Advertisement

ಮಂಗಳೂರು ಗೋಲಿಬಾರ್‌ ಖಂಡಿಸಿ ಪಿಎಫ್ಐ ಪ್ರತಿಭಟನೆ

09:28 PM Dec 23, 2019 | Team Udayavani |

ಹಾಸನ: ಮಂಗಳೂರಿನಲ್ಲಿ ನಡೆದ ಗೋಲಿಬಾರ್‌ನಲ್ಲಿ ಇಬ್ಬರು ಸಾವಿಗೆ ಮಂಗಳೂರು ಪೊಲೀಸ್‌ ಆಯುಕ್ತ ಹರ್ಷ ಹಾಗೂ ತಪ್ಪಿತಸ್ಥ ಪೊಲೀಸ್‌ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‌ಆರ್‌ಸಿ ವಾಪಸ್‌ ಪಡೆಯುವಂತೆ ಒತ್ತಾಯಿಸಿ ಪಾಪ್ಯುಲರ್‌ ಫ್ರಂಟ್‌ಆಫ್ ಇಂಡಿಯಾ ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

Advertisement

ಪೌರತ್ವ ಕಾಯ್ದೆ ತಿದ್ದುಪಡಿಯ ವಿರುದ್ಧ ಮಂಗಳೂರಿನಲ್ಲಿ ನಾಗರೀಕರು ಸ್ವಯಂಪ್ರೇರಿತರಾಗಿ ನಡೆಸಿದ ಪ್ರತಿಭಟನೆಯನ್ನು ದಮನಗೊಳಿಸಲು ಪೊಲೀಸರು ನಡೆಸಿದ ಗೋಲಿಬಾರ್‌ಗೆ ಇಬ್ಬರು ಮುಸಲ್ಮಾನ್‌ ಯುವಕರಾದ ಜಲೀಲ್‌ ಮತ್ತು ನೌಶೀನ್‌ ಎಂಬವರು ಬಲಿಯಾಗಿದ್ದಾರೆ. ಪೊಲೀಸರ ಗೋಲಿಬಾರ್‌ ಪೂರ್ವಯೋಜಿತ ಕೃತ್ಯವಾಗಿದೆ ಎಂದು ಆರೋಪಿಸಿದರು.

ನ್ಯಾಯಾಂಗ ತನಿಖೆ ನಡೆಸಿ: ಪೊಲೀಸರು ಉದ್ದೇಶ ಪೂರ್ವಕವಾಗಿಯೇ ಯುವಕರ ಎದೆ ಮತ್ತು ತಲೆಯ ಭಾಗಕ್ಕೆ ಗುಂಡುಹಾರಿಸಿರುವ ವೀಡಿಯೋ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಷ್ಟೆಲ್ಲ ಗುಂಡು ಹಾರಿಸಿದರೂ ಒಬ್ಬರೂ ಸಾಯಲಿಲ್ಲವಲ್ಲಾ ಎಂದು ಗುಂಡು ಹಾರಿಸಲು ಪ್ರೇರೇಪಿಸುತ್ತಿರುವ ಪೊಲೀಸ್‌ ಅಧಿಕಾರಿಯ ಆಡಿಯೋ, ವೀಡಿಯೋ ದೃಶ್ಯಗಳು ಕೂಡ ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ಹಾಗಾಗಿ ಇಬ್ಬರು ಮುಸ್ಲಿಂ ಯುವಕರ ಹತ್ಯೆಗೆ ಮಂಗಳೂರು ಆಯುಕ್ತ ಹರ್ಷ ಹಾಗೂ ಅವರ ತಂಡದ ಇತರ ಅಧಿಕಾರಿಗಳು ನೇರ ಕಾರಣವಾಗಿದ್ದು, ಅವರನ್ನು ಸೇವೆಯಿಂದ ಅಮಾನತುಗೊಳಿಸಿ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಜನಾಂದೋಲನ: ಮಂಗಳೂರಿನಲ್ಲಿ ಪೊಲೀಸರು ನಡೆಸಿರುವ ಮೃಗೀಯ ವರ್ತನೆಯು ನಾಗರಿಕರನ್ನು ಆತಂಕಕ್ಕೆ ಒಳಗಾಗಿದೆ. ಪೊಲೀಸರ ಈ ರೀತಿಯ ಬೆದರಿಕೆಯ ಕ್ರಮಗಳು ಜನರ ಪ್ರತಿಭಟನೆಯ ಕಿಚ್ಚನ್ನು ತಣಿಸುವುದಿಲ್ಲ ಇದು ಜನಾಂದೋಲನವಾಗಿ ನ್ಯಾಯ ಪಡೆಯುವವರೆಗೂ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿಯವರಿಗೆ ಸಲ್ಲಿಸಿರುವ ಮನವಿಯಲ್ಲಿ ಎಚ್ಚರಿಸಿದ್ದಾರೆ. ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಫ‌ರೀದ್‌ಪಾಷಾ, ಅಮೀರ್‌ ಜಾನ್‌, ಶಫಿ, ಉಮರ್‌ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ರಾಜ್ಯ ಸರ್ಕಾರ ವಜಾಕ್ಕೆ ಆಗ್ರಹ
ಹಾಸನ: ಪೌರತ್ವ ಕಾಯ್ದೆಯ ವಿರುದ್ಧ ಪ್ರತಿಭಟನೆಗೆ ಅಡ್ಡಿಪಡಿಸಿ ಲಾಠಿಚಾರ್ಜ್‌, ಗೋಲಿಬಾರ್‌ ಮಾಡಿದ ಬಿಜೆಪಿ ಸರ್ಕಾವನ್ನು ವಜಾಗೊಳಿಸುವಂತೆ ಕೆಪಿಸಿಸಿ ಸದಸ್ಯ, ವಕೀಲ ವಿನಯ್‌ಗಾಂಧಿ ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ಮೋದಿಯವರು ಹಾಗೂ ಗೃಹ ಸಚಿವ ಅಮಿತ್‌ ಶಾ ಅವರು ಸಾರ್ವಜನಿಕರ ಅಭಿಪ್ರಾಯ, ಚರ್ಚೆಗೆ ಅವಕಾಶ ಕಲ್ಪಿಸದೇ, ವಿರೋಧ ಪಕ್ಷದ ನಾಯಕರ ಅಭಿಪ್ರಾಯಗಳಿಗೂ ಮನ್ನಣೆ ನೀಡದೇ ಪೌರತ್ವ ಕಾಯ್ದೆ ತಿದ್ದುಪಡಿ ಮಾಡಿ ದೇಶದಲ್ಲಿ ಕ್ಷೋಭೆಗೆ ಕಾರಣರಾಗಿದ್ದಾರೆ ಎಂದು ದೂರಿದರು.

Advertisement

ಮಂಗಳೂರು ಗೋಲೀಬಾರ್‌ನಲ್ಲಿ 2 ಜನ ಸಾವನಪ್ಪಿದ್ದಾರೆ. ಶಾಂತ ರೀತಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಹತ್ತಿಕ್ಕಲು ಏಕಾಏಕಿ ಲಾಠಿ ಚಾರ್ಜ್‌, ಗೋಲಿಬಾರ್‌ ಮಾಡಿ ಪ್ರತಿಭಟನೆಗೆ ಅಡ್ಡಿಪಡಿಸಿದ್ದಾರೆ. ಜನರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಅವಕಾಶ ನೀಡದೆ ಗೋಲಿಬಾರ್‌ ನಡೆಸಿ ರಾಜ್ಯದಲ್ಲಿ ಅಶಾಂತಿಗೆ ಕಾರಣರಾಗಿರುವ ಬಿಜೆಪಿ ಸರ್ಕಾರವನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಪೌರತ್ವ ಕಾಯ್ದೆ ತಿದ್ದುಪಡಿ ಬೆಂಬಲಿಸಿ ಎಬಿವಿಪಿ ಪ್ರದರ್ಶನ
ಹಾಸನ: ಪೌರತ್ವ ತಿದ್ದುಪಡಿ ಕಾಯಿದೆ ಬೆಂಬಲಿಸಿ ಹಾಗೂ ಎಬಿವಿಪಿ ಕಾರ್ಯಕರ್ತರ ಮೇಲೆ ಎಸ್‌ಎಫ್ಐ ಹಲ್ಲೆ ನಡೆಸಿರುವುದನ್ನು ಖಂಡಿಸಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸುವ ಹೆಸರಿನಲ್ಲಿ ಮತಾಂಧರು, ವಾಮಪಂಥಿ ಮಾವೋವಾದಿಗಳು ಹಾಗೂ ರಾಷ್ಟ್ರ ವಿರೋಧಿ ಶಕ್ತಿಗಳು ವಿದ್ಯಾರ್ಥಿಗಳನ್ನು ಉದ್ರೇಕಿಸಿ ದೇಶದಲ್ಲಿ ಹಿಂಸಾತ್ಮಕ ವಾತಾವರಣ ಸೃಷ್ಟಿಸುವ ಕೃತ್ಯವನ್ನು ಎಬಿಪಿ ಖಂಡಿಸುತ್ತದೆ ಎಂದು ಹೇಳಿದರು.

ಕೇರಳದ ಕಾಲೇಜುಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದ ಎಬಿವಿಪಿ ಕಾರ್ಯಕರ್ತರ ಮೇಲೆ ಎಸ್‌ಎಫ್ಐ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಈ ವಾಮಪಂಥಿ, ಕಮ್ಯೂನಿಸ್ಟ್‌ ವಿದ್ಯಾರ್ಥಿ ಸಂಘಟನೆಯು ಕಾಯಿದೆ ಬಗ್ಗೆ ವಿದ್ಯಾರ್ಥಿಗಳಿಗೆ ಸುಳ್ಳು ಮಾಹಿತಿ ಕೊಟ್ಟು ವಿದ್ಯಾರ್ಥಿಗಳನ್ನು ಉದ್ರೇಕಿಸುವ ಮೂಲಕ ದೇಶಕ್ಕೆ ಎಸ್‌ಎಫ್ಐ ನಿಷ್ಠೆ ಕಡಿಮೆ ಇದೆ ಎಂಬುದನ್ನು ಸಾಬೀತುಪಡಿಸಿದೆ. ಇಂತಹ ಆಂದೋಲನವನ್ನು ಗಮನಿಸಿದರೇ ಮಾವೋವಾದಿ ಶಕ್ತಿಗಳು ದೇಶದ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳನ್ನು ಪ್ರಚೋದಿಸಿ ಹಿಂಸಾತ್ಮಕ ವಾತಾವರಣವನ್ನು ಸೃಷ್ಟಿಸುತ್ತಿರುವುದು ಸ್ಪಷ್ಟವಾಗುತ್ತದೆ ಎಂದರು.

ರಾಜಕೀಯ ಪಕ್ಷಗಳು ಹಿಂಸಾತ್ಮಕ ಕೃತ್ಯಗಳಿಗೆ ಬೆಂಬಲ ನೀಡಿ ದಂಗೆಯೆಬ್ಬಿಸುವ ಸಂಘಟನೆಗಳ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು. ವಿದ್ಯಾರ್ಥಿ ಸಮುದಾಯ ಯಾವುದೇ ಉಹಾಪೋಹಗಳಿಗೆ ಕಿವಿಗೊಡದೇ ಶಾಂತಿಯಿಂದ ವರ್ತಿಸಬೇಕು. ದೇಶದಲ್ಲಿ ಹಿಂಸಾತ್ಮಕ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿರುವ ರಾಷ್ಟ್ರ ವಿರೋಧಿ ಶಕ್ತಿಗಳನ್ನು ಒಗ್ಗಟ್ಟನಿಂದ ಎದುರಿಸಿ ದೇಶದೊಳಗೆ ಶಾಂತಿ, ಸಹಬಾಳ್ವೆ ಕಾಪಾಡಬೇಕೆಂದು ಮನವಿ ಮಾಡಿದರು. ಎಬಿಪಿಯ ಮುಖಂಡರಾದ ಭರತ್‌, ಚೇತನ್‌, ದರ್ಶನ್‌, ಆದರ್ಶ್‌, ರಮೇಶ್‌, ಅಮೃತ್‌ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next