Advertisement

ತಳ್ಳುಗಾಡಿ ವ್ಯಾಪಾರದಿಂದ ರಸ್ತೆ ಸಂಚಾರಕ್ಕೆ ಅಡಚಣೆ: ಕ್ರಮಕ್ಕೆ ಆಗ್ರಹ

02:10 AM Jul 15, 2017 | Karthik A |

ಪಾಂಡೇಶ್ವರ: ಸೆಂಟ್ರಲ್‌ ಮಾರ್ಕೆಟ್‌ ಸುತ್ತಮುತ್ತ ನಡೆಯುವ ತಳ್ಳುಗಾಡಿಗಳ ವ್ಯಾಪಾರದಿಂದ ವಾಹನ ಸಂಚಾರ ಅಸ್ತವ್ಯಸ್ತಗೊಳ್ಳುತ್ತದೆ ಎಂದು ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ನಡೆದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಸಾರ್ವಜನಿಕರು ದೂರಿದರು. ಈ ಬಗ್ಗೆ ಶೀಘ್ರವೇ ಅಭಿಯಾನವನ್ನು ಕೈಗೊಂಡು ಸಾರ್ವಜನಿಕರಿಗೆ ತೊಂದರೆಯಾಗದಂತೆ ವ್ಯವಹಾರ ನಡೆಸಲು ತಳ್ಳುಗಾಡಿ ವ್ಯಾಪಾರಿಗಳಿಗೆ ತಿಳಿವಳಿಕೆ ನೀಡುವುದಾಗಿ ಡಿಸಿಪಿ ಹನುಮಂತರಾಯ ತಿಳಿಸಿದರು.

Advertisement

ದೇರಳಕಟ್ಟೆ ಸಮೀಪದ ಬೆಳ್ಮ ಅಂಬೇಡ್ಕರ್‌ಪದವಿನಲ್ಲಿ ರಾತ್ರಿ ವೇಳೆ ಗಾಂಜಾ ವ್ಯವಹಾರ ನಡೆಯುತ್ತಿದ್ದು, ಅಲ್ಲಿ ಸಿ.ಸಿ. ಕೆಮರಾ ಅಳವಡಿಸುವಂತೆ ಸಾರ್ವಜನಿಕರು ಆಗ್ರಹಿಸಿದರು. ಈ ಕುರಿತು ಕ್ರಮ ಜರಗಿಸುವ ಭರವಸೆಯನ್ನು ಡಿಸಿಪಿ ನೀಡಿದರು. ಬೈಕಂಪಾಡಿಯಲ್ಲಿ  ರಾಷ್ಟ್ರೀಯ ಹೆದ್ದಾರಿ ಹದಗೆಟ್ಟಿದ್ದು, ವಾಹನ ಸಂಚಾರ ದುಸ್ತರವಾಗಿದೆ ಎಂಬ ದೂರಿಗೆ ಡಿಸಿಪಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಪತ್ರ ಬರೆದು ದುರಸ್ತಿಗೆ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದರು. ಅಗತ್ಯವಿರುವಲ್ಲಿ ನೋ ಪಾರ್ಕಿಂಗ್‌ ಬೋರ್ಡ್‌ ಅಳವಡಿಕೆಗೂ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು. ತೊಕ್ಕೊಟ್ಟಿನಲ್ಲಿ ರಿಕ್ಷಾಗಳಿಗೆ ಮೀಟರ್‌ ಅಳವಡಿಸಿದ್ದರೂ ಚಾಲಕರು ಅದನ್ನು ಬಳಸುತ್ತಿಲ್ಲ ಎಂಬ ದೂರಿಗೆ ಅವರು, ಈ ಬಗ್ಗೆ ರಿಕ್ಷಾ ಚಾಲಕರ ಸಭೆ ನಡೆಸಲು ಸ್ಥಳೀಯ ಎಸಿಪಿಗೆ ಸೂಚಿಸಲಾಗುವುದು ಎಂದರು.

ಮೂಡಬಿದಿರೆಯ ಪೂಪಾಡಿಕಲ್ಲಿನ 2 ಅಂಗಡಿಗಳಲ್ಲಿ ಸಾರಾಯಿ ಮಾರಲಾಗುತ್ತಿದೆ ಎಂಬ ದೂರು ವ್ಯಕ್ತವಾಯಿತು. ಈ ಬಗ್ಗೆ ಗಮನ ಹರಿಸುವುದಾಗಿ ಡಿಸಿಪಿ ತಿಳಿಸಿದರು. ಸಿಸಿಬಿ ವಿಭಾಗದ ಇನ್ಸ್‌ಪೆಕ್ಟರ್‌ ಸವಿತ್ರತೇಜ, ಎಎಸ್‌ಐ ಯೂಸುಫ್‌, ಹೆಡ್‌ಕಾನ್ಸ್‌ಟೆಬಲ್‌ ಪುರುಷೋತ್ತಮ ಉಪಸ್ಥಿತರಿದ್ದರು. ಜಿಲ್ಲಾ ಬಸ್‌ ಮಾಲಕರ ಸಂಘದ (ಸಿಟಿ ಬಸ್‌) ಪ್ರಧಾನ ಕಾರ್ಯದರ್ಶಿ ಸುಚೇತನ್‌ ಅವರೂ ಉಪಸ್ಥಿತರಿದ್ದು, ಬಸ್‌ ಸಂಚಾರಕ್ಕೆ ಸಂಬಂಧಿಸಿದ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. 

ಸಾರ್ವಜನಿಕರಿಂದ ಬಂದ ದೂರುಗಳು
ಅಪ್ಪರ್‌ ಬೆಂದೂರು 2ನೇ ಕ್ರಾಸ್‌ನಲ್ಲಿ ಜೀಪೊಂದನ್ನು ಕೆಲವು ದಿನಗಳಿಂದ ಫುಟ್‌ಪಾತ್‌ನಲ್ಲಿ ನಿಲ್ಲಿಸಲಾಗಿದ್ದು, ಪಾದಚಾರಿಗಳಿಗೆ ಸಮಸ್ಯೆಯಾಗಿದೆ.

ಜೈಲ್‌ ರೋಡ್‌ನ‌ ಎರಡೂ ಬದಿ ಕಾರುಗಳನ್ನು ನಿಲ್ಲಿಸುತ್ತಿದ್ದು,  ಟ್ರಾಫಿಕ್‌ ಜಾಂ ಆಗುತ್ತಿದೆ.

Advertisement

ಕಂಕನಾಡಿವರೆಗೆ ಪರವಾನಿಗೆ ಹೊಂದಿದ ಕೊಣಾಜೆ ಕಡೆಯಿಂದ ಬರುವ ಖಾಸಗಿ ಬಸ್‌ಗಳು ಸ್ಟೇಟ್‌ಬ್ಯಾಂಕ್‌ ತನಕದ ಟಿಕೆಟ್‌ ಹಣ ಪಡೆದು ಪ್ರಯಾಣಿಕರನ್ನು ಪಂಪ್‌ವೆಲ್‌ ತಂಗುದಾಣದಲ್ಲಿ ಇಳಿಸಿ ಸ್ಟೇಟ್‌ಬ್ಯಾಂಕ್‌ ಕಡೆಗೆ ಹೋಗುವ ಬೇರೆ ಬಸ್‌ ಹತ್ತಿಸಿ ಬಿಡಲಾಗುತ್ತಿದೆ.

ಕೊಣಾಜೆ- ಸ್ಟೇಟ್‌ ಬ್ಯಾಂಕ್‌ ಪರವಾನಿಗೆ ಹೊಂದಿರುವ ಖಾಸಗಿ ಸಿಟಿ ಎಕ್ಸ್‌ಪ್ರೆಸ್‌ ಬಸ್‌ ಒಂದು ಆರ್ಡಿನರಿ ಬಸ್‌ ರೀತಿಯಲ್ಲಿ ಎಲ್ಲ ಕಡೆ ನಿಲ್ಲುತ್ತಿದೆ.   

ಪಾಂಡೇಶ್ವರ ನ್ಯೂ ರೋಡ್‌ನ‌ಲ್ಲಿ ರಸ್ತೆ ಬದಿ ವಾಹನ ನಿಲ್ಲಿಸಲಾಗುತ್ತಿದೆ.

ಮಂಗಳಾದೇವಿಗೆ ಹೋಗುವ 15, 11 ನಂಬರಿನ ಬಸ್‌ಗಳು ಮೋರ್ಗನ್ಸ್‌ಗೇಟ್‌ ಮಾರ್ಗವಾಗಿ ಹೋಗುತ್ತಿದ್ದು, ವಾಪಸ್‌ ಬರುವಾಗ ಮೋರ್ಗನ್ಸ್‌ಗೇಟ್‌ಗೆ ಸಂಚರಿಸದೆ ಬೇರೆ ಮಾರ್ಗವಾಗಿ ಓಡಾಡುತ್ತಿವೆ. 

ಉರ್ವ ಮಾರ್ಕೆಟ್‌ ಮತ್ತು ಸಮೀಪದ ಮಾರಿಯಮ್ಮ ದೇವಸ್ಥಾನದ ಎದುರು ರವಿವಾರ ರಸ್ತೆಯಲ್ಲಿಯೇ ವಾಹನ ನಿಲುಗಡೆ ಮಾಡಲಾಗುತ್ತಿದೆ. 

ಬಿಜೈ ಚರ್ಚ್‌ ಬಳಿಯ ವೃತ್ತದಿಂದ ಬಸ್‌ ನಿಲ್ದಾಣದವರೆಗೆ ಫುಟ್‌ಪಾತ್‌ ಇಲ್ಲ. 

ಬಿಜೈ ಸೂಪರ್‌ ಬಜಾರ್‌ ಬಳಿ ರಸ್ತೆ ದಾಟಲು ಬ್ಯಾರಿಕೇಡ್‌ ಅಳವಡಿಸಿ. 

ನಂತೂರು ಪಾದುವಾ ಕಾಲೇಜು ಎದುರಿನ ರಸ್ತೆ (ಶರ್ಬತ್‌ ಕಟ್ಟೆ ರಸ್ತೆ) ಅಗಲ ಕಿರಿದಾಗಿದ್ದು,  ದೊಡ್ಡ ಗಾತ್ರದ ಲಾರಿಗಳು ಸಂಚರಿಸುತ್ತವೆ.

ಕೆ.ಎಸ್‌.ಆರ್‌.ಟಿ.ಸಿ. ಬಸ್‌ ನಿಲ್ದಾಣದ 200 ಮೀ. ವ್ಯಾಪ್ತಿಯಲ್ಲಿ  ವಾಹನಗಳ ನಿಲುಗಡೆಗೆ ಅವಕಾಶವಿಲ್ಲ. ಆದರೂ ನಿಲ್ಲಿಸಲಾಗುತ್ತಿದೆ.  

ಕೈಕಂಬ- ಗುರುಪುರ- ವಾಮಂಜೂರು ರಸ್ತೆಯಲ್ಲಿ  ಹೆಲ್ಮೆಟ್‌ ಧರಿಸದೆ ದ್ವಿಚಕ್ರ ವಾಹನ ಚಲಾಯಿಸುತ್ತಾರೆ. 

ರೂಟ್‌ ನಂಬರ್‌ 27ರ ಸಿಟಿ ಬಸ್‌ (ಬ್ಲೂ ಬಸ್‌)ನ ನಿರ್ವಾಹಕರೊಬ್ಬರು ಪ್ರಯಾಣಿಕರ ಜತೆ ಅಸಭ್ಯವಾಗಿ ವರ್ತಿಸುತ್ತಾರೆ. ಬಾಕಿ ಚಿಲ್ಲರೆ ನೀಡುತ್ತಿಲ್ಲ.

ಎಂ.ಜಿ. ರಸ್ತೆಯ  ಕೆನರಾ ಕಾಲೇಜು ಎದುರು ಬ್ಯಾನರ್‌ಗಳ ಹಗ್ಗಗಳು ನೇತಾಡುತ್ತಿವೆ. ಡೊಂಗರಕೇರಿಯಲ್ಲಿ ಅನಧಿಕೃತ ಮೊಬೈಲ್‌ ಟವರ್‌ ತಲೆ ಎತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next