Advertisement
ತನ್ನ ಮನೆಯೆಂಬ ಮನೋರಾಜ್ಯದಲ್ಲೇ ಇನ್ನಿಲ್ಲದಂತೆ ಸುತ್ತಾಡಿ, ಸುಳಿದಾಡಿ, ಸಂಘರ್ಷಗಳಿಗೆ ಢಿಕ್ಕಿ ಹೊಡೆದು, ಭಾವನೆಗಳ ತಡಕಾಡಿ, ಚಿನಕುರುಳಿಯಂತೆ ನಗೆಯ ಮಂಟಪ ಕಟ್ಟಿ , ನಡುಗಿಸಿದ ತಲ್ಲಣದಲ್ಲೂ ತತ್ವಗ್ರಾಹಿಯಾಗಿ, ಚೆಲ್ಲಾಪಿಲ್ಲಿಯಾಗಿ ಹರಡಿಹೋದ ಭಾವ ತುಣುಕುಗಳನ್ನು ಒಂದೊಂದಾಗಿ ಹೆಕ್ಕುತ್ತ, ಒಟ್ಟು ಸೇರಿಸುವ ಪ್ರಯತ್ನದಲ್ಲಿ ಒಮ್ಮೊಮ್ಮೆ ವಿಫಲಳಾಗಿ ಬಿಕ್ಕುತ್ತ, ಚೆಲ್ಲುವ ಕೈಗಳನ್ನು ಹತ್ತಿಕ್ಕಿ ಹಕ್ಕು ಸ್ಥಾಪಿಸುತ್ತ, ಘಟನೆ, ವಿಘಟನೆ, ಪ್ರತಿಭಟನೆಗಳ ಮಿಶ್ರಭಾವದಾಟದ ಸೂಕ್ಷ್ಮ ಸ್ತರಗಳನ್ನೆಲ್ಲ ತನ್ನ ಒಳಗಣ್ಣಲ್ಲಿ ಸೆರೆಹಿಡಿದು, ಅಕ್ಷರಗಳಿಗೆ ರೆಕ್ಕೆ ಹಚ್ಚಿ ಬರಹದ ಬಾನಲ್ಲಿ ಹಾರಿಬಿಡುವ ಅವಳ ಹವ್ಯಾಸ ಇಂದು ನಿನ್ನೆಯದಲ್ಲ. ಆಕೆಯ ಇಂಥ ಸೃಜನಶೀಲ ಸಂವೇದನೆಗಳು ಇತಿಹಾಸದ ದಾಖಲೆಗಳಿಗೆ ಸಾಕ್ಷಿಯಾಗುತ್ತದೆ. ಗೃಹಿಣಿಯ ಬದುಕಿನೊಂದಿಗೆ ಬರಹ ಎನ್ನುವುದು ಅದೆಷ್ಟೊ ಹಿಂದಿನಿಂದಲೇ ಆಕೆಯ ಮನೋಭೂಮಿಕೆಯ ಆತ್ಮ ಸಂಗಾತವಾಗಿ ಬೆಳೆದುಬಂದಿದೆ.
Related Articles
Advertisement
ಇನ್ನು ಒಂದು ಕಾಲದ ಕನ್ನಡ ಸಾಹಿತ್ಯ ಲೋಕದ ಬರಹಗಾರ್ತಿಯರಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿದವರು ತ್ರಿವೇಣಿಯವರು. ಮಾನಸಿಕ ರೋಗಿಯೆಂದು ಸಮಾಜದ ತಿರಸ್ಕಾರಕ್ಕೆ ಪಾತ್ರವಾಗುವ ಮಾನುಷಿಯ ಮಾನಸ ಲೋಕದ ಸಂಕಟ, ವಿಪ್ಲವ, ತಲ್ಲಣಗಳು ಹೇಗೆ ಆಕೆಯನ್ನು ವಿಭ್ರಮೆಗೊಳಿಸಿ ಪ್ರಪಂಚದ ಸಾಮಾನ್ಯತೆಯಿಂದ ಪ್ರತ್ಯೇಕಿಸುತ್ತದೆ ಎಂಬುದನ್ನು ತ್ರಿವೇಣಿಯವರು ತಮ್ಮ ಕಾದಂಬರಿಯ ಪಾತ್ರಗಳ ಮೂಲಕ ಕಟ್ಟಿಕೊಡುತ್ತಾರೆ. ಒಬ್ಬ ಗೃಹಿಣಿಯಾಗಿ, ಮನೋವಿಶ್ಲೇಷಕಿಯಾಗಿ ತ್ರಿವೇಣಿ ತಮ್ಮ ಬರಹದಲ್ಲಿ ಎಷ್ಟೋ ಸಾಮಾಜಿಕ ಸಮಸ್ಯೆಗಳಿಗೆ “ಮನಸು ಕಾರಣ’ ಎಂಬ ಹೊಸ ವಿಚಾರವನ್ನು ತೆರೆದಿಡುವುದರ ಮೂಲಕ ತಾತ್ವಿಕತೆಯ ಮಹತ್ವವನ್ನು ಪಡೆಯುತ್ತಾರೆ.
ಗೃಹಿಣಿಯ ಭಾವ ನವಿರು, ಸಹ್ಯ ಪ್ರವೃತ್ತಿ, ಪುಟ್ಟ ಪುಟ್ಟ ಖುಷಿಯನ್ನು ಹೆಕ್ಕಿ ಹಿಗ್ಗುವ ಚಿಕ್ಕ ಮಕ್ಕಳ ಮುಗ್ಧ ನಿರಾಳ ಭಾವಸಂಚಿಕೆಯಲ್ಲೇ ಹುಟ್ಟು-ಸಾವುಗಳ ನಡುವಿನ ಬದುಕಿನ ಅವ್ಯಾಹತಗಳು, ಅನಿರೀಕ್ಷಿತಗಳ ಚಿಂತನೆಯ ಹೊಳಹನ್ನು , ಜಟಿಕ ಕ್ಷಣಗಳನ್ನು ಕಟ್ಟಿಕೊಡುವ ವೈದೇಹಿಯವರ ಬರಹಗಳು ಅವರ ಸ್ವಾನುಭವದ, ಅವಲೋಕನ ದೃಷ್ಟಿಯ ವೈಶಾಲ್ಯತೆಯನ್ನು ಬಿಂಬಿಸುತ್ತದೆ.
ಸಾರಾ ಅಬೂಬಕರ್ ಅವರು ಮುಸ್ಲಿಂ ಮನೆಯ ಗೃಹಿಣಿಯಾಗಿ ತಮಗೆದುರಾದ ಸಮಸ್ಯೆಗಳನ್ನು , ತಾವು ನೋಡಿದ ಬದುಕನ್ನೂ ದಿಟ್ಟವಾಗಿ ತಮ್ಮ ಬರಹದಲ್ಲಿ ತೋಡಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಅವರು ಅನೇಕ ಸಾಮಾಜಿಕ ಮತೀಯ ವಿರೋಧವನ್ನು ಎದುರಿಸಿದರೂ ತಮ್ಮ ಬರವಣಿಗೆಯ ಸಿದ್ಧಾಂತವನ್ನು ಬದಲಿಸಲಿಲ್ಲ. ಇಂತಹ ಬರಹಗಳು ಕತೆಗಾರ್ತಿಯ ಒಳನೋಟದ ಸಂವೇದನೆಯಾಗಿ ತೆರೆದುಕೊಂಡು ಸಾಮಾಜಿಕ ಮನಸುಗಳನ್ನು ಮುಟ್ಟುವಲ್ಲಿ, ಎಚ್ಚರಿಸುವಲ್ಲಿ, ಮಿಡಿಯುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ.
ಇನ್ನೂ ಹಲವು ರೀತಿಯಲ್ಲಿ ಗೃಹಿಣಿ ತನ್ನ ನಿಸ್ವಾರ್ಥ ಧ್ಯೇಯದಿಂದ ಸಾಮಾಜಿಕ ಕಳಕಳಿಗೆ ಸಾಕ್ಷಿಯಾದ ಸಂಗತಿಯನ್ನು ನಾವು ಇತಿಹಾಸದಲ್ಲಿ ಧಾರಾಳವಾಗಿ ಗಮನಿಸಬಹುದು. ಮಹಾತ್ಮಾ ಗಾಂಧೀಜಿಯವರ ಪತ್ನಿ ಕಸ್ತೂರಬಾ, ಜವಾಹರಲಾಲ್ ನೆಹರೂ ಅವರ ಪತ್ನಿ ಕಮಲಾ ನೆಹರು ಅವರೆಲ್ಲ ಗೃಹಿಣಿಯರಾಗಿ ಆ ಕಾಲದಲ್ಲಿ ಎಲ್ಲರಿಗೂ ಅನಿವಾರ್ಯವಾದ ಸ್ವಾತಂತ್ರ್ಯ ಹೋರಾಟದ ಯಜ್ಞಕ್ಕೆ ತಮ್ಮದೇ ಆದ ಹವಿಸ್ಸನ್ನು ಅರ್ಪಿಸಿದ್ದಾರೆ.
ನಮ್ಮ ಈಗಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಅವರು ತಮ್ಮ ಪ್ರೀತಿಯ ಪುತ್ರ, ಇಡೀ ದೇಶದ ಉನ್ನತ ಹುದ್ದೆಯಲ್ಲಿ ಮಿಂಚುವುದನ್ನು ಕಾಣ್ತುಂಬಿಕೊಂಡು ಧನ್ಯರಾಗಿ, ತಾವು ಮಾತ್ರ ಅದೇ ತಮ್ಮ ಪುಟ್ಟ ಮನೆಯಲ್ಲಿಯೇ, ಈ ಇಳಿವಯಸ್ಸಿನಲ್ಲಿಯೂ ಸ್ವತಂತ್ರವಾಗಿ ಬದುಕುತ್ತಿರುವ ದಿಟ್ಟ ಗೃಹಿಣಿ. ಈ ನಿಟ್ಟಿನಲ್ಲಿ ಸಮಗ್ರ ಭಾರತದ ಪ್ರಧಾನಿಯಾಗಿಯೂ, ಎಲ್ಲ ಶುಭಕಾರ್ಯಗಳಿಗೆ ಮುನ್ನ ತಾಯಿಯಾದ ತನ್ನ ಕಾಲು ಹಿಡಿದು ನಮಸ್ಕರಿಸಿ ತನ್ನಿಂದ ಆಶೀರ್ವಾದ ಪಡೆಯುವ ಉದಾತ್ತ, ಸಂಸ್ಕಾರವಂತ ಮಗನನ್ನು ನೋಡಿ, ತಮ್ಮ ಬದುಕಿನ ಸಾರ್ಥಕತೆಯನ್ನು ಕಂಡುಕೊಳ್ಳುವ ಸದ್ಗ ಹಿಣಿಯಾಗಿ ಹೀರಾಬೆನ್ ನಮ್ಮೆದುರು ನಿಲ್ಲುತ್ತಾರೆ.
ಹೀಗೆ ಭಾರತೀಯ ಗೃಹಿಣೀತ್ವದ ಮಹತ್ವ ಇತಿಹಾಸದುದ್ದಕ್ಕೂ ಕಾಣಸಿಗುವಂತೆ ಇವತ್ತಿನ ವರ್ತಮಾನಕ್ಕೂ ಅದು ಪ್ರೇರಣೆಯಾಗಿದೆ.
ವಿಜಯಲಕ್ಷ್ಮಿ ಶ್ಯಾನ್‌ಭೋಗ್