Advertisement
ಆಲಿಸುವಿಕೆಯು ಒಂದು ಮಹತ್ವದ ಭಾಷಾ ಕೌಶಲ್ಯವಾಗಿದೆ. ಭಾಷೆಯ ಮೇಲೆ ಹಿಡಿತ ಗಳಿಸಬೇಕಾದರೆ ಒಳ್ಳೆಯ ಆಲಿಸುವಿಕೆ ಅತ್ಯಗತ್ಯ. ಹಾಗೆಯೇ ರಾಜಕೀಯದಲ್ಲಿ ಹಿಡಿತ ಗಳಿಸಬೇಕೆಂದರೆ ಅಲ್ಲಿಯೂ ಆಲಿಸುವಿಕೆ ಇರಲೇಬೇಕು. ಭಾಷೆಗೆ ಹೇಗೆ ಆಲಿಸುವಿಕೆ ಮುಖ್ಯವೋ ಹಾಗೆಯೇ ಭಾಷಣ ಮಾಡುವ ರಾಜಕಾರಣಿಗಳೂ ಆಲಿಸುವಿಕೆಯ ಕಡೆಗೆ ಆದ್ಯ ಗಮನಹರಿಸಬೇಕು. ರಾಜಕಾರಣಿಗಳ ಮೂಲ ಕರ್ತವ್ಯವೇ, ಜನರ ದುಃಖ ದುಮ್ಮಾನಗಳನ್ನು ಆಲಿಸಿ, ಅವುಗಳನ್ನು ನೀಗಿಸುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಅದಕ್ಕೆ ಬೇಕಾದ ‘ಪಾಲಿಸಿ’ (policy) ತರುವುದು.
Related Articles
Advertisement
ಕೇಳಲೆಂದೇ ಇರುವ ಕಿವಿಯನ್ನು ಕಿವುಡಾಗಿಸಿ ಇಟ್ಟುಕೊಂಡಿರುವ ರಾಜಕಾರಣಿಗಳು ಹಾಗೂ ಅಧಿಕಾರಿಗಳಿಂದಾಗಿ ವ್ಯವಸ್ಥೆಯೇ ಕಿವುಡಾಗಿದೆ, ನಮ್ಮ ಮನವಿಯನ್ನು ಯಾರೂ ಕಿವಿಗೇ ಹಾಕಿಕೊಳ್ಳುತ್ತಿಲ್ಲ ಎಂದು ಸಾಮಾನ್ಯ ಜನರು ಒಂದೇ ಸಮನೆ ರೋದಿಸುತ್ತಿದ್ದಾರೆ. ಈ ನಡುವೆ ಜನಪ್ರತಿನಿಧಿಗಳು ಎನಿಸಿಕೊಂಡ ಕೆಲವರ ಮೇಲೆ ಕದ್ದಾಲಿಕೆಯ ಆರೋಪಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ, ಕೇಳುವುದು ಎಷ್ಟು ಪ್ರಧಾನವಾದುದು ಮತ್ತು ಸರಿಯೋ, ಅಷ್ಟೇ ತಪ್ಪು ಹಾಗೂ ಕೆಟ್ಟದ್ದು, ಕದ್ದು ಕೇಳುವುದು ಎಂಬ ಅರಿವು ಅದರಲ್ಲಿ ತೊಡಗಿಸಿಕೊಂಡವರಲ್ಲಿ ಮೂಡಬೇಕಾಗಿದೆ. ಇದು ಬಹಳ ಸರಳವಾದ ತತ್ವದ ಮೇಲೆ ನಿಂತಿದೆ. ಅದರಂತೆ ಎಲ್ಲವನ್ನೂ ಕೇಳಿಸಿಕೊಂಡರೆ, ಜನರು ಹಾಗೂ ಮಾಧ್ಯಮಗಳಿಂದ ಹೊಗಳಿಕೆ, ಅದೇ ಕದ್ದು ಕೇಳಿಸಿಕೊಂಡರೆ ಅವರಿಂದಲೇ ಸಿಗಲಿದೆ ಭಾರೀ ತೆಗಳಿಕೆ!
ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು ತಮಗಿಷ್ಟವಾದ ಹಾಡು, ಮಾತು, ಹರಟೆ ಹಾಗೂ ಭಾಷಣಗಳನ್ನು ಕೇಳಿಸಿಕೊಳ್ಳುವುದು ಸರಿಯಾದ ನಡವಳಿಕೆ. ಆದರೆ ಬೇರೆಯವರ ಫೋನ್ ಸಂಭಾಷಣೆಗಳಿಗೆ ಕಳ್ಳ ಮಾರ್ಗಗಳ ಮೂಲಕ ತಮ್ಮ ಈಯರನ್ನು ತೂರಿಸುವುದು ಮಾತ್ರ ಅತ್ಯಂತ ಕೆಟ್ಟ ಚಾಳಿ. ಇದರ ಜಾಲಕ್ಕೆ ಸಿಕ್ಕಿಬಿದ್ದು ಎಷ್ಟೋ ರಾಜಕಾರಣಿಗಳು, ತಮ್ಮ ಪಾಳಿ ಮುಗಿಯುವ ಮುನ್ನವೇ ಅಧಿಕಾರದಿಂದ ಕೆಳಗೆ ಇಳಿದ ಉದಾಹರಣೆಗಳು ಸಾಕಷ್ಟಿವೆ. ಅಂದರೆ ಕಳ್ಳಗಿವಿಯ ಮೊರೆ ಹೋದರೆ ಒಂದಲ್ಲ ಒಂದು ದಿನ ಜನರಿಂದಲೇ ಚೆನ್ನಾಗಿ ಕಿವಿ ಹಿಂಡಿಸಿಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ ಎನ್ನುವುದಂತೂ ಸುಸ್ಪಷ್ಟ!
ಆಳುಗರೇ ನೀವೊಳ್ಳೆಯ ಕೇಳುಗರಾಗಿ ಎಂಬ ನಿರೀಕ್ಷೆ ಜನಸಾಮಾನ್ಯರದ್ದು. ಅವರಿಗೋ ಅದನ್ನು ಕೇಳುವುದಕ್ಕಿಂತಲೂ, ಬೇರೆಯವರ ಮಾತುಗಳನ್ನು ಕೇಳಲು, ಬೇರೆಯವರು ಹೇಳಿದ್ದನ್ನು ಯಾರಿಗೂ ಗೊತ್ತಾಗದಂತೆ ಧ್ವನಿ ಮುದ್ರಿಸಿ ಜನರಿಗೆ ಕೇಳಿಸಲು ಹಾಗೂ ಕೊನೆಗೆ ಜನರ ಮುಂದೆ ಬಂದು ಮತ ಕೇಳುವುದು ಈ ಬಗೆಯ ಕೆಲಸಗಳಲ್ಲಿಯೇ ಅತಿಯಾದ ಆಸಕ್ತಿ. ಹೀಗಾಗಿರುವುದರಿಂದಲೇ ಜನರಿಗೆ ರಾಜಕೀಯದ ಬಗ್ಗೆ ನಿರಾಸಕ್ತಿ ಮೂಡಿರುವುದು ಎಂದು ಬೇರೆ ಹೇಳಬೇಕಾಗಿಲ್ಲ ನೋಡಿ. ಈ ಬಗೆಯ ಕೇಳುವಿಕೆಯ ಫಲವಾಗಿಯೇ ಅಲ್ಲವೇ, ಆ(ವೀ)ಡಿಯೋ ಟೇಪ್, ಫೋನ್ ಟ್ಯಾಪ್ ಇತ್ಯಾದಿಗಳು ರಾಜಕೀಯದಲ್ಲಿ ಈ ಮಟ್ಟಿಗೆ ಸುದ್ದಿಯಾಗುತ್ತಿರುವುದು!
ಈ ಟೇಪ್ ಹಾಗೂ ಟ್ಯಾಪ್‌ಗ್ಳಲ್ಲಿ ಅತಿಯಾಗಿ ತೊಡಗಿಸಿಕೊಂಡವರೂ ಒಂದಲ್ಲ ಒಂದು ದಿನ ಟ್ರ್ಯಾಪ್ ಆಗುವುದಂತೂ ಶತಃಸಿದ್ಧ! ‘ನೋಡಲು ಎರಡು ಕಣ್ಣು ಸಾಲದು’ ಎನ್ನುವಂತೆ ಕದ್ದಾಲಿಸುವವರದ್ದು ‘ಕೇಳಲು ಎರಡು ಕಿವಿ ಸಾಲದು’ ಎಂಬ ಸೂತ್ರ. ಇದರಲ್ಲಿಲ್ಲ ತನ್ನ ಪಾತ್ರ ಎಂದರೂ, ಸತ್ಯಾಂಶ ಬಹಿರಂಗವಾಗುವುದು ತನಿಖೆಯಿಂದ ಮಾತ್ರ. ‘ಮೈಯ್ಯೆಲ್ಲಾ ಕಿವಿಯಾಗಿ ಕೇಳುವುದು’, ‘ಗೋಡೆಗಳಿಗೂ ಕಿವಿಯಿದೆ’ ಎಂಬಿತ್ಯಾದಿ ಮಾತುಗಳ ಸುಧಾರಿತ ಹಾಗೂ ಆಧುನಿಕ ರೂಪವೇ ಈ ಕದ್ದಾಲಿಕೆಗೆ ಕಾರಣವಾಗುವ ಈ ಕಳ್ಳಗಿವಿಯೆಂಬ ‘ಪಂಚ್’ಇಂದ್ರಿಯ!
ಒಗ್ಗರಣೆ: ತನ್ನ ಗಂಡ ಏನು ಮಾತನಾಡುತ್ತಾನೆ ಎಂದು ಕಿವಿಗೊಡುವ ಹೆಂಡತಿಯರೇ ಈ ಕದ್ದಾಲಿಕೆಯ ಶಾಶ್ವತ ರಾಯಭಾರಿಗಳು!