್ವರಿತಗೊಳಿಸಲು ಸೂಚಿಸಲಾಗುವುದು.
ಪದ್ಮ ಗಣೇಶ್, ಕಾರ್ಕಳ, ಮಿಯಾರು, ಪ್ರೇಮ ಹಳ್ಳಾಡಿ, ಜಯ, ಸಂತೆಕಟ್ಟೆ ಹೆಬ್ರಿ
– ಕರುವಿಗೆ ಸೋಂಕಿನ ಲಕ್ಷಣ ಕಾಣಿಸಿಕೊಂಡಿದೆ. ಮನೆ ಮದ್ದು ಪರಿಣಾಮಕಾರಿಯೇ? ಎಷ್ಟು ಸಮಯದಲ್ಲಿ ನಿಯಂತ್ರಣಕ್ಕೆ ಬರುತ್ತದೆ ?
ಕರು ಆಹಾರವನ್ನು ಚೆನ್ನಾಗಿ ಸೇವನೆ ಮಾಡುತ್ತಿದ್ದರೆ ಆತಂಕ ಪಡುವ ಅಗತ್ಯವಿಲ್ಲ. ಮನೆ ಮದ್ದುಗಳಿಗೆ ಸಂಬಂಧಿಸಿ ಆಯುರ್ವೇದ ಔಷಧ ಕ್ರಮದ ಬಗ್ಗೆ ಇಲಾಖೆಯೇ ಹೈನುಗಾರರಿಗೆ ಸಲಹೆಗಳನ್ನು ಪ್ರಕಟಿಸಿದೆ. ಇದನ್ನು ಪಾಲಿಸಿದಲ್ಲಿಯೂ ರೋಗವನ್ನು ನಿಯಂತ್ರಣಕ್ಕೆ ತರಬಹುದು. ಕನಿಷ್ಠ 20 ದಿನಗಳಾದರೂ ಬೇಕು. ಗಾಯವಾಗಿದ್ದರೆ ಸಂಪೂರ್ಣ ಗುಣವಾಗಲು ಜಾಸ್ತಿ ದಿನ ತೆಗೆದುಕೊಳ್ಳಲಿದೆ.
ಪದ್ಮನಾಭ ಭಟ್, ಕಲ್ಲಡ್ಕ
– ದನ 5 ತಿಂಗಳ ಗರ್ಭ ಧರಿಸಿದ್ದು, ಚರ್ಮಗಂಟು ಲಕ್ಷಣದಂತೆ ಕಾಲುಗಳು ಊದಿಕೊಂಡಿವೆ. ಈ ಸಮಯದಲ್ಲಿ ಇಂಜೆಕ್ಷನ್ ಕೊಡಿಸಬಹುದೇ ?
ಸೋಂಕು ಗರ್ಭಕೋಶಕ್ಕೆ ತಗಲಿದಲ್ಲಿ ಗರ್ಭಪಾತದ ಸಾಧ್ಯತೆ ಇರುತ್ತದೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಬೇಕು. ಇಂಜೆಕ್ಷನ್ ಕೊಡಬಹುದು. ಸಮೀಪದ ಪಶುಸಂಗೋಪನೆ ಆಸ್ಪತ್ರೆ ವೈದ್ಯರನ್ನು ಸಂಪರ್ಕಿಸಿ, ಇಂಜೆಕ್ಷನ್ ಮತ್ತು ಚಿಕಿತ್ಸಾ ಕ್ರಮಕ್ಕೆ ಸಲಹೆ ನೀಡ ಲಾಗುವುದು.