Advertisement

ಪ.ಗೋ. ಪ್ರಶಸ್ತಿ ಪ್ರದಾನ ಸಮಾರಂಭ 

11:16 AM Mar 23, 2018 | |

ಮಹಾನಗರ : ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಿರಿಯ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣ (ಪ.ಗೋ.) ಅವರ ಹೆಸರಿನಲ್ಲಿ ಉತ್ತಮ ಗ್ರಾಮೀಣ ವರದಿಗಾರಿಕೆಗಾಗಿ ನೀಡಲಾಗುವ 2017ನೇ ಸಾಲಿನ ಪ.ಗೋ. ಪ್ರಶಸ್ತಿ ಯನ್ನು ಪತ್ರಕರ್ತ ಪ್ರಶಾಂತ್‌ ಎಸ್‌. ಸುವರ್ಣ ಅವರಿಗೆ ಗುರುವಾರ ಮಂಗಳೂರು ಪತ್ರಿಕಾ ಭವನದಲ್ಲಿ ಪ್ರದಾನ ಮಾಡಲಾಯಿತು.

Advertisement

ಪ್ರಶಾಂತ್‌ ಎಸ್‌. ಸುವರ್ಣ ಅವರ ಎಂಡೋಸಲ್ಫಾನ್‌ ಪೀಡಿತರ ಸಮಸ್ಯೆಗೆ ಸಂಬಂಧಿಸಿದ ‘ಕೇಳಿಸದೇ ಈ ಕರುಳಿನ ಕೂಗು’ ಲೇಖನಕ್ಕೆ 2017ನೇ ಸಾಲಿನ ಪ್ರಶಸ್ತಿ ಬಂದಿದ್ದು, ಪ್ರಶಸ್ತಿಯು 10,000 ರೂ. ನಗದು, ಶಾಲು, ಪ್ರಶಸ್ತಿ ಪತ್ರ, ಸ್ಮರಣಿಕೆಯನ್ನು ಒಳಗೊಂಡಿದೆ.

ಹಿರಿಯ ಪತ್ರಕರ್ತೆ ಅನಿತಾ ಪಿಂಟೋ ಅವರು ಪ್ರಶಸ್ತಿ ವಿತರಿಸಿ ಮಾತನಾಡಿ, ಸಮಾಜದ ಅಭಿವೃದ್ಧಿಯಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದು. ಪತ್ರಕರ್ತರಿಂದ ಸಮಾಜ ಮುಖಿಯಾದ, ಪರಸ್ಪರ ಸಂಬಂಧ-ಭಾವನೆಗಳನ್ನು ಬೆಳೆಸುವ ಉತ್ತಮ ವರದಿಗಳು ಬರಬೇಕು. ಮೌಲ್ಯ ಭರಿತವಾದ ವರದಿಗಳು ಸಮಾಜಕ್ಕೆ ಹೊಸ ದಿಕ್ಕು ತೋರಬಲ್ಲವು. ಆದ್ದರಿಂದ ಮೌಲಿಕ ವರದಿಗಳ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.

ವರದಿ ಸಮಾಜದ ಅಭಿವೃದ್ಧಿಗೆ ಪೂರಕ
ಪತ್ರಕರ್ತರು ಸೈನಿಕರು ಇದ್ದ ಹಾಗೆ. ಒಳ್ಳೆಯ ಸುದ್ದಿಗಾಗಿ ಎಲ್ಲ ಕಡೆ ಸುತ್ತಾಡುತ್ತಲೇ ಇರಬೇಕಾಗುತ್ತದೆ. ಪತ್ರಕರ್ತನ ಜಾಣ್ಮೆಯಿಂದ ಒಂದು ವರದಿ ಹೊಸ ಆಯಾಮವನ್ನು ಪಡೆದುಕೊಳ್ಳಬಲ್ಲುದು. ಸಮಾಜದ ಅಭಿವೃದ್ಧಿಗೆ ಪೂರಕವಾದ ವರದಿಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರಕಟವಾಗಬೇಕು. ಯುವ ಪತ್ರಕರ್ತರಲ್ಲಿ ಸಹಜವಾಗಿಯೇ ಉತ್ಸಾಹ ಹೆಚ್ಚಿರುತ್ತದೆ. ಅವರನ್ನು ಪ್ರೋತ್ಸಾಹಿಸುವಂತಹ ಕಾರ್ಯ ನಡೆದಾಗ ಇತರರಿಗೂ ಪ್ರೇರಣೆ ಲಭಿಸುತ್ತದೆ. ಪ್ರಶಾಂತ್‌ ಸುವರ್ಣ ಅವರು ಪತ್ರಿಕೋದ್ಯಮದ ತಮ್ಮ ಎಳೆಯ ವಯಸ್ಸಿನಲ್ಲಿ ಪ್ರಶಸ್ತಿಗೆ ಪಾತ್ರರಾಗಿರುವುದು ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದರು.ಪ್ರಶಸ್ತಿ ಸ್ವೀಕರಿಸಿದ ಪ್ರಶಾಂತ್‌ ಸುವರ್ಣ ಪ್ರತಿಕ್ರಿಯಿಸಿ, ಈ ಪ್ರಶಸ್ತಿಯು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ನನ್ನ ವರದಿಗಾರಿಕೆಯಲ್ಲಿ ತೃಪ್ತಿ ನೀಡಿದ ವರದಿಗೆ ಪ.ಗೋ. ಪ್ರಶಸ್ತಿ ದೊರೆತಿರುವುದಕ್ಕೆ ಖುಶಿ ಇದೆ ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಮಂಗಳೂರು ಪ್ರಸ್‌ಕ್ಲಬ್‌ ಅಧ್ಯಕ್ಷ ಡಾ| ರೊನಾಲ್ಡ್‌ ಅನಿಲ್‌ ಫೆರ್ನಾಂಡಿಸ್‌ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಪುಷ್ಟರಾಜ್‌ ಬಿ.ಎನ್‌. ಸ್ವಾಗತಿಸಿ, ಶ್ರೀನಿವಾಸ ಇಂದಾಜೆ ವಂದಿಸಿದರು. ಜಿಲ್ಲಾ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ಪಿ.ಬಿ. ಹರೀಶ್‌ ರೈ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next