Advertisement

Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

12:04 AM Apr 25, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದಲ್ಲಿ ಎಪ್ರಿಲ್‌ 26ರಂದು ಚುನಾವಣೆ ನಡೆಯಲಿರುವ 14 ಲೋಕಸಭಾ ಕ್ಷೇತ್ರಗಳಲ್ಲಿನ ಬಹಿರಂಗ ಪ್ರಚಾರ ಬುಧವಾರ ಸಂಜೆ 6 ಗಂಟೆಗೆ ಕೊನೆಗೊಂಡಿದೆ. ಈಗ ಗರಿಷ್ಠ 5 ಮಂದಿಯೊಂದಿಗೆ ಮನೆಮನೆಗೆ ತೆರಳಿ ಗುರುವಾರ ಮತದಾರರ ಮನ ಗೆಲ್ಲುವ ಅಂತಿಮ ಕಸರತ್ತಿನಲ್ಲಿ ಅಭ್ಯರ್ಥಿಗಳು ಮತ್ತವರ ಬೆಂಬಲಿಗರು ನಿರತರಾಗಿದ್ದಾರೆ.

Advertisement

ಬಹಿರಂಗ ಪ್ರಚಾರದ ಅವಧಿ ಮುಕ್ತಾಯಗೊಂಡ ಬಳಿಕ ಮತದಾನ ಪೂರ್ಣಗೊಳ್ಳುವವರೆಗೆ ರಾಜಕೀಯ ಪ್ರಚಾರಕ್ಕಾಗಿ ಧ್ವನಿವರ್ಧಕ ಬಳಸುವಂತಿಲ್ಲ. ಚುನಾವಣೆ ನಡೆಯುವ ಕ್ಷೇತ್ರಗಳ ಹೊರಗಿನಿಂದ ಕರೆತಂದಿರುವ ರಾಜಕೀಯ ಕಾರ್ಯಕರ್ತರು, ಪಕ್ಷದ ಕಾರ್ಯಕರ್ತರು ಸೇರಿದಂತೆ ಆ ಕ್ಷೇತ್ರದ ಮತದಾರರಲ್ಲದ ರಾಜಕೀಯ ವ್ಯಕ್ತಿಗಳು ಕ್ಷೇತ್ರವನ್ನು ತೊರೆಯಬೇಕು. ಪ್ರವಾಸಿಗರು, ಯಾತ್ರಾರ್ಥಿಗಳು ಜನಸಾಮಾನ್ಯರಿಗೆ ಇದರಿಂದ ವಿನಾಯಿತಿ ಇದೆ.

ದಕ್ಷಿಣ ಕರ್ನಾಟಕದ ಲೋಕಸಭಾ ಕ್ಷೇತ್ರಗಳಲ್ಲಿ ಕಳೆದ ನಾಲ್ಕು ವಾರಗಳಿಂದ ನಡೆಯುತ್ತಿದ್ದ ಅಬ್ಬರದ ಚುನಾವಣ ಪ್ರಚಾರ ರ್‍ಯಾಲಿಗಳು, ರೋಡ್‌ ಶೋಗಳು, ಚುನಾವಣ ಪ್ರಚಾರ ಭಾಷಣ, ಸಮಾವೇಶಗಳಿಗೆ ತೆರೆ ಬೀಳುವುದರರೊಂದಿಗೆ ರಾಜಕೀಯ ಮುಖಂಡರು ಮತದಾರರ ಅಂತರಂಗವನ್ನು ಗೆಲ್ಲಲು ಕೊನೆಯ ಎರಡು ದಿನ ನಾನಾ ಪ್ರಯತ್ನಗಳನ್ನು ನಡೆಸಲಿದ್ದಾರೆ.

ಮಾರ್ಚ್‌ 28ರಂದು ಚುನಾವಣ ಅಧಿಸೂಚನೆ ಪ್ರಕಟಗೊಂಡಂದಿನಿಂದ ಒಟ್ಟು 27 ದಿನಗಳ ಕಾಲ ನಡೆದ ಬಿರುಸಿನ ಚುನಾವಣ ಪ್ರಚಾರದಲ್ಲಿ ಘಟಾನುಘಟಿ ನಾಯಕರು, ಸಾಮಾನ್ಯ ಕಾರ್ಯಕರ್ತರು ಚುನಾವಣ ಕಣವನ್ನು ರಂಗೇರಿಸಿದ್ದರು. ಅಭಿವೃದ್ಧಿ, ನೀತಿಗಳ ಮಾತುಗಳ ಜತೆಗೆ ವೈಯಕ್ತಿಕ ನಿಂದನೆ, ಅವಹೇಳನಗಳು ಪ್ರಚಾರ ಕಣದಲ್ಲಿ ಆಗಾಗ್ಗೆ ಚಿಮ್ಮುತ್ತಿದ್ದವು.

ಬಿಜೆಪಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸಚಿವರಾದ ಅಮಿತ್‌ ಶಾ, ನಿರ್ಮಲಾ ಸೀತಾರಾಮನ್‌, ಡಾ| ಎಸ್‌. ಜೈಶಂಕರ್‌, ಸ್ಮತಿ ಇರಾನಿ ಮುಂತಾದರು ಚುನಾವಣ ಪ್ರಚಾರದಲ್ಲಿ ಮುಂಚೂಣಿಯಲ್ಲಿದ್ದರು. ಕಾಂಗ್ರೆಸ್‌ನಿಂದ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ, ಪಕ್ಷದ ಹಿರಿಯ ನಾಯಕಿ ಪ್ರಿಯಾಂಕಾ ಗಾಂಧಿ , ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು.

Advertisement

ಮೋದಿ ಅವರು ಮೈಸೂರು, ಚಿಕ್ಕಬಳ್ಳಾಪುರ, ಬೆಂಗಳೂರಿನಲ್ಲಿ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದರೆ, ಮಂಗಳೂರಿನಲ್ಲಿ ರೋಡ್‌ ಶೋ ನಡೆಸಿದರು. ಅಮಿತ್‌ ಶಾ ಚನ್ನಪಟ್ಟಣ ಮತ್ತು ಬೆಂಗಳೂರಿನಲ್ಲಿ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ರಾಹುಲ್‌ ಗಾಂಧಿ ಕೋಲಾರ ಮತ್ತು ಮಂಡ್ಯದಲ್ಲಿ, ಹಾಗೆಯೇ ಪ್ರಿಯಾಂಕಾ ಗಾಂಧಿ ಅವರು ಚಿತ್ರದುರ್ಗ ಮತ್ತು ಬೆಂಗಳೂರಿನಲ್ಲಿ ಮತಯಾಚನೆ ನಡೆಸಿದರು.

ಇನ್ನು ಜೆಡಿಎಸ್‌ನ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಜೆಡಿಎಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳ ಪರ ಬ್ಯಾಟ್‌ ಬೀಸಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ರಾಜ್ಯ ಬಿಜೆಪಿಯ ಹಿರಿಯ ನಾಯಕರು ಮತಯಾಚನೆ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸೇರಿದಂತೆ ಸಚಿವರು, ಕಾಂಗ್ರೆಸ್‌ ಮುಖಂಡರು ಮತದಾರರ ಮನಗೆಲ್ಲಲು ವಿವಿಧ ರೀತಿಯಲ್ಲಿ ಪ್ರಯತ್ನ ನಡೆಸಿದರು.

ರೋಡ್‌ ಶೋಗಳ ಅಬ್ಬರ
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರೋಡ್‌ ಶೋಗಳು ಅಬ್ಬರಿಸಿದವು. ಬಿಜೆಪಿ ವರಿಷ್ಠರಾದ ಮೋದಿ, ಅಮಿತ್‌ ಶಾ, ನಡ್ಡಾ ರೋಡ್‌ ಶೋ ಮೂಲಕ ಜನರನ್ನು ತಲುಪಲು ಪ್ರಯತ್ನಿಸಿದರು. ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ ಸೇರಿದಂತೆ ರಾಜ್ಯದ ಬಿಜೆಪಿ ನಾಯಕರು, ಅಭ್ಯರ್ಥಿಗಳು ಸಹ ರೋಡ್‌ ಶೋದಲ್ಲಿ ಪಾಲ್ಗೊಂಡರು. ಕುಮಾರಸ್ವಾಮಿ ಸಹ ರೋಡ್‌ ಶೋಗಳಲ್ಲಿ ಪಾಲ್ಗೊಂಡರು. ಕಾಂಗ್ರೆಸ್‌ ಮುಖಂಡರು ಸಹ ರೋಡ್‌ ಶೋಗಳಿಗೆ ವಿಶೇಷ ಒತ್ತು ನೀಡಿ ಮತಯಾಚಿಸಿದರು.

ಉತ್ತರ ಕರ್ನಾಟಕದಲ್ಲಿ ಇಂದಿನಿಂದ ಚುನಾವಣ ಕಾವು
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮೇ 7 ರಂದು ಚುನಾವಣೆ ನಡೆಯಲಿದ್ದು ಈವರೆಗೆ ದಕ್ಷಿಣ ಕರ್ನಾಟಕಕ್ಕೆ ಸೀಮಿತವಾಗಿದ್ದು ಪ್ರಚಾರದ ಕಾವು ಮುಂದಿನೆರಡು ವಾರ ಉ.ಕ. ಭಾಗಕ್ಕೆ ವರ್ಗವಾಗಲಿದೆ. ಹಾಗೆಯೇ ತಮ್ಮ ಅಭ್ಯರ್ಥಿಗಳ ಪ್ರಚಾರಕ್ಕಾಗಿ ಪಕ್ಷಗಳ ಘಟಾನುಘಟಿ ನಾಯಕರು ಉತ್ತರ ಕರ್ನಾಟಕದಲ್ಲಿ ಬೀಡು ಬಿಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next