Advertisement

ಎಲ್ಲ ವಿವಿಗಳಲ್ಲೂ ಏಕಕಾಲದಲ್ಲಿ ಪಿಎಚ್‌.ಡಿ ನೋಟಿಫಿಕೇಷನ್‌?

06:00 AM Dec 01, 2018 | Team Udayavani |

ಬೆಂಗಳೂರು: ಪಿಎಚ್‌ಡಿ ನೋಟಿಫಿಕೇಷನ್‌ಗೆ ಅವಕಾಶ ನೀಡಿ ಎಂದು ಹಲವು ವಿಶ್ವವಿದ್ಯಾಲಯಗಳಿಂದ  ಪ್ರಸ್ತಾವನೆ ಸಲ್ಲಿಕೆಯಾಗಿ ತಿಂಗಳುಗಳೇ ಉರುಳಿದ್ದು, ಏಕಕಾಲದಲ್ಲಿ ಅನುಮತಿ ನೀಡುವ ಬಗ್ಗೆ ಸರ್ಕಾರ ಈಗ ಯೋಚನೆ ಮಾಡುತ್ತಿದೆ.

Advertisement

ಸ್ನಾತಕೋತ್ತರ ಪಡೆದ ಯಾರು ಬೇಕಾದರೂ ಪದವಿ, ಸ್ನಾತಕೋತ್ತರ ಪದವಿ ಕೋರ್ಸ್‌ನ ವಿದ್ಯಾರ್ಥಿಗಳಿಗೆ ಬೋಧನೆ ಮಾಡಬಹುದು. ಆದರೆ, ಸರ್ಕಾರಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಲು ನೆಟ್‌, ಸ್ಲೆಟ್‌ ಅಥವಾ ಪಿಎಚ್‌.ಡಿ ಅತಿಮುಖ್ಯ.  ನೆಟ್‌ ಉತ್ತೀರ್ಣರಾಗಿ ಪಿಎಚ್‌.ಡಿ ಪದವಿ ಪಡೆದಿದ್ದರೆ ಮೊದಲ ಅದ್ಯತೆ ನೀಡಲಾಗುತ್ತದೆ. ಪ್ರತಿ ವಿಶ್ವವಿದ್ಯಾಲಯದಲ್ಲೂ ಪ್ರತಿ ವರ್ಷ ಲಭ್ಯವಿರುವ ಸೀಟುಗಳ ಆಧಾರದಲ್ಲಿ ಪಿಎಚ್‌.ಡಿ ನೋಟಿಫಿಕೇಷನ್‌ ಹೊರಡಿಸಲಾಗುತ್ತದೆ.

ರಾಜ್ಯದ ವಿವಿಧ ವಿವಿಗಳು 2018-19ನೇ ಸಾಲಿನ ಪಿಎಚ್‌.ಡಿ ನೋಟಿಫಿಕೇಷನ್‌ಗೆ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ತಿಂಗಳುಗಳೇ ಕಳೆದಿವೆ. ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ವಿವಿಯ ಅಧಿಕಾರಿಗಳಿಗೆ ಪಿಎಚ್‌.ಡಿ ನೋಟಿಫಿಕೇಷನ್‌ ಹೊರಡಿಸಲು ಸಾಧ್ಯವಾಗುತ್ತಿಲ್ಲ. ಸಾಮಾನ್ಯವಾಗಿ ಪಿಎಚ್‌.ಡಿ ನೋಂದಣಿ ಪ್ರಕ್ರಿಯೆಗಳು ಇಷ್ಟೊತ್ತಿಗಾಗಲೇ ಅಥವಾ ಡಿಸೆಂಬರ್‌ ಮೊದಲ ವಾರದೊಳಗೆ ಆರಂಭವಾಗಬೇಕು. ಆದರೆ, ಸರ್ಕಾರ ಅನುಮತಿ ಇನ್ನೂ ನೀಡದೇ ಇರುವುದರಿಂದ ಪ್ರಸಕ್ತ ಸಾಲಿನ ನೋಟಿಫಿಕೇಷನ್‌ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ.ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಿಗೂ ಏಕಕಾಲದಲ್ಲಿ ಪಿಎಚ್‌ಡಿ ನೋಟಿಫಿಕೇಷನ್‌ ಹೊರಡಿಸಲು ಅನುಮತಿ ನೀಡುವ ಬಗ್ಗೆ ಸರ್ಕಾರದ ಹಂತದಲ್ಲಿ ಯೋಚನೆ ನಡೆಯುತ್ತಿದೆ. ಹೀಗಾಗಿಯೆ ವಿವಿಧ ವಿವಿಗಳಿಂದ ನೀಡಿರುವ ಪಿಎಚ್‌.ಡಿ ನೋಟಿಫಿಕೇಷನ್‌ ಪ್ರಸ್ತಾವನೆಯನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ. 

ರಾಜ್ಯಪಾಲರಿಂದ ಈವರೆಗೆ ಸರ್ಕಾರಕ್ಕೆ ಈ ಸಂಬಂಧ ಯಾವುದೇ ನಿರ್ದೇಶನ ಬಂದಿಲ್ಲ. ಹೀಗಾಗಿ ವಿವಿಗಳಿಗೆ ನೋಟಿಫಿಕೇಷನ್‌ ಕುರಿತು ಅನುಮತಿ ನೀಡಿಲ್ಲ ಎಂದು ಉನ್ನತ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ಒಂದು ವರ್ಷ ಅವಶ್ಯಕ :ಪಿಎಚ್‌ಡಿ ನೋಟಿಫಿಕೇಷನ್‌ಗೆ ಸರ್ಕಾರ ಅನುಮತಿ ನೀಡಿದ ತಕ್ಷಣವೇ  ಅಭ್ಯರ್ಥಿಗಳನ್ನು ಸೇರಿಸಿಕೊಂಡು ಸಂಶೋಧನಾ ಪ್ರಕ್ರಿಯೆ ಆರಂಭಿಸಲು ಸಾಧ್ಯವಿಲ್ಲ. ವಿವಿಗಳಲ್ಲಿ ಲಭ್ಯವಿರುವ ಪ್ರಾಧ್ಯಾಪಕರು, ಸಹ ಮತ್ತು ಸಹಾಯಕ ಪ್ರಾಧ್ಯಾಪಕರ ಆಧಾರದಲ್ಲಿ ಕ್ರಮವಾಗಿ ಒಬ್ಬೊಬ್ಬರಿಗೆ ತಲಾ 8, 6 ಹಾಗೂ 4 ಸಂಶೋಧನಾ ವಿದ್ಯಾರ್ಥಿಗಳನ್ನು ಗೊತ್ತು ಮಾಡುವಂತೆ ಪ್ರಸ್ತಾವನೆಯಲ್ಲಿ ಸಲಹೆ ಮಾಡಲಾಗಿದೆ.

Advertisement

ಸರ್ಕಾರ ಇದಕ್ಕೆ ಒಪ್ಪಿಗೆ ಕೊಟ್ಟ ನಂತರ, ಪತ್ರಿಕೆಗಳಲ್ಲಿ ಈ ಸಂಬಂಧ ಜಾಹೀರಾತು ನೀಡಿ, ಅರ್ಜಿ ಆಹ್ವಾನಿಸಬೇಕು. ಬಂದಿರುವ ಅರ್ಜಿಗಳನ್ನೆಲ್ಲ ಪರಿಶೀಲಿಸಿ, ಅಗತ್ಯ ದಾಖಲೆಯ ಆಧಾರದಲ್ಲಿ ಅರ್ಹ ಅಭ್ಯರ್ಥಿಗಳಿಗೆ ಪ್ರವೇಶ ಪರೀಕ್ಷೆ ನಡೆಸಬೇಕು. ಪ್ರವೇಶ ಪತ್ರದಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಗೆ ಪಿಎಚ್‌.ಡಿ ನೋಂದಣಿ ಪ್ರಕ್ರಿಯೆ ನಡೆಯುತ್ತದೆ. ಇದಾದ ನಂತರ ಅಭ್ಯರ್ಥಿಗಳಿಂದ ಸಂಶೋಧನಾ ಪ್ರಬಂಧ ವಿಷಯ ಆಯ್ಕೆ, ಅದಕ್ಕೆ ಟಿಪ್ಪಣಿ ಪಡೆಯುವುದು, ಇದೆಲ್ಲ ಪ್ರಕ್ರಿಯೆ ಮುಗಿದ ನಂತರ 6 ತಿಂಗಳ ಕೋರ್ಸ್‌ ವರ್ಕ್‌ ಇರುತ್ತದೆ. ಇದು ಪುರ್ಣಗೊಂಡ ನಂತರ ಮಾರ್ಗದರ್ಶಕರ ಸೂಚನೆಯಂತೆ ಸಂಶೋಧನಾ ಪ್ರಕ್ರಿಯೆ ಆರಂಭವಾಗಲಿದೆ. ಇಷ್ಟೆಲ್ಲ ಪ್ರಕ್ರಿಯೆ ನಡೆಸಲು ಕನಿಷ್ಠ ಒಂದು ವರ್ಷ ಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಪಿಎಚ್‌.ಡಿ ಸೀಟು ಲಭ್ಯತೆ ಹಾಗೂ ನಮ್ಮಲ್ಲಿರುವ ಪ್ರಾಧ್ಯಾಪಕರ ಮಾಹಿತಿ ಸಹಿತವಾಗಿ ಪ್ರಸ್ತಾವನೆಯನ್ನು ಮೂರೂವರೆ ತಿಂಗಳ ಹಿಂದೆಯೇ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಅಲ್ಲಿಂದ ಇನ್ನೂ ಅನುಮತಿ ಸಿಗದೇ ಇರುವುದರಿಂದ ವಿವಿ ನೋಟಿಫಿಕೇಷನ್‌ ಹೊರಡಿಸಲು ಸಾಧ್ಯವಿಲ್ಲ.
– ಪ್ರೊ.ಕೆ.ಆರ್‌.ವೇಣುಗೋಪಾಲ್‌, ಕುಲಪತಿ, ಬೆಂವಿವಿ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next