Advertisement

ಫಲ್ಗುಣಿ ನದಿ ಸೇತುವೆ ದಾಟಲು ತಾಸುಗಟ್ಟಲೆ ಕಾಯುವ ದುಃಸ್ಥಿತಿ

08:20 PM Sep 14, 2021 | Team Udayavani |

ಕೂಳೂರು: ಹೆದ್ದಾರಿ 66ರ ಸುರತ್ಕಲ್‌ -ಕೊಟ್ಟಾರ ಚೌಕಿ ವರೆಗೆ ಸಂಚರಿಸುವುದೆಂದರೆ ಸಾಹಸಮಯ ಸವಾರಿ ಎಂದೇ ಹೇಳಬಹುದು. ಡಾಮರು ಕಿತ್ತು ಹೋಗಿ ಕೆರೆಯಂತಾಗಿರುವ ತಿರುವು ರಸ್ತೆಗಳು, ಉಪಯೋಗಕ್ಕೆ ಬಾರದ ಸರ್ವಿಸ್‌ ರಸ್ತೆಗಳು. ಇದರ ನಡುವೆ ಕಳೆದ ಹಲವಾರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಹೆದ್ದಾರಿ 66ರ ಕೂಳೂರು ಮೇಲ್ಸೇತುವೆ ಬಳಿ ಬೃಹತ್‌ ಹೊಂಡಗಳಾಗಿದ್ದು, ನಿತ್ಯ ಟ್ರಾಫಿಕ್‌ ಜಾಂ ಆಗುತ್ತಿದೆ. ಇದರಿಂದ ಜನರಿಗೆ ಕಷ್ಟಕರ ಸಂಚಾರ ಪರಿಸ್ಥಿತಿ ಉಂಟಾಗಿದೆ.

Advertisement

ನದಿ ದಾಟಲು ಪರ್ಯಾಯ ವ್ಯವಸ್ಥೆಯಿಲ್ಲದೆ ಸೇತುವೆಯ ಇಕ್ಕೆಲಗಳಲ್ಲೂ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿವೆ. ಒಂದು ತಿಂಗಳಿನಿಂದ ಸೇತುವೆ ಇಕ್ಕೆಲಗಳಲ್ಲೂ ಡಾಮರು ಕಿತ್ತುಹೋಗಿದ್ದು, ಮಂಗಳವಾರ ಮುಂಜಾನೆಯಿಂದಲೇ ಸುರತ್ಕಲ್‌ – ಉಡುಪಿ ರಸ್ತೆಯಲ್ಲಿ ಕಿ.ಮೀ. ಗಟ್ಟಲೆ ವಾಹನ ಕಂಡು ಬಂದರೆ, ಉಡುಪಿ – ಮಂಗಳೂರು ರಸ್ತೆಯಲ್ಲಿ ಎಂಸಿಎಫ್‌ ವರೆಗೆ ಸಾಲು ನಿಲ್ಲುವಂತಾಗಿದೆ. ಘನ ವಾಹನಗಳು ಓಡಾಡುವ ಸಂದರ್ಭ ಚಕ್ರ ಗುಂಡಿಗೆ ಬಿದ್ದರೆ ಅಕ್ಸಿಲ್‌ ಮುರಿಯುವ ಭೀತಿಯಿಂದ ಲಾರಿ, ಟ್ರಕ್‌ ಚಾಲಕರು ನಿಧಾನ ಗತಿಯಲ್ಲಿ ವಾಹನ ಚಲಾಯಿಸುವಂತಾಗಿದೆ.

ತುರ್ತು ದುರಸ್ತಿಗೆ ಹೆದ್ದಾರಿ ಇಲಾಖೆ ಹಾಕಿದ್ದು ಜಲ್ಲಿ ಹುಡಿ. ಆದರೆ ನಿರಂತರವಾಗಿ ಸುರಿಯುವ ಮಳೆಗೆ ಜಲ್ಲಿ ಹುಡಿ ಕೊಚ್ಚಿ ಹೋಗಿದೆ.

ನಿತ್ಯ ಟ್ರಾಫಿಕ್‌ ಜಾಂನಿಂದ ಆ್ಯಂಬುಲೆನ್ಸ್‌ ಒಡಾಟ, ಕಚೇರಿಗೆ ತೆರಳುವವರಿಗೆ, ಕ್ಲಿನಿಕ್‌ಗೆ ಬರುವವರಿಗೆ ದಾಟಲು ಸಾಧ್ಯವಾಗುತ್ತಿಲ್ಲ. ಈ ಹೊಂಡಾ ಗುಂಡಿಯಿಂದ ದ್ವಿಚಕ್ರ ಸವಾರರು ಅಪಘಾತಕ್ಕೀಡಾಗಿ ಅಂಗ ಊನವಾದ ಬಗ್ಗೆಯೂ ವರದಿಗಳಾಗಿವೆ.

ಸ್ಪಂದನೆ ದೊರಕಿಲ್ಲ:

Advertisement

ಹೆದ್ದಾರಿ ಇಲಾಖೆಗೆ ಮಂಗಳೂರು ಉತ್ತರ ಸಂಚಾರಿ ಠಾಣೆ ವತಿಯಿಂದ ಪತ್ರ ಬರೆದು ಹೆದ್ದಾರಿ, ಸರ್ವಿಸ್‌ ರಸ್ತೆ ದುರಸ್ತಿ ಮಾಡುವಂತೆ ಕೇಳಿಕೊಳ್ಳಲಾಗಿದ್ದರೂ ಇದುವರೆಗೂ ಸ್ಪಂದನೆ ದೊರಕಿಲ್ಲ. ಜೇಸಿಬಿ ಸಹಿತ ಸೌಲಭ್ಯಗಳಿಲ್ಲ ಎಂಬ ಉತ್ತರ ಸಿಕ್ಕಿದೆ. ಸರ್ವಿಸ್‌ ರಸ್ತೆ ದುರಸ್ತಿ ಎನ್‌ಎಂಪಿಟಿ ಮಾಡಬೇಕು ಎಂಬ ಸಿದ್ಧ ಉತ್ತರ ಪ್ರತೀ ವರ್ಷವೂ ಸಿಗುತ್ತದೆ.

ಏನು ಮಾಡಬಹುದು ?:

ತಾತ್ಕಾಲಿಕ ದುರಸ್ತಿಗೆ ರೆಡಿ ಕಾಂಕ್ರೀಟ್‌ ಮಿಕ್ಸ್‌ ಸದ್ಯ ಪರಿಹಾರ. ರಾತ್ರಿ ಸಮಯ ವಾಹನ ಓಡಾಟ ಕಡಿಮೆಯಿದ್ದಾಗ ಹಾಕಿದಲ್ಲಿ ಮೂರ್‍ನಾಲ್ಕು ಗಂಟೆಗಳಲ್ಲಿ ಕ್ಯೂರಿಂಗ್‌ ಆಗುತ್ತದೆ. ಹೆದ್ದಾರಿ ಇಲಾಖೆ ಸಾಂಪ್ರದಾಯಿಕ ದುರಸ್ತಿ ನೆಚ್ಚಿಕೊಳ್ಳುವ ಬದಲು ಮಳೆಗಾಲದಲ್ಲಿ ತುರ್ತು ದುರಸ್ತಿಗೆ ಪರ್ಯಾಯ ವ್ಯವಸ್ಥೆ ಕೈಗೊಳ್ಳಬೇಕು ಎಂಬುದು ಸ್ಥಳೀಯ ನಾಗರಿಕ ಹಿತರಕ್ಷಣೆ ಸಮಿತಿ ಅಧ್ಯಕ್ಷ ಗುರುಚಂದ್ರ ಕೂಳೂರು ಅವರ ಆಗ್ರಹ.

ಕೂಳೂರು ಸೇತುವೆ ಎರಡೂ ಕಡೆಗಳಲ್ಲಿ ಹೊಂಡ ಬಿದ್ದಿದೆ. ವಾಹನಗಳು ಹಾಳಾಗುವ ಭೀತಿಯಿಂದ ನಿಧಾನವಾಗಿ ಸಂಚರಿಸುವ ಕಾರಣ ಸೇತುವೆ ಬಳಿ ವಾಹನ ಸಾಲುಗಟ್ಟಿ ನಿಲ್ಲುವಂತಾಗಿದೆ. ಈ ಬಗ್ಗೆ ಹೆದ್ದಾರಿ ಇಲಾಖೆಗೆ ಪತ್ರ ಬರೆದಿದ್ದರೂ ದುರಸ್ತಿಗೆ ಕ್ರಮ ಕೈಗೊಂಡಿಲ್ಲ. ಉಡುಪಿ ಮಂಗಳೂರು ಹೆದ್ದಾರಿ ಸೇತುವೆ ಬಳಿ ತಡೆಗೋಡೆ ಕುಸಿದು ಬಿದ್ದು ಅಪಾಯದ ಸ್ಥಿತಿಯಿದೆ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಯಾವುದೇ ಅಪಾಯವಾದರೂ ಹೆದ್ದಾರಿ ಇಲಾಖೆ ಜವಾಬ್ದಾರಿ ಹೊರಬೇಕು. ಮಳೆಗಾಲದಲ್ಲಿ ತುರ್ತಾಗಿ ಹಾಕಲು ಆಧುನಿಕ ವ್ಯವಸ್ಥೆಯಿದ್ದರೂ ಸಬೂಬು ಹೇಳಿ ನಿರ್ಲಕ್ಷ್ಯ ತಾಳುವುದು ಸರಿಯಲ್ಲ.ನಟರಾಜ್‌, ಎಸಿಪಿ ಟ್ರಾಫಿಕ್‌ ವಿಭಾಗ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next