Advertisement

ಟಿಕ್‌ಟಾಕ್‌ ಅವಘಡ ತಗ್ಗಲಿ ಫೋನ್‌ ವ್ಯಸನ

10:58 PM Jun 18, 2019 | Team Udayavani |

ಪಬ್‌ಜಿಯ ನಂತರ ಭಾರತವೀಗ ಟಿಕ್‌ಟಾಕ್‌ ಮಯವಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ದೇಶದ ಯುವ ಪೀಳಿಗೆ ಈ ಕಿರು ವಿಡಿಯೋ ಆ್ಯಪ್‌ಗೆ ಮಾರುಹೋಗಿದೆ. ಇದೆಲ್ಲದರ ಮಧ್ಯೆ ಟಿಕ್‌ಟಾಕ್‌ ಮಾದರಿಯ ವಿಡಿಯೋ ಆಧಾರಿತ ಆ್ಯಪ್‌ಗ್ಳ ಬಗ್ಗೆ ದೇಶದಲ್ಲಿ ತಕರಾರು ಇದ್ದೇ ಇದೆ. ಬಳಕೆದಾರರು ಕೆಲ ಲೈಕ್‌ಗಳ ಹುಚ್ಚಿಗಾಗಿ ಅಪಾಯಕಾರಿ ಸ್ಟಂಟ್‌ ಮಾಡಲು ಹೋಗಿ ಪ್ರಾಣಕ್ಕೆ ಕುತ್ತುತಂದುಕೊಂಡ ಉದಾಹರಣೆಗಳಿವೆ. ಇದೀಗ ತುಮಕೂರಿನ ಟಿಕ್‌ಟಾಕ್‌ ಬಳಕೆದಾರ ಯುವಕನೊಬ್ಬ ಗೆಳೆಯನ ಜೊತೆ ಸೇರಿ ಸ್ಟಂಟ್‌ ಮಾಡಲು ಹೋಗಿ, ಕತ್ತಿನ ಮೂಳೆ ಮುರಿದುಕೊಂಡು ಆಸ್ಪತ್ರೆ ಸೇರಿದ್ದಾನೆ.

Advertisement

ಇತ್ತೀಚೆಗಷ್ಟೇ, ತಮಿಳುನಾಡಿನಲ್ಲಿ 24 ವರ್ಷದ ವಿವಾಹಿತೆಯೊಬ್ಬಳು, ಗಂಡ ತನಗೆ ಟಿಕ್‌ಟಾಕ್‌ ಬಳಸಲು ಬಿಡುತ್ತಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಸುದ್ದಿ ಹೊರಬಿದ್ದಿತ್ತು, ಕಳೆದ ತಿಂಗಳು ಮಧ್ಯಪ್ರದೇಶದಲ್ಲಿ 16 ವರ್ಷದ ಹುಡುಗನೊಬ್ಬ ನಿರಂತರ ಆರು ಗಂಟೆ ಪಬ್‌ಜಿ ಆಡಿ ಹೃದಯಾಘಾತದಿಂದ ಮೃತಪಟ್ಟಿದ್ದ. ಈ ಎಲ್ಲಾ ಘಟನೆಗಳನ್ನು ನೋಡಿದಾಗ, ಭಾರತದಲ್ಲಿ ಡಿಜಿಟಲ್‌ ವ್ಯಸನ ಮಿತಿಮೀರುತ್ತಿದ್ದು, ಪರಿಸ್ಥಿತಿಯನ್ನು ತಹಬದಿಗೆ ತರುವ ಗಂಭೀರ ಪ್ರಯತ್ನಗಳಾಗಬೇಕಿದೆ ಎನ್ನುವುದು ಅರಿವಾಗುತ್ತದೆ.

ಇಂದು ಸ್ಮಾರ್ಟ್‌ಫೋನ್‌ಗಳು ಎಷ್ಟೆಲ್ಲ ಭಾರತೀಯರ ಕಿಸೆಗೆ ಸೇರಿವೆಯೆಂದರೆ, ಚೀನಾ ಮೂಲದ ಟಿಕ್‌ಟಾಕ್‌ ಒಂದಕ್ಕೇ ಭಾರತದಲ್ಲಿ 20 ಕೋಟಿಗೂ ಅಧಿಕ ಬಳಕೆದಾರರಿದ್ದಾರೆ! ಅನೇಕ ಯುವಕರು ಈ ಆ್ಯಪ್‌ನಿಂದ ರಾತ್ರೋರಾತ್ರಿ ಹಿಟ್‌ ಆದ ಉದಾಹರಣೆಯೂ ಉಂಟು, ಕೆಲವರಿಗೆ ಟಿಕ್‌ಟಾಕ್‌ನಿಂದಲೇ ಸಿನೆಮಾದಲ್ಲಿ ನಟಿಸುವ ಅವಕಾಶವೂ ದೊರೆತಿದೆ. ಈ ಎಲ್ಲಾ ಅಂಶಗಳೂ ಇಂಥ ಆ್ಯಪ್‌ಗ್ಳ ಪ್ರಖ್ಯಾತಿಗೆ ಮುಖ್ಯ ಕಾರಣ. ಗಮನಾರ್ಹ ವಿಷಯವೆಂದರೆ, ಚೀನಾ ಮೂಲದ ಟಿಕ್‌ಟಾಕ್‌ ಆಗಲಿ, ದಕ್ಷಿಣ ಕೊರಿಯಾ ಮೂಲದ ಅಝರ್‌ನಂಥ ಆ್ಯಪ್‌ಗ್ಳಾಗಲಿ, ಇವುಗಳ ಮುಖ್ಯ ಟಾರ್ಗೆಟ್‌ ಗ್ರಾಮೀಣ ಭಾಗದ ಯುವಕರು ಎನ್ನುವುದು.

ಈ ಕಾರಣಕ್ಕಾಗಿಯೇ ಇಂಥ ಆ್ಯಪ್‌ಗ್ಳ ತುಂಬೆಲ್ಲ ದೇಶದ ಗ್ರಾಮೀಣ ಯುವಕ-ಯುವತಿಯರೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಪೆದ್ದು ಪೆದ್ದಾಗಿ ವರ್ತಿಸುವವರಿಗೂ ಲಕ್ಷ ಲಕ್ಷ ಲೈಕ್‌ಗಳು ಸಿಗುತ್ತಿರುವುದರಿಂದ, ಎಷ್ಟೋ ಸಲ ಹದ್ದುಮೀರುವ ಪ್ರವೃತ್ತಿ ಜಾಸ್ತಿಯಾಗುತ್ತಿದೆ. 15-30 ಸೆಕೆಂಡ್‌ಗಳ ವಿಡಿಯೋಕ್ಕೆ ಬರುವ ಅಸಂಖ್ಯ ಲೈಕ್‌ಗಳು ಬಳಕೆದಾರರನ್ನು ತೀವ್ರ ವ್ಯಸನಕ್ಕೆ ದೂಡುತ್ತಿವೆ. ಯಾವ ಮಟ್ಟಕ್ಕೆಂದರೆ, ಬೆಳಗ್ಗೆ ಎದ್ದಾಗಿನಿಂದ ರಾತ್ರಿಯವರೆಗೆ ಮೊಬೈಲ್‌ನಲ್ಲೇ ಮುಳುಗಿ ಹೋಗುವಷ್ಟು.

ಇತ್ತೀಚೆಗಷ್ಟೇ ಅಶ್ಲೀಲತೆಯ ಪ್ರಸರಣವಾಗುತ್ತಿದೆ ಎಂದು ಟಿಕ್‌ಟಾಕ್‌ ಅನ್ನು ಭಾರತದಲ್ಲಿ ನಿಷೇಧಿಸಲಾಗಿತ್ತು, ಕಾನೂನು ಹೋರಾಟ ಮಾಡಿ ನಿಷೇಧ ತೆರವುಗೊಳಿಸಲು ಚೀನಾ ಮೂಲದ ಅದರ ಮಾತೃಸಂಸ್ಥೆ ಬೈಟ್‌ಡ್ಯಾನ್ಸ್‌ ಟೆಕ್ನಾಲಜೀಸ್‌ ಯಶಸ್ವಿಯಾಗಿತ್ತು. ನಿಷೇಧದಿಂದಾಗಿ ತನಗೆ ದಿನಕ್ಕೆ 3.5 ಕೋಟಿ ರೂಪಾಯಿ ಲುಕ್ಸಾನಾಗುತ್ತಿದೆ ಎಂದು ಅದು ಕೋರ್ಟಿಗೆ ಹೇಳಿತ್ತು! ಜನರಿಗೆ ಇದು ಟೈಂಪಾಸ್‌ ಆ್ಯಪ್‌ ಆಗಿರಬಹುದು, ಆದರೆ ಇದು ಕೋಟ್ಯಂತರ ರೂಪಾಯಿಗಳ ವಹಿವಾಟು ಎನ್ನುವುದು ಅಷ್ಟೇ ಸತ್ಯ. ತಾನು ಬಳಕೆದಾರರ ಹಿತದೃಷ್ಟಿಯಿಂದ ಕೆಲವು ಕ್ರಮಗಳನ್ನೂ ಕೈಗೊಳ್ಳುತ್ತೇನೆಂದು ಈ ಸಂಸ್ಥೆ ಹೇಳಿದ ಮೇಲೆ ಕೊನೆಗೂ ನಿಷೇಧ ತೆರವುಗೊಂಡಿತ್ತು.

Advertisement

ಇಲ್ಲಿ, ಎಲ್ಲಾ ಜವಾಬ್ದಾರಿಯನ್ನೂ ಇಂಥ ಕಂಪೆನಿಗಳ ಮೇಲೆ ಹೊರಿಸುವುದೂ ತಪ್ಪಾಗುತ್ತದೆ. ಬಳಕೆದಾರರೂ ಜಾಗ್ರತೆ ವಹಿಸುವ ಅಗತ್ಯವಿದೆ. ಡಿಜಿಟಲ್‌ ವ್ಯಸನ ಗಂಭೀರ ಸಮಸ್ಯೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಜನರ ಕೆಲಸ, ಮಕ್ಕಳ ಆಟೋಟಗಳು ಮತ್ತು ಸಂಬಂಧಗಳಿಗೆ ಮೊಬೈಲ್‌ ಫೋನ್‌ ಮಾರಕವಾಗುತ್ತಿದೆ. ನಿತ್ಯ ಎಷ್ಟು ಗಂಟೆ ಫೋನಿನಲ್ಲಿ ಕಳೆಯುತ್ತಿದ್ದೇವೆ ಎಂಬುದರ ಮೇಲೆ ಗಮನವಿರಬೇಕು. ನಿದ್ರಾಹೀನತೆ, ಖನ್ನತೆ, ಕೀಳರಿಮೆಗೆ ಈ ಡಿಜಿಟಲ್‌ ವ್ಯಸನ ಕಾರಣವಾಗುತ್ತಿದೆ. ಡಿಜಿಟಲ್‌ ಪರದೆಯ ಒಳಗಿರುವುದೇ ನಿಜ ಜಗತ್ತು ಎಂಬ ಭ್ರಮೆ ನಮ್ಮನ್ನು ಆವರಿಸಬಾರದು.

ನಮ್ಮ ಸಮಯ, ಮಾನಸಿಕ ಸಮತೋಲನವನ್ನು ಹಾಳು ಮಾಡುತ್ತಿರುವ ಆ್ಯಪ್‌ಗ್ಳ ವ್ಯಾಮೋಹದಿಂದ ಹೊರಬರಲೇಬೇಕಾದ ಅಗತ್ಯವಿದೆ. ದಿಢೀರ್‌ ಪ್ರಖ್ಯಾತಿಗಾಗಿ ಹುಚ್ಚಾಟಕ್ಕಿಳಿಯುವುದನ್ನು ಬಿಡಬೇಕು ಎನ್ನುವ ಪಾಠವನ್ನು ತುಮಕೂರಿನಲ್ಲಾದ ಘಟನೆ ಸಾರಿ ಹೇಳುತ್ತಿದೆ. ಈಗಲೇ ಎಚ್ಚೆತ್ತುಕೊಂಡು ಡಿಜಿಟಲ್‌ ವ್ಯಸನದಿಂದ ಮುಕ್ತರಾಗಲು ಪ್ರಯತ್ನ ಆರಂಭಿಸುವುದು ಒಳಿತು. ನೆನಪಿರಲಿ ನಿಜಕ್ಕೂ ಬದುಕು ಇರುವುದು ಸ್ಕ್ರೀನಿನ ಒಳಗಲ್ಲ, ಹೊರಗೆ.

Advertisement

Udayavani is now on Telegram. Click here to join our channel and stay updated with the latest news.

Next