ತುತ್ತು ಕೊಡೋದಾದ್ರೂ, ಚಿತೆಗೆ ಬೆಂಕಿ ಇಡೋದಾದ್ರೂ ಮನಸ್ಸಿನಿಂದ ಮಾಡಬೇಕು… – “ಪೆಟ್ರೋಮ್ಯಾಕ್ಸ್’ ಚಿತ್ರದಲ್ಲಿ ಹೀಗೊಂದು ಡೈಲಾಗ್ ಬರುತ್ತದೆ. ಹಾಗಂತ ಇದೊಂದೇ ಡೈಲಾಗ್ ಅಲ್ಲ, ಎದೆಗೆ ನಾಟುವ ಈ ತರಹದ ಸಿಕ್ಕಾಪಟ್ಟೆ ಸಂಭಾಷಣೆಗಳಿವೆ.
ಟ್ರೇಲರ್‌ನಲ್ಲಿ ಡಬಲ್ ಮೀನಿಂಗ್ ಡೈಲಾಗ್ ಮೂಲಕ ಪ್ರೇಕ್ಷಕರಿಗೆ ಆಹ್ವಾನ ಕೊಟ್ಟಿದ್ದ “ಪೆಟ್ರೋಮ್ಸಾಕ್ಸ್’ ಚಿತ್ರದೊಳಗೆ ಹೋದರೆ ನಿಮಗೆ ಅಲ್ಲಿ ಒಂದಷ್ಟು ವಿಭಿನ್ನ ಅಂಶಗಳು ಕಾಣಸಿಗುತ್ತವೆ. ಆ ಮಟ್ಟಿಗೆ ನಿರ್ದೇಶಕ ವಿಜಯಪ್ರಸಾದ್ ಒಂದು ಗಂಭೀರ ಕಥೆಯನ್ನು ಆಯ್ಕೆ ಮಾಡಿಕೊಂಡು, ಅದನ್ನು ನೀಟಾಗಿ ಕಟ್ಟಿಕೊಟ್ಟಿದ್ದಾರೆ.
ಡಬಲ್ ಮೀನಿಂಗ್ ಬಿಟ್ಟು ವಿಜಯ ಪ್ರಸಾದ್ ಅದನ್ನು ಪ್ರೇಕ್ಷಕ ಊಹಿಸಿಕೊಳ್ಳೋದು ಕಷ್ಟ ಎಂದು ಅವರಿಗೆ ಚೆನ್ನಾಗಿ ಗೊತ್ತಿದ್ದಂತಿದೆ. ಹಾಗಾಗಿಯೇ ಗಂಭೀರ ಕಥೆಯನ್ನು ಡಬಲ್ ಮೀನಿಂಗ್ ಸಂಭಾಷಣೆ, ಚೇಷ್ಟೇ ಮೂಲಕವೇ ಕಟ್ಟಿಕೊಟ್ಟಿದ್ದಾರೆ. ವಿಜಯ ಪ್ರಸಾದ್ ಭಾಷೆಯಲ್ಲಿ ಹೇಳುವುದಾದರೆ ಇದು “ಚೇಷ್ಟೆ’ಯ ಸಿನಿಮಾ. ಕೆಲವು ಕಡೆ ಚೇಷ್ಟೇ ಅತಿಯಾಯಿತು ಎನಿಸುತ್ತಿದ್ದಂತೆ, ಜೀವನ, ಅನಾಥರ ಸುತ್ತ ತುಂಬಾ ಗಂಭೀರವಾದ ಅಂಶಗಳನ್ನು ತರುವ ಮೂಲಕ ಬ್ಯಾಲೆನ್ಸ್ ಮಾಡಲು ಪ್ರಯತ್ನಿಸಿದ್ದಾರೆ. ಆ ಮಟ್ಟಿಗೆ ಇದು “ಡಬಲ್-ಸಿಂಗಲ್’ ಸಮಾನ ಸಿನಿಮಾ.
ಮೊದಲೇ ಹೇಳಿದಂತೆ ವಿಜಯಪ್ರಸಾದ್ ಒಂದು ಗಟ್ಟಿಕಥೆಯನ್ನು ಆಯ್ಕೆ ಮಾಡಿ ಕೊಂಡಿದ್ದಾರೆ. ನಾಲ್ವರು ಅನಾಥರ ಕಥೆಯನ್ನು ಆಯ್ಕೆ ಮಾಡಿಕೊಂಡು, ಅದಕ್ಕೊಂದಿಷ್ಟು ಉಪಕಥೆಗಳನ್ನು ಸೇರಿಸಿ ಇಡೀ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಕಥೆಯ ಒನ್‌ಲೈನ್ ತೀರಾ ಹೊಸದೆನಿಸದೇ ಹೋದರೂ, ವಿಜಯ ಪ್ರಸಾದ್ ಅದನ್ನು ತಮ್ಮದೇ ಶೈಲಿಯಲ್ಲಿ ನಿರೂಪಿಸಿ, ಪ್ರೇಕ್ಷಕನನ್ನು ಒಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಕೂಡಾ.
ಮೊದಲರ್ಧ ನಾಲ್ವರ ಇಂಟ್ರೋಡಕ್ಷನ್, ಚೇಷ್ಟೆಯಲ್ಲಿ ಸಿನಿಮಾ ಮುಗಿದು ಹೋದರೆ, ದ್ವಿತೀಯಾರ್ಧ ದಲ್ಲಿ ಸಿನಿಮಾ ಮತ್ತಷ್ಟು ಗಂಭೀರವಾಗಿ ಸಾಗುತ್ತದೆ. ನಿಜವಾಗಿಯೂ ಅನಾಥರೆಂದರೆ ಯಾರು ಎಂಬ ಅಂಶದ ಜೊತೆಗೆ ಸಿನಿಮಾದಲ್ಲಿ ಒಂದಷ್ಟು ಚಿಂತಿಸುವ ವಿಚಾರಗಳನ್ನು ಹೇಳಿದ್ದಾರೆ. ನೀವಿದನ್ನು “ಬೋಧನೆ’ ಎಂದುಕೊಳ್ಳಲು ಅಡ್ಡಿಯಿಲ್ಲ. ಈ ಸಿನಿಮಾದ ಮತ್ತೂಂದು ವಿಚಾರವೆಂದರೆ ಇಲ್ಲಿನ ಪ್ರತಿ ಪಾತ್ರವೂ ಬೋಧನೆಯನ್ನೂ ಮಾಡುತ್ತವೆ, ಜೊತೆಗೆ ಡಬಲ್ ಮೀನಿಂಗ್ ಅದನ್ನು “ನಿರರ್ಗಳ’ವಾಗಿ ಹೇಳುತ್ತವೆ. ಕೆಲವೊಮ್ಮೆ ಸಿನಿಮಾ ಒಂದೇ ಅಂಶದ ಹಿಂದೆ ಸುತ್ತಿದಂತೆ ಅನಿಸಿದರೂ ವಿಜಯ ಪ್ರಸಾದ್ ಅವರ ಪಂಚ್ ಅದನ್ನು ಮರೆಸಿ, ಸಿನಿಮಾವನ್ನು ಮತ್ತೆ ಟ್ರ್ಯಾಕ್‌ಗೆ ತರುತ್ತದೆ.
ಚಿತ್ರದ ಬಹುತೇಕ ಪಾತ್ರಗಳ ಬಾಯಲ್ಲಿ ಬರುವ ಸಂಭಾಷಣೆಯನ್ನು ಕೇಳಿದಾಗ, ವಿಜಯ ಪ್ರಸಾದ್ “ಅರಮನೆ’ ಪ್ರವೇಶಿಸುವವರ ಬಾಯಲ್ಲಿ ಡಬಲ್ ಮೀನಿಂಗ್ ಸಂಭಾಷಣೆ ಕಡ್ಡಾಯ ಎಂಬ ನಿಯಮ ರೂಪಿಸಿದಂತೆ ಕಾಣುತ್ತದೆ. ಯಾರ್ಯಾರ ಬಾಯಲ್ಲೇ “ಏನೇನು ಸಂಭಾಷಣೆ ಹೇಳಿಸಬೇಕೋ’ ಅವೆಲ್ಲವನ್ನು ವಿಜಯ ಪ್ರಸಾದ್ “ಯಶಸ್ವಿ’ಯಾಗಿ ಹೇಳಿಸಿದ್ದಾರೆ. ಜೊತೆಗೆ ಅಷ್ಟೇ ಅದ್ಭುತವಾದ, ಅರ್ಥಪೂರ್ಣವಾದ ಸಂಭಾಷಣೆಗಳು ಚಿತ್ರದಲ್ಲಿರುವುದು “ಪೆಟ್ರೋಮ್ಯಾಕ್ಸ್’ ಹೈಲೈಟ್‌ಗಳಲ್ಲಿ ಒಂದು.
ನಾಯಕ ಸತೀಶ್, ನಾಗಭೂಷಣ್, ಅರುಣ್, ಕಾರುಣ್ಯ ರಾಮ್, ಹರಿ ಪ್ರಿಯಾ ತಮಗೆ ಸಿಕ್ಕಿರುವ ಪಾತ್ರಗಳಲ್ಲಿ ತುಂಬಾ ನೈಜವಾಗಿ ಕಾಣಿಸಿಕೊಂಡಿದ್ದಾರೆ. ಇವರೆಲ್ಲರ ಪಾತ್ರದ ತುಂಬಾ “ಚೇಷ್ಟೇ’ ತುಂಬಿ ತುಳುಕುತ್ತಿದೆ. ಉಳಿದಂತೆ ವಿಜಯಲಕ್ಷ್ಮೀ ಸಿಂಗ್ ಅವರ ಪಾತ್ರ ಸಿನಿಮಾದ ಹೈಲೈಟ್. ಉಳಿದಂತೆ ಅನೇಕ ಪಾತ್ರಗಳು ಬಂದು ಹೋಗುತ್ತವೆ.
ರವಿಪ್ರಕಾಶ್ ರೈ