ನವದೆಹಲಿ: ಕೃಷಿ ವಲಯದಿಂದ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಕಳೆದ ವರ್ಷದ ನವೆಂಬರ್‌ಗೆ ಹೋಲಿಸಿದರೆ ಈ ವರ್ಷದ ನವೆಂಬರ್‌ನಲ್ಲಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬಳಕೆ ಹೆಚ್ಚಾಗಿದೆ.
ಕಳೆದ ವರ್ಷ ನವೆಂಬರ್‌ಗೆ ಹೋಲಿಸಿದರೆ ಈ ವರ್ಷದ ನವೆಂಬರ್‌ನಲ್ಲಿ ಪೆಟ್ರೋಲ್ ಮಾರಾಟ ಶೇ.11.7ರಷ್ಟು ಏರಿಕೆಯಾಗಿದೆ. ಕಳೆದ ತಿಂಗಳು 2.66 ಮಿಲಿಯನ್ ಟನ್ ಪೆಟ್ರೋಲ್ ಮಾರಾಟವಾಗಿದೆ. ಕಳೆದ ವರ್ಷದ ನವೆಂಬರ್‌ನಲ್ಲಿ 2.38 ಮಿಲಿಯನ್ ಟನ್ ಪೆಟ್ರೋಲ್ ಮಾರಾಟವಾಗಿತ್ತು.
ಅಲ್ಲದೇ 2020ರ ನವೆಂಬರ್‌ನಲ್ಲಿ ಪೆಟ್ರೋಲ್ ಮಾರಾಟ ಶೇ.10.7ರಷ್ಟು ಏರಿಕೆಯಾಗಿತ್ತು. ಅದಕ್ಕೂ ಮುನ್ನ 2019ರ ನವೆಂಬರ್‌ನಲ್ಲಿ ಶೇ. 16.2ರಷ್ಟು ಏರಿಕೆಯಾಗಿತ್ತು. ಇನ್ನೊಂದೆಡೆ, 2022ರ ಅಕ್ಟೋಬರ್‌ಗೆ ಹೋಲಿಸಿದರೆ ನವೆಂಬರ್‌ನಲ್ಲಿ ಶೇ. 1.1ರಷ್ಟು ಏರಿಕೆಯಾಗಿದೆ.
ಇದೇ ರೀತಿ ಕಳೆದ ವರ್ಷ ನವೆಂಬರ್‌ಗೆ ಹೋಲಿಸಿದರೆ ಈ ವರ್ಷದ ನವೆಂಬರ್‌ನಲ್ಲಿ ಡೀಸೆಲ್ ಮಾರಾಟ ಶೇ.27.6ರಷ್ಟು ಏರಿಕೆಯಾಗಿದೆ. ಕಳೆದ ತಿಂಗಳು 7.32 ಮಿಲಿಯನ್ ಟನ್ ಡೀಸೆಲ್ ಮಾರಾಟವಾಗಿದೆ.
ಎಟಿಎಫ್ ದರ ಇಳಿಕೆ:
ಇದೇ ವೇಳೆ ವೈಮಾನಿಕ ಇಂಧನ(ಎಟಿಎಫ್) ದರ ಶೇ.2.3ರಷ್ಟು ಇಳಿಕೆಯಾಗಿದೆ. ಈ ಮೂಲಕ ಒಂದು ಕಿ.ಲೀ. ಎಟಿಎಫ್ಗೆ 2,775 ರೂ. ಕಡಿಮೆಯಾಗಿದೆ. ಆದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಯಥಾಸ್ಥಿತಿಯಲ್ಲಿ ಮುಂದುವರಿದಿದೆ.