ಬೆಂಗಳೂರು: ರಾಜ್ಯದಲ್ಲಿ ಡೀಸೆಲ್ ಮೇಲಿನ ತೆರಿಗೆಯನ್ನು ಕಡಿತಗೊಳಿಸಬೇಕು ಎಂದು ಒತ್ತಾಯಿಸಿ ರಾಜ್ಯ ಪೆಟ್ರೋಲಿಯಂ ವರ್ತಕರ ಮಹಾಮಂಡಳ ಶನಿವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿತು.
ನಗರದ ಡಾಲರ್ ಕಾಲೋನಿಯಲ್ಲಿರುವ ಮುಖ್ಯಮಂತ್ರಿಗಳ ನಿವಾಸ “ಧವಳಗಿರಿ’ಯಲ್ಲಿ ಮಹಾಮಂಡಳದ ಅಧ್ಯಕ್ಷ ಎಚ್.ಎಸ್. ಮಂಜಪ್ಪ ನೇತೃತ್ವದಲ್ಲಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ನಿಯೋಗ, ಮುಂಬರುವ ಬಜೆಟ್‌ನಲ್ಲಿ ಡೀಸೆಲ್ ಮೇಲಿನ ತೆರಿಗೆಯನ್ನು ಶೇ. 21ರಿಂದ ಕನಿಷ್ಠ ಶೇ. 18ಕ್ಕೆ ತಗ್ಗಿಸಬೇಕು ಎಂದು ಮನವಿ ಮಾಡಿತು.
ಕಳೆದ ವರ್ಷ ಬಜೆಟ್‌ನಲ್ಲಿ ಡೀಸೆಲ್ ಮೇಲಿನ ತೆರಿಗೆಯನ್ನು ಶೇ. 2 ಹೆಚ್ಚಳ ಮಾಡಲಾಯಿತು. ಪರಿಣಾಮ ಗಡಿಭಾಗದ ಪೆಟ್ರೋಲ್ ಬಂಕ್‌ಗಳಲ್ಲಿ ಏಕಾಏಕಿ ಖರೀದಿ ವಹಿವಾಟು ಕುಸಿತ ಕಂಡಿದ್ದು, ಮಹಾರಾಷ್ಟ್ರ ಗಡಿಯಲ್ಲಿನ ಊರುಗಳು ಹಾಗೂ ಅಂತಾರಾಜ್ಯ ಸಾರಿಗೆ ವಾಹನಗಳು ವಿಮುಖವಾಗಿವೆ. ಇದರಿಂದ ವರ್ತಕರಿಗೆ ವ್ಯಾಪಾರ-ವಹಿವಾಟಿನಲ್ಲಿ ಶೇ. 40 ಇಳಿಕೆ ಆಗಿದೆ ಎಂದು ಮಹಾಮಂಡಳದ ಸದಸ್ಯರು ಅಲವತ್ತುಕೊಂಡರು.
ಬೀದರ್, ಬಾಗಲಕೋಟೆ, ಬೆಳಗಾವಿ, ವಿಜಯಪುರ ಸೇರಿದಂತೆ ಮಹಾರಾಷ್ಟ್ರ ಗಡಿ ಭಾಗದ ಪ್ರದೇಶಗಳಲ್ಲಿ ಸುಮಾರು 600ರಿಂದ 800 ಬಂಕ್‌ಗಳಿವೆ. ಅಲ್ಲಿಂದ ಕೇವಲ 5-10 ಕಿ.ಮೀ. ಅಂತರದಲ್ಲಿ ನೆರೆಯ ರಾಜ್ಯ ಇದೆ. ರಾಜ್ಯಕ್ಕೆ ಹೋಲಿಸಿದರೆ, ಆ ರಾಜ್ಯದಲ್ಲಿ ಡೀಸೆಲ್ ದರ ಪ್ರತಿ ಲೀ.ಗೆ 1ರಿಂದ 1.50 ರೂ. ಕಡಿಮೆ ಇದೆ. ಹಾಗಾಗಿ, ವಾಹನಗಳೆಲ್ಲ ಅತ್ತ ಮುಖಮಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಒಂದು ವೇಳೆ ವ್ಯಾಟ್ ಅನ್ನು ಶೇ. 3 ಕಡಿಮೆ ಮಾಡಿದರೆ, ಸರ್ಕಾರಕ್ಕೆ 650 ಕೋಟಿ ರೂ. ಆದಾಯ ಖೋತಾ ಆಗಬಹುದು. ಆದರೆ, ಇದರ ಬೆನ್ನಲ್ಲೇ ಡೀಸೆಲ್ ಖರೀದಿ ವಹಿವಾಟು ಹೆಚ್ಚಾಗಲಿದ್ದು, ಇದರಿಂದ ಸಾವಿರ ಕೋಟಿ ರೂ. ಆದಾಯ ಬರಲಿದೆ. ಅಂದರೆ ಹೆಚ್ಚು-ಕಡಿಮೆ 350 ಕೋಟಿ ರೂ. ಹೆಚ್ಚುವರಿಯಾಗಿ ಹರಿದುಬರಲಿದೆ ಎಂದು ಮನವೊಲಿಸುವ ಪ್ರಯತ್ನ ಮಾಡಲಾಯಿತು ಎಂದು ಎಚ್.ಎಸ್. ಮಂಜಪ್ಪ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು ಎನ್ನಲಾಗಿದೆ.