ಮಂಗಳೂರು: ಆಟೋ ರಿಕ್ಷಾ ಚಾಲಕರಿಗೂ ಭವಿಷ್ಯ ನಿಧಿ ಮತ್ತು ಇ.ಎಸ್.ಐ. ಸೌಲಭ್ಯ ಕಲ್ಪಿಸುವ ಯೋಜನೆ ನಗರದಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳ್ಳಲಿದೆ. ಇದು ಯಶಸ್ವಿಯಾದರೆ ದೇಶಕ್ಕೇ ಮಾದರಿ ಎನಿಸಲಿದೆ. ಮಂಗಳೂರಿನ ಹಲವು ಪ್ರಥಮಗಳ ಸಾಲಿಗೆ ಸೇರ್ಪಡೆಗೊಳ್ಳಲಿದೆ. ಪ್ರಸ್ತುತ ಆಟೋ ಚಾಲಕರು ಅಸಂಘಟಿತ ವಲಯದವರು. ಸಂಘಟಿತ ವಲಯದ ಕಾರ್ಮಿಕರಿಗಿರುವ ಪಿ.ಎಫ್., ಇ.ಎಸ್.ಐ. ಮತ್ತಿತರ ಸವಲತ್ತುಗಳಿಲ್ಲ. ಅವರ ಕುಟುಂಬಕ್ಕೂ ಸಾಮಾಜಿಕ ಭದ್ರತೆ ಇಲ್ಲ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಕೆಲವು ಸ್ವಯಂ ಸೇವಾ ಸಂಸ್ಥೆಗಳು ಮತ್ತು ರಿಕ್ಷಾ ಚಾಲಕರ ಸಂಘಟನೆಗಳು ಜತೆಗೂಡಿ ಭವಿಷ್ಯ ನಿಧಿ ಮತ್ತು ಇ.ಎಸ್.ಐ. ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಈ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಿವೆ.
ಟ್ರಸ್ಟ್ ಸ್ಥಾಪನೆ
ಈ ಸೌಲಭ್ಯಗಳನ್ನು ಒದಗಿಸಲು ಕಂಪೆನಿ/ಸಂಸ್ಥೆ/ಮಾಲಕ-ಕಾರ್ಮಿಕ ಪರಿಕಲ್ಪನೆಯೊಂದಿಗೆ ಮಾಲಕರ ಮತ್ತು ಕಾರ್ಮಿಕರ ವಂತಿಗೆ ಅಗತ್ಯ. ಹಾಗಾಗಿ ರಿಕ್ಷಾ ಚಾಲಕರು ಟ್ರಸ್ಟ್ ರಚಿಸಲಿದ್ದು, ಅದರಲ್ಲಿ ನೋಂದಣಿಯಾದವರನ್ನು ಟ್ರಸ್ಟ್‌ನ ಕಾರ್ಮಿಕರೆಂದು ಪರಿಗಣಿಸಿ ಸೌಲಭ್ಯ ಒದಗಿಸಲಾಗುವುದು.
ಇಪ್ಪತ್ತಕ್ಕೂ ಹೆಚ್ಚಿನ ಕಾರ್ಮಿಕರನ್ನು ಹೊಂದಿರುವ ಕಂಪೆನಿ ಕಡ್ಡಾಯವಾಗಿ ತನ್ನ ಕಾರ್ಮಿಕರನ್ನು ಪಿ.ಎಫ್. ಮತ್ತು ಇ.ಎಸ್.ಐ. ವ್ಯಾಪ್ತಿಗೆ ತರಬೇಕೆನ್ನುತ್ತದೆ ಕಾನೂನು. ಕಾರ್ಮಿಕರು ಮತ್ತು ಕಂಪೆನಿ ತಲಾ ಶೇ.12ನ್ನು ಪಿ.ಎಫ್. ಸಂಸ್ಥೆಗೆ ಪಾವತಿಸಬೇಕು. ಅದೇ ರೀತಿ ಇ.ಎಸ್.ಐ. ವಂತಿಗೆಯಾಗಿ ಕಾರ್ಮಿಕರಿಂದ ಶೇ. 1.50, ಉದ್ಯೋಗದಾತರಿಂದ ಶೇ. 4.50ರಷ್ಟನ್ನು ಇ.ಎಸ್.ಐ. ಇಲಾಖೆಗೆ ಪ್ರತಿ ತಿಂಗಳ ನಿರ್ದಿಷ್ಟ ದಿನದೊಳಗೆ ಪಾವತಿಸಬೇಕು. ಪಿ.ಎಫ್. ಫಲಾನುಭವಿ 10 ವರ್ಷಕ್ಕೂ ಹೆಚ್ಚು ಕಾಲ ಕೆಲಸ ನಿರ್ವಹಿಸಿದಲ್ಲಿ ಪಿಂಚಣಿಗೆ ಅರ್ಹ ಎನ್ನುತ್ತದೆ ನಿಯಮ. ಹಾಗಾಗಿ ಮೊದಲಿಗೆ 20 ಮಂದಿಯನ್ನು ನೋಂದಾಯಿಸಿಕೊಂಡು ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ನಗರದಲ್ಲಿ ಸುಮಾರು 5 ಸಾವಿರ ರಿಕ್ಷಾಗಳಿದ್ದು, ಯೋಜನೆ ಯಶಸ್ವಿಯಾದರೆ ಉಳಿದವರಿಗೂ ಅನ್ವಯವಾಗಬಹುದು.
ಉದ್ದೇಶಿತ ಟ್ರಸ್ಟ್‌ನ್ನು ಆಟೋ ರಿಕ್ಷಾ ಡ್ರೈವರ್ ವೆಲ್‌ಫೇರ್ ಟ್ರಸ್ಟ್ ಎಂಬುದಾಗಿ ಹೆಸರಿಸಲಾಗಿದೆ. ಅದಕ್ಕೊಂದು ಕಚೇರಿ ಇರಲಿದ್ದು, ನೋಂದಾಯಿತರು ಪ್ರತಿ ದಿನ ನಿಗದಿತ ಮೊತ್ತವನ್ನು (100 ರೂ. ಎಂದು ಅಂದಾಜು) ಟ್ರಸ್ಟ್‌ಗೆ ಪಾವತಿಸಬೇಕು. ಟ್ರಸ್ಟ್ ತಿಂಗಳಿಗೆ ಒಬ್ಬ ಚಾಲಕನಿಗೆ 2,500 ರೂ.ನಂತೆ ಪಿ.ಎಫ್. ಗೆ ಹಾಗೂ 300 ರೂ. ಗಳನ್ನು ಇ.ಎಸ್.ಐ. ಸಂಸ್ಥೆಗೆ ವಂತಿಗೆಯಾಗಿ ಪಾವತಿಸಲಿದೆ.
ಪ್ರಾಯೋಗಿಕ ಪ್ರಯತ್ನ
ರಿಕ್ಷಾ ಚಾಲಕರಿಗೆ ಸಾಮಾಜಿಕ ಭದ್ರತೆೆ ಒದಗಿಸಲು ಈ ಯೋಜನೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗುತ್ತಿದೆ. ಈ ಯೋಜನೆಗೆ ಕೆಲವು ಸಂಘ ಸಂಸ್ಥೆಗಳು ಸಲಹೆ ನೀಡಿವೆ. ಪಿ.ಎಫ್. ಮತ್ತು ಇ.ಎಸ್.ಐ. ಸಂಸ್ಥೆಗಳ ಅಧಿಕಾರಿಗಳ ಜತೆ ಮಾತನಾಡಿದ್ದು, ಶೀಘ್ರವೇ ಅಂತಿಮಗೊಳಿಸಲಾಗುವುದು.
– ಸುದನ್ ಕುಮಾರ್‌ಉರ್ವ, ರಿಕ್ಷಾ ಚಾಲಕರ ಸಂಘಟನೆಯ ಮುಖಂಡ.
— ಹಿಲರಿ ಕ್ರಾಸ್ತಾ