ಮೂಡುಬಿದಿರೆ : ಸಾಂಸ್ಕೃತಿಕ ಲೋಕವನ್ನು ಮೂಡುಬಿದಿರೆಯಲ್ಲಿ ಕಟ್ಟಿರುವ, ಬಹಳ ದೊಡ್ಡ ಸಾಧನೆ ಮಾಡಿರುವ ಡಾ| ಮೋಹನ ಆಳ್ವ ಅವರ ನೇತೃತ್ವದಲ್ಲಿ ವಿಶ್ವ ಸಾಂಸ್ಕೃತಿಕ ಜಾಂಬೂರಿಯು ನಿಸ್ಸಂದೇಹವಾಗಿ ಯಶಸ್ವಿಯಾಗುತ್ತದೆ ಎಂದು ರಾಜ್ಯ ಸ್ಕೌಟ್ ಆಯುಕ್ತ ಪಿಜಿಆರ್ ಸಿಂಧ್ಯಾ ತಿಳಿಸಿದ್ದಾರೆ.
ಉದಯವಾಣಿ ಜತೆ ಮಾತನಾಡಿದ ಅವರು, ಆಜಾದೀ ಕಾ ಅಮೃತಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಸಂಘ – ಸಂಸ್ಥೆಗಳಿಗೆ, ವಿಶ್ವವಿದ್ಯಾನಿಲಯಗಳಿಗೆ ವಿನಂತಿಸಿದ್ದರು. ಅದರ ಅಂಗವಾಗಿ ಸ್ಕೌಟಟ-ಗೈಡ್ಸ್‌ನ ವಿಶ್ವ ಸಾಂಸ್ಕೃತಿ ಜಾಂಬೂರಿಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲು ತೀರ್ಮಾನಿಸಿದೆವು. ಡಾ| ಆಳ್ವರು ಅದಕ್ಕೆ ಮುಂದೆ ಬಂದಿದ್ದಾರೆ. ನಮ್ಮ ಮೌಲ್ಯಗಳು, ಸಂಸ್ಕƒತಿಯ ಹಿರಿಮೆಯನ್ನು ಪ್ರಪಂಚಕ್ಕೆ ತಿಳಿಸುವುದಕ್ಕೆ ಇದೊಂದು ಬೃಹತ್ ವೇದಿಕೆಯಾಗಲಿದೆ ಎಂದರು.
ಜಾಂಬೂರಿಯ ಯಶಸ್ಸಿಗಾಗಿ ಇಲ್ಲಿ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಇಲ್ಲೊಂದು ಸಾಂಸ್ಕೃತಿಕ ವಾತಾವರಣ ನಿರ್ಮಾಣಗೊಂಡಿದೆ. ವಿವಿಧೆಡೆಯಿಂದ ಬಂದಿದ್ದಾರೆ. ಡಾ| ಡಿ. ವೀರೇಂದ್ರ ಹೆಗ್ಗಡೆಯವರು, ಉಡುಪಿಯ ಅಷ್ಟಮಠಗಳ ಸ್ವಾಮೀಜಿಯವರು ಆಶೀರ್ವಾದ ಮಾಡಿದ್ದಾರೆ. ಸಚಿವರು, ಸಂಸದರು, ಎಲ್ಲರಿಂದ ಸಹಕಾರ ಸಿಗುತ್ತಿದೆ, ಇದು ಹೊಸ ದಾಖಲೆಯಾಗಿ ಹೊರಹೊಮ್ಮುತ್ತದೆ ಎಂಬ ಭಾವನೆ ನನ್ನದು ಎಂದು ಸಿಂಧ್ಯಾ ಹೇಳಿದರು.
20 ಸ್ಕೌಟ್ ಗೈಡ್ ನನ್ನೊಂದಿಗೆ ಬಂದಿದ್ದಾರೆ. ಉತ್ತಮ ಊಟೋಪಚಾರದ ವ್ಯವಸ್ಥೆ ಮಾಡಿದ್ದಾರೆ. ಮೊನ್ನೆಯೇ ಬಂದಿದ್ದೇವೆ, ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮಕ್ಕಳು ಸೇರುತ್ತಿರುವುದು ಖುಷಿಯ ವಿಚಾರ.
– ಸೂರ್ಯಲಾಲ್ ಗುಪ್ತ, ಸ್ಕೌಟ್ ಅಧಿಕಾರಿ, ಜಬಲ್ಪುರ, ಮಧ್ಯಪ್ರದೇಶ
ಕರ್ನಾಟಕಕ್ಕೆ ಮೊದಲ ಬಾರಿಗೆ ಬರುತ್ತಿದ್ದೇನೆ. ಇಲ್ಲಿಯ ವಾತಾವರಣ ಚೆನ್ನಾಗಿದೆ. ಅಡಿಕೆ, ತೆಂಗಿನ ತೋಟ ಪ್ರಥಮ ಬಾರಿಗೆ ನೋಡುತ್ತಿದ್ದೇನೆ. ಖುಷಿಯಾಗಿದೆ, ಹೈದರಾಬಾದ್‌ನ ರಾಷ್ಟ್ರೀಯಜಾಂಬೂರಿ ನೋಡಿದ್ದೇನೆ. ಇದು ವಿಭಿನ್ನವಾಗಿದೆ.
– ವಿಜಯ್ ಸಾಹೂ, ಸ್ಕೌಟ್ ವಿದ್ಯಾರ್ಥಿ ಕವಿಧಾಮ್, ಛತ್ತೀಸ್‌ಗಢ