Advertisement
ಡಿಜಿಟಲ್ ಪ್ರಮಾಣಪತ್ರ ಬರುವುದಕ್ಕೆ ಮೊದಲು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಪ್ರಮಾಣಪತ್ರ ನೀಡಲಾಗುತ್ತಿತ್ತು. ಆಗ ಅಶಕ್ತರು ಅರ್ಜಿಗೆ ತಮ್ಮ ಸಹಿ ಮಾಡಿ ಬ್ಯಾಂಕ್ ಅಥವಾ ಪಿಂಚಣಿ ಕಚೇರಿಗೆ ಸಲ್ಲಿಸಬಹುದಿತ್ತು. ಈಗ ಡಿಜಿಟಲ್ ಪ್ರಮಾಣಪತ್ರ ಕಡ್ಡಾಯವಾಗಿದ್ದು, ಬಯೋಮೆಟ್ರಿಕ್ಸ್ ಮಾಡಿಸುವ ಸಂಬಂಧ ಫಲಾನುಭವಿಗಳು ಸಂಬಂಧಪಟ್ಟ ಬ್ಯಾಂಕ್‌ಗಳಿಗೆ ಖುದ್ದು ಹಾಜರಾಗಲೇಬೇಕು. ಇದರಿಂದ ನಡೆದಾಡುವುದಕ್ಕೆ ಅಸಾಧ್ಯವಾದವರು, ಅನಾರೋಗ್ಯಕ್ಕೆ ಒಳಗಾದವರು, ವಿಕಲಚೇತನ ಪಿಂಚಣಿದಾರರಿಗೆ ತುಂಬಾ ತೊಂದರೆಯಾಗುತ್ತಿತ್ತು.
ಈ ಸಮಸ್ಯೆ ತಪ್ಪಿಸಲು ಮಂಗಳೂರು ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಈಗ ಹಿರಿಯ ನಾಗರಿಕ ಸ್ನೇಹಿ ಉಪಕ್ರಮ ಕೈಗೊಂಡಿದೆ. ಮಂಗಳೂರು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ಮಾರುತಿ ಭೋಯಿ ಈ ವಿನೂತನ ಪ್ರಯತ್ನ ವೊಂದಕ್ಕೆ ಮುಂದಾಗಿರುವುದು ವಿಶೇಷ. ಅದರಂತೆ ಅಶಕ್ತ ಪಿಂಚಣಿದಾರರ ಮನೆಗಳಿಗೆ ತಮ್ಮ ಇಲಾಖೆ ಸಿಬಂದಿಯನ್ನೇ ಕಳುಹಿಸಿ ಫಲಾನುಭವಿಗಳಿಂದ ಡಿಜಿಟಲ್ ಮಾದರಿ ಜೀವಿತ ಪ್ರಮಾಣ ಪತ್ರ ಅರ್ಜಿಗಳನ್ನು ಭರ್ತಿ ಮಾಡಿಸಿಕೊಳ್ಳುವ ತೀರ್ಮಾನ ಕೈಗೊಂಡಿದ್ದಾರೆ. ಜಿಲ್ಲೆಯಾದ್ಯಂತ ಜ.30ರಿಂದ ಇಲಾಖೆ ಸಿಬಂದಿಯೇ ಡಿಜಿಟಲ್ ಜೀವಿತ ಪ್ರಮಾಣ ಪತ್ರ ಪಡೆಯುವುದಕ್ಕೆ ಅಶಕ್ತ ಪಿಂಚಣಿದಾರರ ಮನೆಗಳಿಗೆ ತೆರಳುವ ಕಾರ್ಯ ಪ್ರಾರಂಭಿಸಿದ್ದಾರೆ. ವಿಧಾನ
ಅಶಕ್ತ ಪಿಂಚಣಿದಾರರು ಸ್ವತಃ ಅಥವಾ ತಮ್ಮ ಪ್ರತಿನಿಧಿಗಳ ಮೂಲಕ ಮಂಗಳೂರಿನಲ್ಲಿರುವ ಪ್ರಾದೇಶಿಕ ಕಚೇರಿಯನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಅಗತ್ಯ ಮಾಹಿತಿ ಒದಗಿಸಬೇಕು. ಬಳಿಕ ನಿರ್ದಿಷ್ಟ ದಿನಾಂಕ ನಿಗದಿಪಡಿಸಿ ಮೊಬೈಲ್ ಮೂಲಕ ತಿಳಿಸಲಾಗುತ್ತದೆ. ಅಂದು ಕಚೇರಿಯ ಸಿಬಂದಿ ಅಗತ್ಯ ಉಪಕರಣ ಸಹಿತ ಸಹಿತ ತೆರಳಿ ಬಯೋಮೆಟ್ರಿಕ್ಸ್ ದಾಖಲಿಸಿಕೊಳ್ಳುತ್ತಾರೆ. ಪೂರಕ ಪ್ರಕ್ರಿಯೆಗಳು ಮುಗಿದು ಜೀವಿತ ಪ್ರಮಾಣ ದಾಖಲಾಗುತ್ತದೆ.
Related Articles
ದೈಹಿಕವಾಗಿ ಅಶಕ್ತರಾಗಿ ಡಿಜಿಟಲ್ ಜೀವಿತ ಪ್ರಮಾಣಪತ್ರ ಸಲ್ಲಿಸಲು ಸಾಧ್ಯವಾಗದ ಪಿಂಚಣಿದಾರರ ನಿವಾಸಕ್ಕೆ ತೆರಳಿ ಪ್ರಮಾಣಪತ್ರ ಮಾಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಅಶಕ್ತ ಪಿಂಚಣಿದಾರರು ತಮ್ಮ ಪ್ರತಿನಿಧಿಗಳ ಮೂಲಕ ಮಂಗಳೂರಿನಲ್ಲಿರುವ ಪ್ರಾದೇಶಿಕ ಕಚೇರಿಯನ್ನು ಸಂಪರ್ಕಿಸಿದರೆ ಸಿಬಂದಿ ಅವರ ಮನೆಗೆ ಹೋಗಿ ಡಿಜಿಟಲ್ ಜೀವಿತ ಪ್ರಮಾಣ ಪತ್ರ ಮಾಡುತ್ತಾರೆ.
-ಮಾರುತಿ ಭೋಯಿ, ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರು, ಮಂಗಳೂರು ಕಚೇರಿ
Advertisement
ಅತ್ಯುತ್ತಮ ಸೇವೆಇದು ಅತ್ಯುತ್ತಮ ಸೇವೆಯಾಗಿದೆ. ನನ್ನ ಅಮ್ಮ ಜೂಲಿಯಾನ ಲೋಬೋ ಅವರಿಗೆ 70 ವರ್ಷ. ನಡೆದಾಡಲು ಸಾಧ್ಯವಾಗುತ್ತಿಲ್ಲ. ಪಿಎಫ್ ಕಚೇರಿಯವರು ನಮ್ಮ ಮನವಿಗೆ ಸ್ಪಂದಿಸಿ ಮನೆಗೆ ಬಂದು ಡಿಜಿಟಲ್ ಪ್ರಮಾಣ ಪತ್ರ ಮಾಡಿಸಿದ್ದಾರೆ. ಈ ಸೇವೆ ಆಶಕ್ತರಿಗೆ ಒಂದು ವರದಾನವಾಗಿದೆ.
– ಕ್ಲಾರಾ ಪಾçಸ್, ಮರೋಳಿ