Advertisement

ಫೋನ್‌ ಕರೆಗಳಿಗೆ ಮೊರೆ : ಸಮಯ ಕಳೆಯಲು ದೂರವಾಣಿಯೇ ಸಂಗಾತಿ

07:16 PM May 18, 2020 | sudhir |

ಜಾರ್ಜಿಯ: ಕೋವಿಡ್‌ ಮಹಾಮಾರಿಯ ಆರ್ಭಟದ ಹಿನ್ನೆಲೆಯಲ್ಲಿ ಜನರಿಗೆ ಈಗ ನಿಬಿಡ ಚಟುವಟಿಕೆಗಳಿಂದ ತುಸು ವಿರಾಮ ದೊರೆತಿದೆ. ಸಂದೇಶಗಳನ್ನು ಕಳುಹಿಸುತ್ತಿದ್ದ ಹೊಸ ತಲೆಮಾರಿನ ಜನರು ಈಗ ಸ್ನೇಹಿತರು ಹಾಗೂ ಆಪ್ತರಿಗೆ ಕರೆ ಮಾಡಿ ದೀರ್ಘ‌ ಸಮಯ ಮಾತನಾಡುವ ಪ್ರವೃತ್ತಿ ಕಾಣಿಸಿದೆ.

Advertisement

ಕೋವಿಡ್‌ ಸೋಂಕು ಆರಂಭವಾದ ಬಳಿಕ‌ ಫೋನ್‌ ಕರೆಗಳ ಸಂಖ್ಯೆ ಹಾಗೂ ಅವಧಿ ಒಂದೇ ಸಮನೆ ಹೆಚ್ಚಾಗುತ್ತಿರುವುದನ್ನು ಟೆಲಿಕಾಂ ಕಂಪೆನಿಗಳು ಗಮನಿಸಿವೆ. ಮೂಲೆಗುಂಪಾಗಿದ್ದ ಸ್ಥಿರ ದೂರವಾಣಿಗಳು ಕೂಡ ರಿಂಗಣಿಸತೊಡಗಿವೆ.

2004ರಲ್ಲಿ ಅಮೆರಿಕದ ಶೇ.90ಕ್ಕಿಂತ ಅಧಿಕ ಮನೆಗಳು ಸ್ಥಿರ ದೂರವಾಣಿಯನ್ನು ಹೊಂದಿದ್ದವು. ಆದರೆ 2019ರ ವೇಳೆ ಇದು ಶೇ. 40ಕ್ಕೆ ಕುಸಿದಿತ್ತು. ಸ್ಮಾರ್ಟ್‌ ಫೋನ್‌ಗಳು ಸ್ಥಿರ ದೂರವಾಣಿಗಳ ಜಾಗದಲ್ಲಿ ಬಳಕೆಗೆ ಬಂದವು ಮತ್ತು ಜನರು ಮಾತನಾಡುವುದಕ್ಕಿಂತ ಹೆಚ್ಚಾಗಿ ಸಂದೇಶಗಳನ್ನು ಕಳುಹಿಸುವುದಕ್ಕೆ ಅವುಗಳನ್ನು ಬಳಸಲಾರಂಭಿಸಿದರು.

ಅಮೆರಿಕದಲ್ಲಿ ಕರೆ ಮಾಡುವುದಕ್ಕಿಂತ ಐದು ಪಟ್ಟು ಹೆಚ್ಚಿಗೆ ಸಂದೇಶಗಳನ್ನು ರವಾನಿಸಲು ಅಥವಾ ಸ್ವೀಕರಿಸಲು ಜನರು ಸ್ಮಾರ್ಟ್‌ಫೋನ್‌ ಬಳಸುತ್ತಾರೆ. ಹೆಚ್ಚಿನ ವಯೋಗುಂಪಿನವರು ಫೋನ್‌ನಲ್ಲಿ ಮಾತನಾಡುವುದಕ್ಕೆ ಕಡಿಮೆ ಸಮಯ ವಿನಿಯೋಗಿಸುತ್ತಾರೆಂದು 2015ರಲ್ಲಿ ಕೈಗೊಳ್ಳಲಾದ ಸಮೀಕ್ಷೆಯೊಂದು ಹೇಳಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಮಾರ್ಚ್‌ ಮಧ್ಯಭಾಗದಿಂದ ಮೇ 1ರ ವರೆಗಿನ ಅವಧಿಯಲ್ಲಿ ಮೊಬೈಲ್‌ ಫೋನ್‌ ಕರೆಗಳು ಶೇ. 44 ಹೆಚ್ಚಳವಾದರೆ ವೈಫೈ ಕರೆಗಳು ಇಮ್ಮಡಿಗಿಂತಲೂ ಹೆಚ್ಚಾದವು ಎಂದು ವರದಿಯೊಂದು ತಿಳಿಸಿದೆ.

ಮಾರ್ಚ್‌ನಲ್ಲಿ ಕೋವಿಡ್‌ ಸೋಂಕು ಹೆಚ್ಚುತ್ತಿದ್ದಾಗ ಟೆಲಿಕಾಂ ಸೇವಾ ಸಂಸ್ಥೆ ವೆರಿಝೋನ್‌ ವಾರದ ಪ್ರತಿದಿನ ಸರಾಸರಿ 80 ಕೋಟಿ ಕರೆಗಳು ಹೋಗುತ್ತಿದ್ದುದನ್ನು ವರದಿ ಮಾಡಿದೆ. ಇದು ವರ್ಷದ ಅತಿಹೆಚ್ಚು ಕರೆ ಹೋಗುವ ದಿನವಾದ ವಿಶ್ವ ತಾಯಂದಿರ ದಿನದಲ್ಲಿ ಮಾಡಲಾಗುವ ಕರೆಗಳ ಬಹುತೇಕ ದುಪ್ಪಟ್ಟಾಗಿದೆ. ಈ ವರ್ಷ ವಿಶ್ವ ತಾಯಂದಿರ ದಿನ ಕಳೆದ ವರ್ಷದ ಇದೇ ದಿನಕ್ಕೆ ಹೋಲಿಸಿದಲ್ಲಿ ಶೇ. 10 ಹೆಚ್ಚು ಕರೆಗಳು ಹೋಗಿದ್ದವು. ಕರೆಗಳ ಅವಧಿ ಕೂಡ ಹೆಚ್ಚಾಗಿದ್ದು ಜನರು ಫೋನ್‌ನಲ್ಲಿ ಹೆಚ್ಚು ಸಂಪರ್ಕದಲ್ಲಿರುವುದನ್ನು ಇದು ಬಿಂಬಿಸುತ್ತದೆ.

Advertisement

ಇದಲ್ಲದೆ ಸಂದೇಶ ರವಾನೆ ಮತ್ತು ವಿಡಿಯೋ ಕಾನ್ಫೆರೆನ್ಸಿಂಗ್‌ ಸೇವೆಗಳಲ್ಲಿ ಕೂಡ ಹೆಚ್ಚಳ ದಾಖಲಾಗಿದೆ. ಆದರೆ ಫೋನ್‌ ಕರೆಗಳಲ್ಲಿ ಸಂದೇಶ ರವಾನೆ ಮತ್ತು ವಿಡಿಯೋ ಕರೆಗಳಿಗಿಂತ ಹೆಚ್ಚಿನ ಆತ್ಮೀಯತೆ ಇರುತ್ತದೆಯೆಂದು ಜಾರ್ಜಿಯ ನಿವಾಸಿ ಲಾರೆನ್‌ ಪೆಲ್ಲಿಸಿಯರ್‌ ಅವರ ಅಭಿಪ್ರಾಯ. ಸಂದೇಶಗಳಲ್ಲಿ ಭಾವನೆಗಳನ್ನು ವ್ಯಕ್ತಪಡಿಸಲಾಗುವುದಿಲ್ಲ ಮತ್ತು ವಿಡಿಯೋ ಕರೆ ವೇಳೆ ತಾವು ಕಾಣಿಸಿಕೊಳ್ಳುವ ವಿಚಾರದತ್ತ ಗಮನವಿರುತ್ತದೆ. ಹಾಗಾಗಿ ಫೋನ್‌ ಕರೆ ಪರಿಪೂರ್ಣ ಮಧ್ಯದ ಮಾರ್ಗವೆಂದು ಅವರು ಹೇಳುತ್ತಾರೆ.

ಫೋನ್‌ ಕರೆಗಳು ಹೆಚ್ಚಾಗುವುದಕ್ಕೆ ಅನೇಕ ಕಾರಣಗಳಿವೆ. ಹಳ್ಳಿಗಳಲ್ಲಿ ವಾಸಿಸುವವರಿಗೆ ಮತ್ತು ತಾಂತ್ರಿಕವಾಗಿ ಹೆಚ್ಚು ಪರಿಣತರಲ್ಲದ ಹಿರಿಯ ಪೀಳಿಗೆಯವರಿಗೆ ಫೋನ್‌ ಕರೆ ಸುಲಭದ ಮತ್ತು ವಿಶ್ವಾಸಾರ್ಹ ಸಂಪರ್ಕ ಮಾಧ್ಯಮವಾಗಿದೆ. ಜನರು ಈಗ ತಮ್ಮ ಕುಟುಂಬವರ್ಗವಲ್ಲದೆ ಹಳೆಯ ಸ್ನೇಹಿತರೊಂದಿಗೆ ಕೂಡ ಫೋನ್‌ನಲ್ಲಿ ಮಾತನಾಡತೊಡಗಿದ್ದಾರೆ. ತಾವು ಒಂಟಿಯಾಗಿದ್ದೇವೆಂಬ ಭಾವನೆಗೊಳಗಾದಾಗ ಮಾನವ ಸಂಪರ್ಕವನ್ನು ಬಯಸುವ ಜನರ ಬಯಕೆಯನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಮನಃಶಾಸ್ತ್ರಜ್ಞರ ಸಂಘದ ನಿರ್ದೇಶಕಿ ವೈಲ್‌ ರೈಟ್‌ ಹೇಳುತ್ತಾರೆ.

ಫೋನ್‌ ಕರೆಗಳು ಕೋವಿಡ್‌ನಿಂದ ನಿರ್ಮಾಣವಾಗಿರುವ ಆತಂಕದ ಸ್ಥಿತಿಯಿಂದ ಹೊರಬರಲು ಕೂಡ ಜನರಿಗೆ ನೆರವಾಗುತ್ತವೆ. ಜನಜೀವನ ಸಹಜತೆಯತ್ತ ಹೊರಳಿದ ಬಳಿಕ ಫೋನ್‌ ಕರೆಗಳು ಹೀಗೆ ಮುಂದುವರಿಯುತ್ತದೊ ಎಂಬುದನ್ನು ಕಾದುನೋಡಬೇಕಾಗಿದೆ. ಜನರು ಈಗ ತಮಗೆ ಯಾವುದು ಮುಖ್ಯವೆಂದು ಬಿಂಬಿಸುತ್ತಿರುವುದನ್ನು ಪರಿಗಣಿಸಿದಲ್ಲಿ ಫೋನ್‌ ಕರೆಗಳ ಮೂಲಕ ಸಂಪರ್ಕಿಸುವ ಪ್ರವೃತ್ತಿ ಹೀಗೇ ಮುಂದುವರಿಯಬಹುದೆಂದು ಅವರು ಅಭಿಪ್ರಾಯಪಡುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next