ಬೆಂಗಳೂರು: ಪುಣೆ-ಬೆಂಗಳೂರು ಷಟ್ಪಥ ರಸ್ತೆ ಕಾಮಗಾರಿಯನ್ನು ಅತಿ ಶೀಘ್ರದಲ್ಲೇ ಕೈಗೊಳ್ಳಲಿದ್ದು ಭೂ ಸ್ವಾಧೀನ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದರು. ನಗರದ ಖಾಸಗಿ ಹೋಟೆಲ್‌ನಲ್ಲಿ ಹೆದ್ದಾರಿ ಕಾಮಗಾರಿಗಳ ಕುರಿತು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಮ್ಮುಖದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಮಾತನಾಡಿದರು.
ಪುಣೆ -ಬೆಂಗಳೂರು ಷಟ್ಪಥ ರಸ್ತೆ ಕಾಮಗಾರಿ ಸದ್ಯದಲ್ಲೇ ಕೈಗೆತ್ತಿಕೊಳ್ಳಲಾಗುತ್ತದೆ. ಈ ಸಂಬಂಧ ಅಗತ್ಯ ಪ್ರಕ್ರಿಯೆ ಆರಂಭಿ ಸಲಿದ್ದೇವೆ. ಪುಣೆ – ಬೆಂಗಳೂರು ಎಕ್ಸ್ ಪ್ರಸ್ ಮಾರ್ಗ ಕರ್ನಾಟಕ, ಮಹಾ ರಾಷ್ಟ್ರಕ್ಕೆ ಅವಶ್ಯ. ಹೀಗಾಗಿ ಭೂಸ್ವಾಧೀನ ಕಾರ್ಯಕ್ಕೂ ಸದ್ಯದಲ್ಲೇ ಚಾಲನೆ ನೀಡಲಿದ್ದೇವೆಂದರು. ಹುಬ್ಬಳ್ಳಿ- ಸೊಲ್ಲಾಪುರ ಹೆದ್ದಾರಿಯನ್ನು ಚತುಷ್ಪಥ ಹೆದ್ದಾರಿ ಯಾಗಿ ಮೇಲ್ದರ್ಜೆಗೇರಿಸುವಂತೆ ಡಿಸಿಎಂ ಗೋವಿಂದ ಕಾರಜೋಳ ಮನವರಿಕೆ ಮಾಡಿಕೊಟ್ಟಿದ್ದರಿಂದ ಚತುಷ್ಪಥ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ತಾತ್ವಿಕ ಒಪ್ಪಿಗೆ ನೀಡಿದರು.
ಹುಬ್ಬಳಿ- ಸೊಲ್ಲಾಪುರ ಮಾರ್ಗದಲ್ಲಿ ವಾಹನಗಳ ಸಂಚಾರ ಅಧಿಕ ಪ್ರಮಾಣ ದಲ್ಲಿವೆ. ಈ ಹೆದ್ದಾರಿಯನ್ನು ಚತುಷ್ಪಥ ಹೆದ್ದಾರಿಗೆ ಮೇಲ್ದರ್ಜೆಗೇರಿಸುವಂತೆ ಸಚಿವ ಗಡ್ಕರಿಗೆ ಮನವರಿಕೆ ಮಾಡಿಕೊಟ್ಟರು. ಈ ಚತುಷ್ಪಥ ಹೆದ್ದಾರಿ ಕಾಮಗಾರಿ ನಿರ್ಮಾಣಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಕೈಗೊಳ್ಳುವಂತೆಯೂ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ಕಾಮಗಾರಿಯನ್ನು ತ್ವರಿತವಾಗಿ ಮುಗಿಸಲು ನಿವೃತ್ತ ಅಧಿಕಾರಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡು ಭೂ ಸ್ವಾಧೀನ ಪ್ರಕ್ರಿಯೆ ಬೇಗ ಪೂರ್ಣ ಗೊಳಿಸುವಂತೆ ನಿರ್ದೇಶನ ನೀಡಿದರು.
ರಾಜ್ಯದಲ್ಲಿ ಹೊಸ ಮಾರ್ಗಗಳಿಗೆ ಸಂಬಂಧಿಸಿದಂತೆ ಭೂಮಿ ಲಭ್ಯತೆ ಮತ್ತು ಸ್ವಾಧೀನ ಪ್ರಕ್ರಿಯೆ ಬಗ್ಗೆಯೂ ಚರ್ಚೆ ನಡೆದಿದೆ. ಬೆಂಗಳೂರು ಅಭಿವೃದ್ಧಿಗೆ ಪೂರಕವಾಗುವಂತೆ ರಸ್ತೆ ಹಾಗೂ ರಿಂಗ್ ರಸ್ತೆ ಮತ್ತು ಪೆರಿಫೆರಲ್ ರಿಂಗ್ ರಸ್ತೆ ಯೋಜನೆ ಹಾಗೂ ರಾಜ್ಯಕ್ಕೆ ಅಗತ್ಯವಿರುವ ಹೊಸ ಮಾರ್ಗ, ಹೆದ್ದಾರಿ ಕಾಮಗಾರಿ ಶೀಘ್ರ ಮುಕ್ತಾಯ, ಮೇಲ್ಸೇತುವೆ ಇತ್ಯಾದಿ ಹಲವು ಯೋಜನೆಗಳ ಬಗ್ಗೆ ಸಿಎಂ ಬಿಎಸ್‌ವೈ ಕೇಂದ್ರ ಸಚಿವರ ಗಮನ ಸೆಳೆದರು.
ಸಚಿವರು ಗರಂ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇದ್ದ ವೇಳೆ ರಸ್ತೆ ಕಾಮಗಾರಿ ಪ್ರಕ್ರಿಯೆ ವೇಗವಾಗಿ ಸಾಗುತ್ತಿರಲಿಲ್ಲ ಎಂದು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು. ಇದಕ್ಕೆ ಗರಂ ಆದ ಸಚಿವರು, ಈಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರ ಇದೆ. ಯಾವುದೇ ಸಬೂಬು ನೀಡದೆ, 1500 ಕಿ.ಮೀ. ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.