Advertisement

ಪೆಟ್ರೋಲ್‌, ಡೀಸೆಲ್‌ ದುಬಾರಿ: ವಾಹನ ಮಾಲಕರು ಕಂಗಾಲು

05:00 AM May 26, 2018 | Karthik A |

ಮಹಾನಗರ: ಪೆಟ್ರೋಲ್‌, ಡೀಸೆಲ್‌ ಬೆಲೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಇದರಿಂದಾಗಿ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೇ 18ರಂದು 76.26 ರೂ. ಇದ್ದ ಪೆಟ್ರೋಲ್‌ ಬೆಲೆ ಮೇ 25ಕ್ಕೆ 78.48 ರೂ. ಆಗಿದೆ. ಒಟ್ಟಾರೆ ಒಂದೇ ವಾರದಲ್ಲಿ 2.22 ರೂ. ಹೆಚ್ಚಳವಾದಂತಾಗಿದೆ. ಅದೇ ರೀತಿ ಮೇ 18 ರಂದು 67.64 ರೂ. ಇದ್ದ ಡೀಸೆಲ್‌ ಬೆಲೆ ಮೇ 25ಕ್ಕೆ 69.38 ರೂ. ಆಗಿದೆ. ಅಂದರೆ ಒಂದೇ ವಾರ 1.74 ರೂ. ಏರಿಕೆಯಾಗಿದೆ.

Advertisement

ಡೀಸೆಲ್‌ ಬಳಕೆ ಜಾಸ್ತಿ
ದ.ಕ. ಜಿಲ್ಲೆಯಲ್ಲಿ ಪ್ರತೀ ದಿನ ಪೆಟ್ರೋಲ್‌ ಗಿಂತ ಡೀಸೆಲ್‌ ಬಳಕೆಯೇ ಹೆಚ್ಚು. ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಶನ್‌ ನಿಂದ ಜಿಲ್ಲೆಯಲ್ಲಿ 62 ಸಾವಿರ ಕಿಲೋ ಲೀಟರ್‌ ಪೆಟ್ರೋಲ್‌ ಮತ್ತು 153 ಸಾವಿರ ಕಿಲೋ ಲೀಟರ್‌ ಡೀಸೆಲ್‌ ಪ್ರತೀ ದಿನ ಮಾರಾಟವಾಗುತ್ತದೆ. ಅದರಂತೆಯೇ ಇಂಡಿಯನ್‌ ಆಯಿಲ್‌ ಸಂಸ್ಥೆಯಿಂದ ಪ್ರತೀದಿನ ಜಿಲ್ಲೆಯಲ್ಲಿ 190 ಸಾವಿರ ಕಿಲೋ ಲೀಟರ್‌ ಪೆಟ್ರೋಲ್‌ ಮತ್ತು 550 ಸಾವಿರ ಕಿ.ಲೀ. ಡೀಸೆಲ್‌ ಪ್ರತೀ ದಿನ ಮಾರಾಟವಾಗುತ್ತದೆ. 

ಜಿಲ್ಲೆಯಲ್ಲಿ ಪ್ರತೀದಿನ ಬಳಕೆ
– ಪೆಟ್ರೋಲ್‌: 252 ಸಾವಿರ ಕಿಲೋ ಲೀಟರ್‌
– ಡಿಸೇಲ್‌: 703 ಸಾವಿರ ಕಿಲೋ ಲೀಟರ್‌ 


ವಾಹನ ಬಳಕೆದಾರರಿಗೆ ಪರ್ಯಾಯ ವ್ಯವಸ್ಥೆ

– ಸಾರ್ವಜನಿಕ ವಾಹನಗಳನ್ನು ಜಾಸ್ತಿ ಬಳಸಿ
– ಹತ್ತಿರದ ಪ್ರದೇಶಕ್ಕೆ ತೆರಳಲು ಸೈಕಲ್‌ ರೈಡಿಂಗ್‌ ಉತ್ತಮ
– ವಾಹನಗಳ ಬಳಕೆಯಲ್ಲಿ ಮಿತಿ ಇರಲಿ
– ಟ್ರಾಫಿಕ್‌ ನಲ್ಲಿ ವಾಹನ ಬಂದ್‌ ಮಾಡಿ ಇಂಧನ ಉಳಿಸಿ
– ಕಡಿಮೆ ಅಂತರ ಕ್ರಮಿಸಲು ಎಲೆಕ್ಟ್ರಿಕ್‌ ವಾಹನಗಳ ಬಳಕೆ ಉತ್ತಮ
– ವಾಹನಗಳ ಇಂಜಿನ್‌ ಸುಸ್ಥಿತಿಯಲ್ಲಿಟ್ಟು ಮೈಲೇಜ್‌ ಹೆಚ್ಚಿಸಿಕೊಳ್ಳಿ
– ಓಲಾ, ಉಬರ್‌ ನಂತಹ ಶೇರಿಂಗ್‌ ವಾಹನಗಳನ್ನು ಬಳಸಿ
– ಒಂದೇ ಕಡೆ ಕಚೇರಿಗೆ ಹೋಗುವರು ಕಾರ್‌ ಪೂಲಿಂಗ್‌ ವ್ಯವಸ್ಥೆ ಪ್ರಾರಂಭಿಸಿ

80 ರೂ. ಸಾಧ್ಯತೆ
ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಈಗಾಗಲೇ ಕೆಲವೊಂದು ನಗರಗಳಲ್ಲಿ ಪೆಟ್ರೋಲ್‌ ಬೆಲೆ 80 ರೂ. ತಲುಪಿದೆ. ಮುಂದಿನ ಕೆಲ ದಿನಗಳಲ್ಲಿ ಜಿಲ್ಲೆಯಲ್ಲಿಯೂ ಈ ದರ ತಲುಪಿದರೆ ಅಚ್ಚರಿಯಿಲ್ಲ. ಕಚ್ಚಾತೈಲ ಮತ್ತು ಡಾಲರ್‌ ಬೆಲೆ ಹೆಚ್ಚಳವಾಗುತ್ತಿರುವುದೇ ಇದಕ್ಕೆ ಕಾರಣ.
– ಸತೀಶ್‌ ಎನ್‌. ಕಾಮತ್‌, ಅಧ್ಯಕ್ಷ, ದ.ಕ. ಉಡುಪಿ ಪೆಟ್ರೋಲ್‌ ಡೀಸೆಲ್‌ ಅಸೋಸಿಯೇಶನ್‌

Advertisement

ಸವಾರರಿಗೆ ಪೆಟ್ಟು
ಇಂದು ಇದ್ದ ಪೆಟ್ರೋಲ್‌, ಡೀಸೆಲ್‌ ಬೆಲೆ ನಾಳೆಯಿಲ್ಲ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ನೇರ ಪರಿಣಾಮ ವಾಹನ ಸವಾರರ ಮೇಲೆ ಆಗುತ್ತಿದ್ದು, ವಾಹನ ಬಳಕೆ ಪ್ರಮಾಣವನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು.
– ಕಾರ್ತಿಕ್‌ ಕುಮಾರ್‌, ಉದ್ಯೋಗಿ

— ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next