Advertisement

ತೈಲ ಬೆಲೆ ನಿತ್ಯ ಬದಲಾವಣೆ; ಗ್ರಾಹಕನಿಗೆ ತುಸು ನೆಮ್ಮದಿ

10:41 AM Jun 17, 2017 | Team Udayavani |

ಪ್ರತಿನಿತ್ಯ ಪೆಟ್ರೋಲು ಮತ್ತು ಡೀಸಿಲ್‌ ಬೆಲೆ ಪರಿಷ್ಕರಿಸುವ ಪದ್ಧತಿ ಶುಕ್ರವಾರದಿಂದ ದೇಶಾದ್ಯಂತ ಜಾರಿಗೆ ಬಂದಿದೆ. 2010ರಲ್ಲಿ ಪೆಟ್ರೋಲು ಮತ್ತು 2014ರಲ್ಲಿ ಡೀಸಿಲ್‌ ಇಂಧನಗಳ ಬೆಲೆಯನ್ನು ನಿಯಂತ್ರಣ ಮುಕ್ತಗೊಳಿಸಿದ ಬಳಿಕ ಆಗಿರುವ ಬಹಳ ದೊಡ್ಡ ಬದಲಾವಣೆಯಿದು. ಸರಕಾರಿ ನಿಯಂತ್ರಣದಲ್ಲಿದ್ದ ಪೆಟ್ರೋಲು ಮತ್ತು ಡೀಸಿಲ್‌ ಬೆಲೆ ನಿರ್ಧರಿಸುವ ಅಧಿಕಾರವನ್ನು ಆಯಾಯ ಕಂಪೆನಿಗಳಿಗೆ ವರ್ಗಾಯಿಸಿದ ಅಂದಿನ ಯುಪಿಎ ಕ್ರಮವೂ ಬಹಳ ಕ್ರಾಂತಿಕಾರಕವಾಗಿತ್ತು. ಅನಂತರ 15 ದಿನಗಳಿಗೊಮ್ಮೆ ದರ ಪರಿಷ್ಕರಿಸುವ ಪದ್ಧತಿ ಜಾರಿಗೆ ಬಂತು.

Advertisement

ಆರಂಭದಲ್ಲಿ ಈ ಬದಲಾವಣೆಗಳಿಗೆ ಭಾರೀ ವಿರೋಧ ವ್ಯಕ್ತವಾದರೂ ಕ್ರಮೇಣ ಜನರು ಈ ವ್ಯವಸ್ಥೆಗೆ ಒಗ್ಗಿಕೊಂಡರು. ಈಗ ನಿತ್ಯ ದರ ಪರಿಷ್ಕರಿಸುವ ವಿಚಾರದಲ್ಲೂ ಇದೇ ಪುನರಾವರ್ತನೆಯಾಗುತ್ತಿದೆ. ಪೆಟ್ರೋಲು  ಪಂಪ್‌ಗ್ಳ ಮಾಲಕರು ಹಲವು ಕಾರಣಗಳನ್ನೊಡ್ಡಿ ನಿತ್ಯ ದರ ಪರಿಷ್ಕರಿಸುವ ಪದ್ಧತಿಯನ್ನು ವಿರೋಧಿಸುತ್ತಿದ್ದಾರೆ. ಐದು
ನಗರಗಳಲ್ಲಿ ಮೇ 1ರಿಂದ ಪ್ರಾಯೋಗಿಕವಾಗಿ ಈ ಪದ್ಧತಿಯನ್ನು ಅಳವಡಿಸಿ ನೋಡಲಾಗಿತ್ತು. ಇದು ಯಶಸ್ವಿಯಾಗಿರುವುದರಿಂದ ದೇಶದ ಉಳಿದೆಡೆಯೂ ಯಶಸ್ವಿಯಾಗುವ ವಿಶ್ವಾಸದಿಂದ ಸರಕಾರ ಮುಂದಡಿಯಿಟ್ಟಿದೆ.

ನಿತ್ಯ ತೈಲ ಕಂಪೆನಿಗಳು ಡೀಲರ್‌ಗಳಿಗೆ ಎಸ್‌ಎಂಎಸ್‌ ಮೂಲಕ ಅಂದಿನ ಬೆಲೆಯನ್ನು ಕಳುಹಿಸುತ್ತವೆ. ಪಂಪ್‌ಗ್ಳಲ್ಲಿ ಇದೇ ಬೆಲೆಯನ್ನು ವಸೂಲು ಮಾಡಬೇಕು. ಹೆಚ್ಚು ವಸೂಲು ಮಾಡುವುದು ಪತ್ತೆಯಾದರೆ ಭಾರೀ ದಂಡ
ವಿಧಿಸಲಾಗುವುದು. ಪೆಟ್ರೋಲು ಪಂಪ್‌ಗ್ಳಲ್ಲಿ ನಿತ್ಯವೂ ಎದ್ದುಕಾಣುವಂತೆ ಡೀಸಿಲ್‌ ಮತ್ತು ಪೆಟ್ರೋಲು ಬೆಲೆಯನ್ನು ಪ್ರದರ್ಶಿಸಬೇಕು. ಹಾಗೆಂದು ನಿತ್ಯ ದೊಡ್ಡ ಮೊತ್ತದ ವ್ಯತ್ಯಾಸವೇನೂ ಆಗುವುದಿಲ್ಲ. ಗರಿಷ್ಠವೆಂದರೆ 50
ಪೈಸೆಗಳ ತನಕ ವ್ಯತ್ಯಾಸವಾಗಬಹುದು. ಅಲ್ಲದೆ ಪಂಪ್‌ನಿಂದ ಪಂಪ್‌ ಗೆ ಕೆಲವು ಪೈಸೆಗಳ ವ್ಯತ್ಯಾಸವೂ ಇರಬಹುದು. ಬೇರೆ ಬೇರೆ ಕಂಪೆನಿಗಳ ಬೆಲೆಗಳಲ್ಲಿ ತುಸು ವ್ಯತ್ಯಾಸವಿರುವುದು ಇದಕ್ಕೆ ಕಾರಣ. ಅಂತಾರಾಷ್ಟ್ರೀಯ 
ಕಚ್ಚಾತೈಲ ಬೆಲೆ ಮತ್ತು  ರೂಪಾಯಿ -ಡಾಲರ್‌ ವಿನಿಮಯ ದರವನ್ನು ಹೊಂದಿಕೊಂಡು ಅಂದಂದಿನ ತೈಲ ಬೆಲೆ ನಿರ್ಧಾರವಾಗುತ್ತದೆ.

ಹಿಂದೆಯೂ ತೈಲ ಬೆಲೆ ನಿಗದಿಗೆ ಇದೇ ಆಧಾರವಾಗಿತ್ತು. ಆದರೆ 15 ದಿನಗಳ ಸರಾಸರಿಯ ಮೇಲೆ ಬೆಲೆ ಹೆಚ್ಚು ಕಮ್ಮಿ ಆಗುತ್ತಿತ್ತು. ಆದರೆ ಈಗ ಪ್ರತಿ ದಿನದ ಮಾರುಕಟ್ಟೆ ದರಕ್ಕೆ ತಕ್ಕಂತೆ ಇಳಿಕೆ ಹೆಚ್ಚಳ ಆಗಲಿರುವುದೊಂದೇ
ವ್ಯತ್ಯಾಸ. 15 ದಿನಗಳಿಗೊಮ್ಮೆ ಪರಿಷ್ಕರಣೆಯಾದಾಗ ಗ್ರಾಹಕ ಈ ಅವಧಿಯಲ್ಲಿ ಏರಿಕೆಯಾದ ಬೆಲೆಯನ್ನೂ ತೆರಬೇಕಿತ್ತು. ಹೊಸ ಪದ್ಧತಿಯಲ್ಲಿ ಈ ಅನಗತ್ಯ ಹೊರೆಯಿಲ್ಲ. ಒಂದು ವೇಳೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಭಾರೀ ಪ್ರಮಾಣದಲ್ಲಿ ಕಡಿಮೆಯಾದರೆ ಅದರ ಪೂರ್ಣ ಲಾಭ ಗ್ರಾಹಕನಿಗೆ ಸಿಗಲಿದೆ. ಅಂತೆಯೇ ಡಾಲರ್‌ ಎದುರು ರೂಪಾಯಿ ಚೇತರಿಕೆ ಕಂಡರೂ ಗ್ರಾಹಕನಿಗೆ ತುಸು ಪ್ರಯೋಜನವಾಗುತ್ತದೆ. 

ನಿತ್ಯ ಇಂಧನ ತುಂಬಿಸಿಕೊಳ್ಳುವವರಿಗೆ ಈ ಪದ್ಧತಿಯಲ್ಲಿ ಲಾಭವೂ ಇದೆ, ನಷ್ಟವೂ ಇದೆ. ಪಾಕ್ಷಿಕ ಪರಿಷ್ಕರಣೆ ಪದ್ಧತಿಯಲ್ಲಿ ಮಾರುಕಟ್ಟೆ ಹೊರತಾದ ಕೆಲವು ಕಾರಣಗಳಿಗೆ ಬೆಲೆ ಪರಿಷ್ಕರಣೆಯನ್ನು ಮುಂದೂಡಲಾಗುತ್ತಿತ್ತು.
ಬಹುತೇಕ ಸಂದರ್ಭದಲ್ಲಿ ಚುನಾವಣೆ ಸನ್ನಿಹಿತವಾಗುವಾಗ ಪೆಟ್ರೋಲು ಮತ್ತು ಡೀಸಿಲ್‌ ಬೆಲೆ ಹೆಚ್ಚಾದರೆ ಆಡಳಿತ ಪಕ್ಷಕ್ಕೆ ಮುಜುಗರವಾಗುತ್ತಿತ್ತು.  ಹೀಗಾಗಿ ಪರಿಷ್ಕರಣೆ ಮುಂದಕ್ಕೆ ಹೋಗುತ್ತಿತ್ತು. ನಿತ್ಯ ಪರಿಷ್ಕರಣೆಯಾಗುವ ಪಾರದರ್ಶಕ ವ್ಯವಸ್ಥೆಯಲ್ಲಿ ಪೆಟ್ರೋಲು ಮತ್ತು ಡೀಸಿಲ್‌ ಬೆಲೆಯೊಂದಿಗೆ ರಾಜಕೀಯ ಮಾಡುವ ಅವಕಾಶ ಸರಕಾರಕ್ಕೆ ಇರುವುದಿಲ್ಲ. ನಿಜವಾಗಿ ಪ್ರತಿದಿನ ಮಧ್ಯರಾತ್ರಿ ಬೆಲೆ ಬದಲಾವಣೆಯಾಗಬೇಕಿತ್ತು. ಆದರೆ ಈ ವ್ಯವಸ್ಥೆಗೆ
ಪಂಪ್‌ ಮಾಲಕರು ಭಾರೀ ವಿರೋಧ ವ್ಯಕ್ತಪಡಿಸಿದ ಕಾರಣ ಈಗ ಬೆಳಗ್ಗೆ 6 ಗಂಟೆಗೆ ಬೆಲೆ ನಿಗದಿಯಾಗುತ್ತದೆ. ಮಧ್ಯರಾತ್ರಿ ಬೆಲೆ ಬದಲಾವಣೆಯಾದರೆ ಇದಕ್ಕಾಗಿಯೇ ಪಂಪ್‌ಗ್ಳಲ್ಲಿ ಸಿಬಂದಿಯನ್ನು ಇಡಬೇಕಿತ್ತು. ಈ ಸಮಸ್ಯೆ ಈಗ ಪರಿಹಾರವಾಗಿರುವುದರಿಂದ ಪಂಪ್‌ ಮಾಲಕರು ಹೆಚ್ಚು ತಕರಾರು ಮಾಡುವುದು ಸರಿಯಲ್ಲ.

Advertisement

ಅತ್ಯಧಿಕ ತೈಲ ಆಮದು ಮಾಡಿಕೊಳ್ಳುವ ದೇಶಗಳ ಪೈಕಿ ಭಾರತ ಮೂರನೇ ಸ್ಥಾನದಲ್ಲಿದೆ. ಪಳೆಯುಳಿಕೆ ಇಂಧನ ಬೆಲೆಯೇ ಹಣದುಬ್ಬರ ಹಾಗೂ ಆರ್ಥಿಕತೆಯ ಇತರ ಅಂಶಗಳನ್ನು ನಿಯಂತ್ರಿಸುತ್ತಿದೆ. ಬೆಲೆಯನ್ನು
ನಿಯಂತ್ರಣ ಮುಕ್ತಗೊಳಿಸಿದ್ದರೂ ಇನ್ನೂ ಅದರ ಪ್ರಯೋಜನ ಜನರಿಗೆ ಸಿಕ್ಕಿಲ್ಲ. ಇನ್ನು ಮುಂದೆಯಾದರೂ ಬೆಲೆ ಸ್ಥಿತ್ಯಂತರದ ಪೂರ್ಣ ಲಾಭ ಗ್ರಾಹಕನಿಗೆ ಸಿಗುವಂತಾಗಬೇಕು.

Advertisement

Udayavani is now on Telegram. Click here to join our channel and stay updated with the latest news.

Next