Advertisement

ಪ್ರತಿ ತಿಂಗಳ 1ರಂದು ಫೋನ್‌ ಇನ್‌

11:20 AM Jul 02, 2019 | Team Udayavani |

ರಾಯಚೂರು: ಜಿಲ್ಲೆಯ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ಪೊಲೀಸ್‌ ಇಲಾಖೆ ನೇರ ಫೋನ್‌ ಇನ್‌ ಕಾರ್ಯಕ್ರಮ ಆರಂಭಿಸಿದ್ದು, ಸಾರ್ವಜನಿಕರು ನಿರ್ಭಯದಿಂದ ಕಾರ್ಯಕ್ರಮದ ಉಪಯೋಗ ಪಡೆಯಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಸಿ.ಬಿ.ವೇದಮೂರ್ತಿ ತಿಳಿಸಿದರು.

Advertisement

ನಗರದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸೋಮವಾರ ಮಧ್ಯಾಹ್ನ 12 ರಿಂದ 1 ಗಂಟೆವರೆಗೆ ನಡೆದ ನೇರ ಫೋನ್‌ ಇನ್‌ ಕಾರ್ಯಕ್ರಮ ಬಳಿಕ ಅವರು ಮಾತನಾಡಿದರು. ಪ್ರತಿ ತಿಂಗಳ ಮೊದಲನೇ ತಾರೀಖು ನೇರ ಫೋನ್‌ ಕಾರ್ಯಕ್ರಮ ನಡೆಲಾಗುವುದು. ಜಿಲ್ಲೆಯ ಜನ ಯಾವುದೇ ಸಮಸ್ಯೆಗಳಿದ್ದರೆ ನೇರ ಫೋನ್‌ ಇನ್‌ ಕಾರ್ಯಕ್ರಮದ ವೇಳೆ ದೂರು ಸಲ್ಲಿಸಬಹುದು ಎಂದು ತಿಳಿಸಿದರು.

ಸೋಮವಾರ ನಡೆದ ಫೋನ್‌ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ 9 ದೂರುಗಳು ಸಲ್ಲಿಕೆಯಾಗಿವೆ. ಕೆಲವೊಂದು ವೈಯಕ್ತಿಕ ಸಮಸ್ಯೆಗಳಾದರೆ ಹಲವು ಸಾಮಾಜಿಕ ಸಮಸ್ಯೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಂದಿವೆ. ಅದರಲ್ಲಿ ಸಿರವಾರದಲ್ಲಿ ಮಟಕಾ, ಜೂಜಾಟ ದಂಧೆ ಹೆಚ್ಚಾಗಿದ್ದು, ಕ್ರಮ ಕೈಗೊಳ್ಳಬೇಕು. ದೇವದುರ್ಗದಲ್ಲಿ ಕ್ರಿಕೆಟ್ ಬೆಟ್ಟಿಂಗ್‌ ಹಾವಳಿ ಹೆಚ್ಚಾಗಿದ್ದು ಕಡಿವಾಣ ಹಾಕಬೇಕು. ಕವಿತಾಳದಲ್ಲಿ ರಸ್ತೆ ಅಗಲೀಕರಣ ಬಗ್ಗೆ, ರಾಯಚೂರು ಪಟ್ಟಣದ ಕಾಯಿಪಲ್ಲೆ ಮಾರ್ಕೆಟ್‌ನಲ್ಲಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಆಗುತ್ತಿದ್ದು, ಕ್ರಮ ಕೈಗೊಳ್ಳಬೇಕು ಎಂದು ದೂರುಗಳು ಬಂದಿವೆ ಎಂದರು.

ಇನ್ನು ಕೆರೆಬುದೂರು ಗ್ರಾಮದಲ್ಲಿ ಚರಂಡಿ ಮತ್ತು ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಕ್ರಮಕ್ಕೆ ಸೂಚಿಸಬೇಕು, ಸಿಂಧನೂರು ತಾಲೂಕಿನ ತೋಳದಿನ್ನಿ ಗ್ರಾಮದಲ್ಲಿ ಜಮೀನು ವಿವಾದ ಬಗ್ಗೆ ಮತ್ತು ಸಾದಾಪುರದಲ್ಲಿ ಭಟ್ಟಿ ಸಾರಾಯಿ ತಯಾರಿಸುತ್ತಿದ್ದು ಕಡಿವಾಣ ಹಾಕಬೇಕು, ನಗರದ ಸ್ಟೇಷನ್‌ ಏರಿಯಾದಲ್ಲಿ ಮನೆ ಕಟ್ಟಿಸಲು ಸಂಬಂಧಿ ಗಳು ತೊಂದರೆ ಮಾಡುತ್ತಿದ್ದು, ಸಮಸ್ಯೆ ಇತ್ಯರ್ಥಗೊಳಿಸಬೇಕು ಎಂಬಂಥ ದೂರುಗಳು ಬಂದಿವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿಯಮಾನುಸಾರ ಕಾನೂನು ಕ್ರಮ ಜರುಗಿಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಇದೊಂದು ಉತ್ತಮ ಕಾರ್ಯಕ್ರಮ ವಾಗಿದ್ದು, ಸಾರ್ವಜನಿಕರು ಸರಿಯಾಗಿ ಬಳಸಿಕೊಳ್ಳಬೇಕು. ಸಮಸ್ಯೆಗಳನ್ನು ಕೆಳ ಹಂತದಲ್ಲೇ ಇತ್ಯರ್ಥಪಡಿಸಲು ಸಾಧ್ಯವಿದೆ. ಈ ಫೋನ್‌ ಇನ್‌ ಕಾರ್ಯಕ್ರಮವನ್ನು ಸರಿಯಾಗಿ ಬಳಸಿಕೊಳ್ಳುವ ಮೂಲಕ ಉತ್ತಮ ವಾತಾವರಣ ನಿರ್ಮಿಸಿಕೊಳ್ಳಬೇಕು ಎಂದರು. ಪೊಲೀಸ್‌ ಅಧಿಕಾರಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next