ನವದೆಹಲಿ: ದೇಶದ ವಿವಿಧ ಭಾಗಗಳಲ್ಲಿ ಸರಣಿ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪದ ಮೇಲೆ ಪಿಎಫ್ ಐ ಸಂಘಟನೆಗೆ ಸೇರಿದ ಇಬ್ಬರನ್ನು ಉತ್ತರಪ್ರದೇಶ ಪೊಲೀಸರು ಮಂಗಳವಾರ(ಫೆ.16, 2021) ಬಂಧಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:“ಕೋವಿಡ್ ಬಗ್ಗೆ ಕೇಂದ್ರ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ” : ರಾಹುಲ್ ಗಾಂಧಿ
ಬಂಧಿತರನ್ನು ಕೇರಳ ಮೂಲದ ಅನ್ಷದ್ ಬದ್ರುದ್ದೀನ್ ಮತ್ತು ಫಿರೋಜ್ ಖಾನ್ ಎಂದು ಗುರುತಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಎಡಿಜಿ) ಪ್ರಶಾಂತ್ ಕುಮಾರ್ ತಿಳಿಸಿರುವುದಾಗಿ ಜೀ ನ್ಯೂಸ್ ವರದಿ ಮಾಡಿದೆ.
ದೇಶಾದ್ಯಂತ ಬಸಂತ್ ಪಂಚಮಿಯಂದು ಸರಣಿ ವಿಧ್ವಂಸಕ ಕೃತ್ಯ ಎಸಗಲು ಪಿಎಫ್ ಐ ಭಾರೀ ಸಂಚು ರೂಪಿಸಿದ್ದು, ಇಬ್ಬರನ್ನು ಬಂಧಿಸುವ ಮೂಲಕ ಸಂಭಾವ್ಯ ದಾಳಿಯನ್ನು ಎಸ್ ಟಿಎಫ್ ವಿಫಲಗೊಳಿಸಿದಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತರಿಂದ ಭಾರೀ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ಕೆಂಪು ವಯರ್, ಪಿಸ್ತೂಲ್, ನಗದು, ಪಾನ್ ಕಾರ್ಡ್, ನಾಲ್ಕು ಎಟಿಎಂ, ಪೆನ್ ಡ್ರೈವ್, ಮೆಟ್ರೋ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಮತ್ತು ಆಧಾರ್ ಕಾರ್ಡ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.