ಫಿಲಡೆಲ್ಫಿಯ: ಕೋವಿಡ್-19 ರುದ್ರ ತಾಂಡವಕ್ಕೆ ಅಮೆರಿಕದ ಅತಿ ದೊಡ್ಡ ನಗರಗಳಲ್ಲಿ ಒಂದಾದ μಲಡೆಲ್ಫಿಯ ಕೂಡ ಹೊರತಾಗಿಲ್ಲ. ಇಲ್ಲಿಯ ಹಿರಿಯ ನಾಗರಿಕರಿಗೆ ಸರಿಸುಮಾರು ಶತಮಾನದ ಹಿಂದೆ ನಗರದಲ್ಲಿ ಮರಣ ಮೃದಂಗ ಬಾರಿಸಿದ್ದ ಸ್ಪ್ಯಾನಿಷ್ ಫ್ಲ್ಯೂ ಸಾಂಕ್ರಾಮಿಕ ರೋಗ ಮಾಡಿದ ಹಾವಳಿ ನೆನಪಾಗುತ್ತಿದೆ.
ಅದು ಮೊದಲ ವಿಶ್ವ ಯುದ್ಧ ನಡೆಯುತ್ತಿದ್ದ ದಿನಗಳು. ಯುದ್ಧ ನಡೆಯುತ್ತಿರುವಾಗಲೇ ಫ್ಲ್ಯೂ ತಾಂಡವ ಶುರುವಾಯಿತು. ಇದರಿಂದ ಅತಿ ಹೆಚ್ಚು ನಲುಗಿದ್ದು ಫಿಲಡೆಲ್ಫಿಯ ನಗರ. 20,000ಕ್ಕೂ ಹೆಚ್ಚು ಮಂದಿ ಈ ಮಾರಕ ಸೋಂಕಿಗೆ ಬಲಿಯಾದರು. ಯುದ್ಧಕ್ಕೆ ಅಗತ್ಯವಾಗಿರುವ ಹಡಗುಗಳು ಮತ್ತು ಕಬ್ಬಿಣವನ್ನು ಉತ್ಪಾದಿಸುವ ಪ್ರಮುಖ ಕೇಂದ್ರವಾಗಿದ್ದ ಪೆನಿಸಿಲ್ವೇನಿಯವೇ ಫ್ಲ್ಯೂ ಕೇಂದ್ರವಾಗಿತ್ತು. ಫ್ಲ್ಯೂ ಕಾಣಿಸಿಕೊಂಡ 6 ತಿಂಗಳಲ್ಲೇ ಫಿಲಡೆಲ್ಫಿಯದಲ್ಲಿ 17,500 ಮಂದಿ ಅಸುನೀಗಿದರು. ಅದರಲ್ಲೂ ಒಂದೇ ವಾರದಲ್ಲಿ 4,500 ಮಂದಿ ಸತ್ತರು.
1918, ಅಕ್ಟೋಬರ್ 2ರಂದು ಒಂದೇ ದಿನ 837 ಮಂದಿ ಪ್ರಾಣ ಕಳೆದುಕೊಂಡಿದ್ದರು. ಟೆಂಪಲ್ ಯುನಿವರ್ಸಿಟಿ ಹಾಸ್ಪಿಟಲ್‌ನ ಚೀಫ್ ಮೆಡಿಕಲ್ ಆಫೀಸರ್ ಡಾ| ಟೋನಿ ಎಸ್. ರೀಡ್ 1918ರ ಫೂÉ ಹಾವಳಿಯನ್ನು ನೆಪಸಿಸಿಕೊಳ್ಳುವುದು ಹೀಗೆ: ಪಿಟ್ಸ್‌ಬರ್ಗ್ ಬಳಿಕ ಅತ್ಯಧಿಕ ಸಾವುಗಳು ಫಿಲಡೆಲ್ಫಿಯದಲ್ಲಿ ಸಂಭವಿಸಿತ್ತು. ಅಂದಿನ ಕರಾಳ ನೆನಪುಗಳಿಂದ ನಾವು ಪಾಠ ಕಲಿತಿದ್ದೇವೆ. ಹೀಗಾಗಿ ಕೋವಿಡ್-19 ಹಾವಳಿಯನ್ನು ಭಿನ್ನವಾಗಿ ನಿಭಾಯಿಸುತ್ತಿದ್ದೇವೆ. ಈ ಮೂಲಕ ಜಗತ್ತಿಗೆ ನಾವೊಂದು ಮಾದರಿಯನ್ನು ಹಾಕಿಕೊಡುವ ಪ್ರಯತ್ನದಲ್ಲಿದ್ದೇವೆ. ನಿವೃತ್ತ ಬಾಂಡ್ ಅಂಡರ್ ರೈಟರ್ ನ್ಯಾನ್ಸಿ ಬಾಡೆರ್ ಅವರ ಹೆತ್ತವರು 1918ರ ಫಿಲಡೆಲ್ಫಿಯ ಫ್ಲ್ಯೂ ಉಂಟು ಮಾಡಿದ ಅನಾಹುತಗಳನ್ನು ಕಂಡುಂಡವರು.
1918ರ ಫ್ಲ್ಯೂ ಮತ್ತು 2020ರ ಕೋವಿಡ್-19 ನಡುವೆ ಬಹಳಷ್ಟು ಸಾಮ್ಯತೆಗಳನ್ನು ಕಾಣುತ್ತಿದ್ದೇವೆ ಎನ್ನುತ್ತಿದ್ದಾರೆ ನ್ಯಾನ್ಸಿ. ದೇಶ ಮತ್ತೂಮ್ಮೆ ಸಂಕಷ್ಟದ ದಿನಗಳನ್ನು ಕಾಣುತ್ತಿದೆ. ಇತಿಹಾಸ ಮರುಕಳಿಸುತ್ತದೆ ಎನ್ನುವುದು ಇದಕ್ಕೇ ಇರಬೇಕು ಎನ್ನುತ್ತಿದ್ದಾರೆ ಅವರು. ಜನರನ್ನು ಸೇನೆಗೆ ಸೇರಿಸಿಕೊಳ್ಳಲು, ಹೆಚ್ಚೆಚ್ಚು ಯುದ್ಧ ನೌಕೆಗಳನ್ನು ಮತ್ತು ಶಸ್ತ್ರಾಸ್ತ್ರಗಳನ್ನು ನಿರ್ಮಿಸಲು ಫಿಲಡೆಲ್ಫಿಯದ ಮೇಲೆ ಭಾರೀ ಒತ್ತಡವಿತ್ತು. ಇಡೀ ಜಗತ್ತು ಯುದ್ಧದಲ್ಲಿ ತೊಡಗಿದ್ದ ಕಾಲವದು. ಜನರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಮತ್ತು ದೇಶದ ಸಾಮರ್ಥ್ಯವನ್ನು ಸಾಬೀತುಪಡಿಸಲು ಸೈನಿಕರ ಪಥ ಸಂಚಲನ ನಡೆಸುವುದು, ನಾಯಕರ ಸಾರ್ವಜನಿಕ ಸಭೆಗಳನ್ನು ಏರ್ಪಡಿಸುವುದೆಲ್ಲ ಮಾಮೂಲಾಗಿತ್ತು. ಆದರೆ ಇದರಿಂದಾಗಿ ಫ್ಲ್ಯೂ ತ್ವರಿತವಾಗಿ ಹರಡಲಾರಂಭಿಸಿತು. ಹೀಗಾಗಿ ಲಾಕ್‌ಡೌನ್, ಕ್ವಾರಂಟೈನ್‌ನಂಥ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಿಸಲು ಸಾಧ್ಯವಾಗಲಿಲ್ಲ. ಫಿಲಡೆಲ್ಫಿಯದ ಆರೋಗ್ಯ ನಿರ್ದೇಶಕ ಡಾ| ವಿಲ್ಮರ್ ಕ್ರುಸೆನ್ ಆರಂಭದಲ್ಲಿ ಫ್ಲ್ಯೂ ಇರುವುದನ್ನೇ ನಿರಾಕರಿಸಿದ್ದರು. ಒಂದು ವೇಳೆ ಅವರು ಕಠಿನ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದರೆ ಉದ್ಯೋಗದಿಂದ ವಜಾಗೊಳ್ಳುವ ಸಾಧ್ಯತೆಯಿತ್ತು ಎನ್ನುತ್ತಾರೆ ಇತಿಹಾಸಕಾರ ರಾಬರ್ಟ್ ಹಿಕ್ಸ್.
ಎರಡು ದಿನಗಳ ಬಳಿಕ ಪರಿಸ್ಥಿತಿ ಗಂಭೀರವಾಗಿರುವುದು ಡಾ| ಕ್ರುಸೆನ್‌ಗೆ ಅರಿವಾಗಿತ್ತು. ಆದರೆ ಅಷ್ಟರಲ್ಲಾಗಲೇ ಪರಿಸ್ಥಿತಿ ಕೈಮೀರಿತ್ತು. ಸೈನಿಕರೇ ಫ್ಲ್ಯೂಗೆ ತುತ್ತಾಗಿದ್ದರು. ಟೆಲಿಫೋನ್ ಸ್ವಿಚ್‌ಬೋರ್ಡ್ ಆಪರೇಟರ್ ಗಳು ಜ್ವರದಿಂದ ಮಲಗಿದ ಕಾರಣ ಸಂವಹನ ವ್ಯವಸ್ಥೆ ಅಸ್ತವ್ಯಸ್ತವಾಗಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಶಾಲೆ ಕಾಲೇಜುಗಳನ್ನು ಮುಚ್ಚಲಾಯಿತು. ರಸ್ತೆಯಲ್ಲಿ ಅಂತಿಮ ಯಾತ್ರೆಗೆ ಜಾಗ ಸಾಲದಾಯಿತು.
ಅವಳಿಗಳ ಕತೆ : ಫಿಲಡೆಲ್ಫಿಯದ ಅಜ್ಜಿಯಂದಿರು ಈಗಲೂ ಮೊಮ್ಮಕ್ಕಳಿಗೆ ಫ್ಲ್ಯೂ ತಾಂಡವದ ಕತೆಯನ್ನು ಹೇಳುತ್ತಾರೆ. ಅದರಲ್ಲಿ ಬರುವ ಆಗಸ್ಟಾ ಮತ್ತು ಎಲಿಯನಾರ್ ಎಂಬ ಅವಳಿಗಳ ಕತೆಯಂತೂ ಬಹಳ ಮಾರ್ಮಿಕವಾಗಿದೆ. ಫೂÉ ಆಗಸ್ಟಾಳನ್ನು ಬಲಿತೆಗೆದುಕೊಂಡಿತು. ಆದರೆ ಆಗ ಶವ ಸಂಸ್ಕಾರ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ರಸ್ತೆಯುದ್ದಕ್ಕೂ ಸಂಸ್ಕಾರಕ್ಕೆ ಕಾದು ಕುಳಿತ ನೂರಾರು ಶವಪೆಟ್ಟಿಗೆಗಳಿದ್ದವು. ಆಗ ತಾಯಿಗೆ ಫಿಲಡೆಲ್ಫಿಯದ ಈಶಾನ್ಯದಲ್ಲಿರುವ ಓರ್ವ ಅಂತ್ಯಕ್ರಿಯೆ ನಡೆಸುವವನ ನೆನಪಾಯಿತು. ಆಕೆ ಜೀವಂತವಿದ್ದ ಮತ್ತು ಸತ್ತ ಮಗುವನ್ನು ಒಂದು ಬೇಬಿ ಕ್ಯಾರಿಯರ್‌ನಲ್ಲಿ ಮಲಗಿಸಿ ದೂಡಿಕೊಂಡು ಹೊರಟಳು. ಹೀಗೆ ಫ್ಲ್ಯೂ ಬಾಧೆಯಿಂದ ಮೃತ ಪಟ್ಟವರನ್ನು ದೇಹಗಳನ್ನು ಸಾರ್ವಜನಿಕವಾಗಿ
ಕೊಂಡೊಯ್ದರೆ ಕಠಿನ ಶಿಕ್ಷೆ ವಿಧಿಸಲಾಗುತ್ತಿತ್ತು. ಆದರೆ ಆಕೆಗೆ ಬೇರೆ ದಾರಿಯೇ ಇರಲಿಲ್ಲ. ಆದರೆ ನೋಡುವವರಿಗೆ ಬೇಬಿ ಕ್ಯಾರಿಯರ್‌ನಲ್ಲಿರುವ ಮಕ್ಕಳ ಪೈಕಿ ಒಂದು ಮೃತಪಟ್ಟಿದೆ ಎಂದು ಗೊತ್ತೇ ಆಗಲಿಲ್ಲ. ಅವರೆಲ್ಲ ಬೇಬಿ ಕ್ಯಾರಿಯರ್‌ನಲ್ಲಿ ಶಾಂತವಾಗಿ ಮಲಗಿರುವ ಮಕ್ಕಳನ್ನು ನೋಡಿ ಎಷ್ಟು ಶಾಂತವಾಗಿ ಮಲಗಿವೆ ಈ ಮಕ್ಕಳು ಎಂದು ಉದ್ಗರಿಸಿದರು. ಹೀಗೆ ಆರು ಮೈಲಿ ಸಾಗಿ ಆಕೆ ಮಗುವಿಗೆ ಅಂತ್ಯಸಂಸ್ಕಾರ ಮಾಡಿದರು.ಅಂದಹಾಗೇ ಈ ಕತೆಯನ್ನು ಹೇಳಿದ ಅಜ್ಜಿ ಎಲಿಯಾನರಳ ಮಗಳು ಜೆನಿಸ್ ವಿಲ್ಲಿಯಮ್ಸ್.