Advertisement

ಮರವಂತೆ-ತ್ರಾಸಿ ಕಡಲ ತೀರದ ಗೂಡಂಗಡಿಗಳ ತೆರವಿಗೆ ಒಂದು ವರ್ಷ

12:54 PM Apr 22, 2019 | keerthan |

ಉಪ್ಪುಂದ: ರಾ.ಹೆದ್ದಾರಿ 66 ಮರವಂತೆ ಬೀಚ್‌ನ ಬದಿಯಲ್ಲಿರುವ ಗೂಡಂಗಡಿಗಳನ್ನು ತೆರವುಗೊಳಿಸಿ ಇದೀಗ ಒಂದು ವರ್ಷವಾಗಿದ್ದು ಇದುವರೆಗೂ ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಇರುವುದು ವ್ಯಾಪಾರಿಗಳನ್ನು ಸಂಕಷ್ಟಕ್ಕೆ ದೂಡಿದೆ.

Advertisement

ಮರವಂತೆ-ತ್ರಾಸಿ ಕಡಲ ತೀರದಲ್ಲಿ ಪೈಲಟ್‌ ಕಾಮಗಾರಿಯೊಂದನ್ನು ನಡೆಸಲು ಮತ್ತು ಹೆದ್ದಾರಿ ವಿಸ್ತರಣೆಗೆ ಗೂಡಂಗಡಿಗಳು ಅಡ್ಡಿಯಾಗಿವೆ ಎಂಬ ಹಿನ್ನೆಲೆಯಲ್ಲಿ ಗೂಡಂಗಡಿಗಳನ್ನು ತೆರವುಗೊಳಿಸಲಾಗಿತ್ತು. ಮುಂಜಾನೆ ವ್ಯಾಪಾರಿಗಳು ಅಂಗಡಿ ತೆರೆಯಲು ಬಂದರೆ, ಅಧಿಕಾರಿಗಳು ಪೊಲೀಸ್‌ ಭದ್ರತೆಯಲ್ಲಿ ಅಂಗಡಿ ತೆರವಿಗೆ ಸಜ್ಜಾಗಿದ್ದರು!

ವಿರೋಧದ ನಡುವೆ ತೆರವು
25 ವರ್ಷಗಳಿಂದ ಬೀಡ ಸೇರಿದಂತೆ ಇನ್ನಿತರ ಅಂಗಡಿಗಳನ್ನು ಹಾಕಿಕೊಂಡು ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಿಗಳನ್ನು ಕುಂದಾಪುರ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ನಲ್ಲಿ 25ಕ್ಕೂ ಹೆಚ್ಚು ಅಂಗಡಿಗಳನ್ನು ತೆರವುಗೊಳಿಸಲಾಗಿತ್ತು.

ಹುಸಿಯಾದ ಭರವಸೆ
ಈ ಅಂಗಡಿಗಳೇ ಜೀವನಾಧಾರ ಎಂದು ವ್ಯಾಪಾರಿಗಳು ಕಣ್ಣೀರು ಹಾಕಿದ್ದರು. ಅದರಂತೆ ಮಾನವೀಯ ನಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಸ್ಥಳದಲ್ಲಿ ಎಲ್ಲ ಗೂಡಂಗಡಿಗಳಿಗೂ ಪರ್ಯಾಯ ವ್ಯವಸ್ಥೆ ಮಾಡಿಕೊಡುವ ಕುರಿತು ಅಂದಿನ ಉಪವಿಭಾಗಾಧಿಕಾರಿ ಭೂಬಾಲನ್‌ ಭರವಸೆ ನೀಡಿದ್ದರು. ಆದರೆ ಇದುವರೆಗೂ ಯಾವುದೇ ಸೂಕ್ತ ವ್ಯವಸ್ಥೆ ಕೈಗೊಂಡಿಲ್ಲ.

ಮತ್ತೆ ಗೂಡಂಗಡಿ
ಅಧಿಕಾರಿಗಳ ಭರವಸೆ ನಂಬಿಕೊಂಡು ಒಂದಿಷ್ಟು ದಿನಗಳನ್ನು ಕಳೆದರೂ ಯಾವುದೇ ಪರ್ಯಾಯ ವ್ಯವಸ್ಥೆ ಮಾಡದಿರುವುದರಿಂದ ಕೆಲವು ವ್ಯಾಪಾರಿಗಳು ಕಡಲ ತೀರದ ಪೂರ್ವ ಬದಿಯಲ್ಲಿ ಸರಳವಾದ ರೀತಿಯಲ್ಲಿ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದಾರೆ.

Advertisement

ಮತ್ತೆ ಆತಂಕ
ರಾ.ಹೆದ್ದಾರಿ 66ರ ಕಡಲ ತೀರದ ರಸ್ತೆಯ ಉದ್ದಕ್ಕೂ ಬೇಲಿ ನಿರ್ಮಿಸುತ್ತಾರೆ ಎನ್ನುವ ಮಾತುಗಳು ಹರಿದಾಡುತ್ತಿರುವುದು ವ್ಯಾಪಾರಸ್ಥರಲ್ಲಿ ಮತ್ತೆ ಆತಂಕ ಶುರುವಾಗಿದೆ. ಪರ್ಯಾಯ ವ್ಯವಸ್ಥೆ ಮಾಡದೆ ಮತ್ತೆ ತೆರವುಗೊಳಿಸಿದರೆ ಬದುಕು ಸಂಕಷ್ಟಕ್ಕೆ ಸಿಲುಕುತ್ತದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಗೂಡಂಗಡಿ ವ್ಯಾಪಾರಿ ಶೈಲೇಶ ಅವರು.

ಪರ್ಯಾಯ ವ್ಯವಸ್ಥೆ ಮಾಡದೆ ತೆರವು ಬೇಡ
20 ವರ್ಷಗಳಿಂದ ಕುಟುಂಬದವರ ಹೊಟ್ಟೆಪಾಡಿಗಾಗಿ ಅಂಗಡಿ ಇಟ್ಟುಕೊಂಡು ವ್ಯಾಪಾರ ನಡೆಸಿಕೊಂಡು ಬರುತ್ತಿದ್ದೇನೆ. ಅಧಿಕಾರಿಗಳು ಕಾಮಗಾರಿ ಪೂರ್ಣಗೊಂಡ ಬಳಿಕ ಪರ್ಯಾಯ ವ್ಯವಸ್ಥೆ ಮಾಡಿಕೊಡುತ್ತೇವೆ ಎನ್ನುತ್ತಾರೆ. ಅಲ್ಲಿಯ ವರೆಗೆ ಜೀವನ ನಡೆಯಲು ರಸ್ತೆಯ ಇನ್ನೊಂದು ಬಂದಿಯಲ್ಲಿ ಅಂಗಡಿಗಳನ್ನು ಇಟ್ಟುಕೊಂಡಿದ್ದೇವೆ. ಪರ್ಯಾಯ ವ್ಯವಸ್ಥೆ ಮಾಡದೆ ತೆರವುಗೊಳಿಸಲು ಮುಂದಾಗಬೇಡಿ.
ವಾಸು ಪೂಜಾರಿ, ವ್ಯಾಪಾರಿ

ಚರ್ಚಿಸಿ ಕ್ರಮ
ನಾನು ಇತ್ತೀಚೆಗೆ ಇಲ್ಲಿ ವರ್ಗಾವಣೆಗೊಂಡು ಬಂದಿದ್ದೆ. ಈ ಕುರಿತು ದಾಖಲೆ ಪರಿಶೀಲಿಸುತ್ತೇನೆ. ಬಳಿಕ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ.
ವೀರೇಂದ್ರ ಬಾಡ್ಕರ್‌, ತಹಶೀಲ್ದಾರ್‌, ಕುಂದಾಪುರ

ಕೃಷ್ಣ ಬಿಜೂರು

Advertisement

Udayavani is now on Telegram. Click here to join our channel and stay updated with the latest news.

Next