Advertisement

ಸೊಸೈಟಿಗಳಲ್ಲೂ ಸಿಗಲಿದೆ ಪೆಟ್ರೋಲ್‌? ಸದ್ಯ ಇರುವ ನಿಯಮ ಬದಲಿಸಲು ಕೇಂದ್ರದ ಚಿಂತನೆ

09:31 AM Jul 05, 2022 | Team Udayavani |

ನವದೆಹಲಿ: ಪ್ರಾಥಮಿಕ ಕೃಷಿ ಸಹಕಾರ ಸೊಸೈಟಿಗಳು (ಪಿಎಸಿಎಸ್‌) ಕೂಡ ತೈಲೋತ್ಪನ್ನಗಳ ಮಾರಾಟ, ಪಡಿತರ ಉತ್ಪನ್ನಗಳ ವಿತರಣೆ, ಆಸ್ಪತ್ರೆಗಳ ಸ್ಥಾಪನೆ, ಶಿಕ್ಷಣ ಸಂಸ್ಥೆಗಳನ್ನು ಅಭಿವೃದ್ಧಿಪಡಿಸಿದರೆ ಹೇಗಿರಲಿದೆ? ಸದ್ಯ ಅವುಗಳು ನಡೆಸುತ್ತಿರುವ ಕೃಷಿ ಚಟುವಟಿಕೆಗಳಿಗೆ ಸಾಲ ಮತ್ತು ಇತರ ಹಣಕಾಸು ಚಟುವಟಿಕೆಗಳ ಜತೆಗೆ ಅವುಗಳ ಕಾರ್ಯಕ್ಷೇತ್ರ ವಿಸ್ತರಣೆಗೆ ಅವಕಾಶ ಕೊಡಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.

Advertisement

ಈ ಹಿನ್ನೆಲೆಯಲ್ಲಿ ಕೇಂದ್ರ ಸಹಕಾರ ಸಚಿವಾಲಯ ಮಾದರಿ ಬೈ-ಲಾ ಅನ್ನು ಬಿಡುಗಡೆ ಮಾಡಿದೆ ಮತ್ತು ಅದರ ಬಗ್ಗೆ ರಾಜ್ಯ ಸರ್ಕಾರಗಳು ಮತ್ತು ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿದೆ. ಜು.19ರ ಒಳಗಾಗಿ ಅವುಗಳನ್ನು ಸಲ್ಲಿಕೆ ಮಾಡುವಂತೆಯೂ ಸಲಹೆ ಮಾಡಲಾಗಿದೆ.

100ನೇ ಅಂತಾರಾಷ್ಟ್ರೀಯ ಸಹಕಾರ ದಿನ ಪ್ರಯುಕ್ತ ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಹಕಾರ ಸಚಿವ ಅಮಿತ್‌ ಶಾ ಈ ವಿವರಗಳನ್ನು ನೀಡಿದ್ದಾರೆ.

ಮುಂದಿನ ದಿನಗಳಲ್ಲಿ ಕೃಷಿ ಸಹಕಾರ ಸೊಸೈಟಿಗಳು ಬ್ಯಾಂಕ್‌ ಮಿತ್ರ ಮತ್ತು ಸಾಮಾನ್ಯ ಸೇವಾ ಕೇಂದ್ರದಂತೆಯೂ ಕೆಲಸ ಮಾಡುವಂತೆಯೂ ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ. ಸದಸ್ಯರಿಗೆ ಕೃಷಿ ಚಟುವಟಿಕೆಗಳಿಗೆ, ಶಿಕ್ಷಣ, ಆರೋಗ್ಯ, ಪ್ರವಾಸೋದ್ಯಮ ಮತ್ತು ಪರಿಸರ ಸಹ್ಯ ಚಟುವಟಿಕೆಗಳನ್ನು ಕೈಗೊಳ್ಳಲು ಅಲ್ಪಾವಧಿ ಮತ್ತು ಮಧ್ಯಮ ರೀತಿಯ ಸಾಲ ವ್ಯವಸ್ಥೆ ನೀಡುವ ಉದ್ದೇಶವೂ ಕೇಂದ್ರ ಸರ್ಕಾರಕ್ಕೆ ಇದೆ.

ಅಡುಗೆ ಅನಿಲ ಸಿಲಿಂಡರ್‌, ಪೆಟ್ರೋಲ್‌, ಡೀಸೆಲ್‌, ಹಸಿರು ಇಂಧನ, ಗೃಹ ಬಳಕೆ ವಸ್ತುಗಳು, ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಯಂತ್ರೋಪಕರಣಗಳು, ಅವುಗಳ ಬಳಕೆಯ ಬಗ್ಗೆ ತರಬೇತಿ ನೀಡಲು ಅವಕಾಶ ನೀಡುವ ಬಗ್ಗೆಯೂ ಅವಕಾಶ ಕಲ್ಪಿಸಿ ಕೊಡುವ ಉದ್ದೇಶ ಕೇಂದ್ರ ಸರ್ಕಾರಕ್ಕೆ ಇದೆ. ಇದರಿಂದಾಗಿ ಕೃಷಿ ಸಹಕಾರ ಸೊಸೈಟಿಗಳನ್ನು ವಿತ್ತೀಯವಾಗಿ ಸದೃಢಗೊಳಿಸಲು ಸಾಧ್ಯವಾಗಲಿದೆ ಎಂದು ಕೇಂದ್ರ ಸಹಕಾರ ಸಚಿವ ಅಮಿತ್‌ ಶಾ ಹೇಳಿದ್ದಾರೆ.

Advertisement

ಇದಲ್ಲದೆ ಪಿಎಸಿಎಸ್‌ಗಳನ್ನು ಕಂಪ್ಯೂಟರೀಕೃತಗೊಳಿಸುವ ಯೋಜನೆಯೂ ನೆರವಾಗಲಿದೆ ಎಂದು ಅಮಿತ್‌ ಶಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next