ಹೊಸದಿಲ್ಲಿ : ಪೆಟ್ಯಾ ರಾನ್‌ಸಮ್‌ವೇರ್ ಭಾರತದ ಅತೀ ದೊಡ್ಡ ಕಂಟೇನರ್ ಬಂದರಿನ ಕಂಪ್ಯೂಟರ್ ಜಾಲ ಹಾಗೂ ವ್ಯವಸ್ಥೆಯನ್ನು ತೀವ್ರವಾಗಿ ಬಾಧಿಸಿದ್ದು ಆ ಪರಿಣಾಮವಾಗಿ ಜವಾಹರಲಾಲ್ ನೆಹರೂ ಬಂದರಿನ ಎಲ್ಲ ಕೆಲಸ-ಕಾರ್ಯಗಳನ್ನು ಅಮಾನತುಗೊಳಿಸಲಾಗಿದೆ.
ಪೆಟ್ಯಾ ರಾನ್‌ಸಮ್‌ವೇರ್ ಅಮೆರಿಕ ಮತ್ತು ಯುರೋಪಿನ ಆದ್ಯಂತ ತೀವ್ರ ಅಡಚಣೆ ಉಂಟುಮಾಡಿದೆ. ತೊಂದರೆಗೆ ಒಳಗಾದ ಬೃಹತ್ ಸಂಸ್ಥೆಗಳಲ್ಲಿ ಜಾಹೀರಾತು ಕ್ಷೇತ್ರದ ದಿಗ್ಗಜ ಸಂಸ್ಥೆ ಎನಿಸಿರುವ ಡಬ್ಲ್ಯುಪಿಪಿ, ಫ್ರೆಂಚ್ ಕಟ್ಟಡ ಸಲಕರಣೆಗಳ ಉತ್ಪಾದನಾ ಕಂಪೆನಿ ಸೈಂಟ್ ಗೋಬೇನ್ ಮತ್ತು ರಶ್ಯದ ಉಕ್ಕು ಮತ್ತು ತೈಲ ಕಂಪೆನಿಗಳಾದ ಎವರೇಝ್ ಮತ್ತು ರೋಸ್‌ನೆಫ್ಟ್ ಸೇರಿವೆ.
ಪೆಟ್ಯಾ ರಾನ್‌ಸಮ್‌ವೇರ್ ದಾಳಿಯಿಂದ ತಮ್ಮ ಕಂಪ್ಯೂಟರ್ ಜಾಲ ಹಾಗೂ ವ್ಯವಸ್ಥೆ ಕೂಡ ತೀವ್ರವಾಗಿ ಬಾಧಿತವಾಗಿದೆ ಎಂದು ಆಹಾರೋದ್ಯಮ ದಿಗ್ಗಜ ಮಾಂಡೆಲಿಸ್, ಕಾನೂನು ಸೇವಾ ಸಂಸ್ಥೆ ಡಿಎಲ್‌ಪಿ ಫೈಪರ್, ಡೆನ್ಮಾರ್ಕ್ ನೌಕೋದ್ಯಮ ಮತ್ತು ಸಾರಿಗೆ ದಿಗ್ಗಜ ಎಪಿ ಮೋಲರ್ ಮತ್ತು ಮರ್‌ಸ್ಕ್ ಮತ್ತು ಹೆರಿಟೇಜ್ ವ್ಯಾಲಿ ಹೆಲ್ತ್ ಸಿಸ್ಟಮ್ ಸಂಸ್ಥೆಯು ಪಿಟ್ಸ್‌ಬರ್ಗ್‌ನಲ್ಲಿ ನಡೆಸುತ್ತಿರುವ ಆಸ್ಪತ್ರೆಗಳು, ಶುಶ್ರೂಷಾ ಕೇಂದ್ರಗಳು ಹೇಳಿಕೊಂಡಿವೆ.
ಪೆಟ್ಯಾ ರಾನ್‌ಸಮ್‌ವೇರ್ ಕೂಡ ಈ ಮೊದಲಿನ ವನ್ನಾಕ್ರೈ ಮಾಲ್‌ವೇರ್ ರೀತಿಯದ್ದೇ ಆಗಿದ್ದು ಹಾನಿಗೀಡಾಗಿರುವ ಕಂಪ್ಯಟರ್ ವ್ಯವಸ್ಥೆಯ ಮಾಲಕ ಸಂಸ್ಥೆಗಳು ಬಿಟ್‌ಕಾಯಿನ್ ಮೂಲಕ ಒತ್ತೆಹಣ ಪಾವತಿಸಿ ತಮ್ಮ ಕೆಟ್ಟು ಹೋಗಿರುವ ಕಂಪ್ಯೂಟರ್ ಜಾಲ, ವ್ಯವಸ್ಥೆ, ಕಡತ ಇತ್ಯಾದಿಗಳನ್ನು ಮತ್ತೆ ಹಿಂದಿನ ಸ್ಥಿತಿಗೆ ತರಬಹುದಾಗಿದೆ.
ಪೆಟ್ಯಾ ರಾನ್‌ಸಮ್‌ವೇರ್ ವೈರಸ್ ಬಾಧಿತ ಕಂಪ್ಯೂಟರ್ ಪರದೆಗಳಲ್ಲಿ 300 ಡಾಲರ್ ಬಿಟ್‌ಕಾಯಿನ್ ಒತ್ತೆ ಹಣ ತೆತ್ತು ಬಾಧೆಯಿಂದ ಮುಕ್ತರಾಗಬಹುದು ಎಂಬ ಸಂದೇಶ ಕಂಡು ಬರುತ್ತದೆ. ಹಾಗೆ ಬಿಟ್ ಕಾಯಿನ್ ಮೂಲಕ ಒತ್ತೆ ಹಣ ಪಾವತಿಸುವವರು ನಮೂದಿತ ಇ-ಮೇಲ್ ವಿಳಾಸಕ್ಕೆ ಪಾವತಿ ದೃಢೀಕರಣ ಮಾಡಬೇಕಾಗುತ್ತದೆ. ಆದರೆ ಈ ನಡುವೆ ಇ-ಮೇಲ್ ಸೇವಾ ಪೂರೈಕೆ ದಾರ ಸಂಸ್ಥೆ ಈ ಒತ್ತೆ-ಇಮೇಲ್ ವಿಳಾಸವನ್ನು ಮುಚ್ಚಿಹಾಕಿರುವುದಾಗಿ ದಿ ಗಾರ್ಡಿಯನ್ ವರದಿ ಮಾಡಿದೆ.
ನಾವು ನಮ್ಮ ಇ-ಮೇಲ್ ವೇದಿಕೆ ಈ ರೀತಿ ದುರಪಯೋಗವಾಗುವುದನ್ನು ಸಹಿಸುವುದಿಲ್ಲ ಎಂದು ಜರ್ಮನಿಯ ಇ-ಮೇಲ್ ಸೇವಾ ಪೂರೈಕೆದಾರ ಸಂಸ್ಥೆ ಪಾಸ್ಟಿಯೋ ತನ್ನ ಬ್ಲಾಗ್ ಪೋಸ್ಟ್ ನಲ್ಲಿ ಹೇಳಿದೆ. ಇದರಿಂದಾಗಿ ಈಗ ಪೆಟ್ಯಾ ರ್ಯಾನ್‌ಸಮ್‌ವೇರ್ ಬಾಧಿತರಿಗೆ ಮುಂದಿನ ದಾರಿ ಕಾಣದಾಗಿದೆ.