ಹೊಸದಿಲ್ಲಿ : 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕದಲ್ಲಿ ಇಂದು ಮಂಗಳವಾರ ಪೆಟ್ರೋಲ್ ದರ ಗರಿಷ್ಠ ಮಟ್ಟವನ್ನು ತಲುಪಿದೆ. ಇದೇ ರೀತಿ ಡೀಸಿಲ್ ದರ ಲೀಟರ್‌ಗೆ ದಾಖಲೆಯ 63.20 ರೂ.ಗೆ ತಲುಪಿದೆ. ಇದರ ಪರಿಣಾಮವಾಗಿ ತೈಲ ಸಚಿವಾಲಯವು ಪೆಟ್ರೋಲ್, ಡೀಸಿಲ್ ಮೇಲಿನ ಅಬಕಾರಿ ಸುಂಕ ಇಳಿಸುವಂತೆ ಕೋರಿದೆ.
ದಿಲ್ಲಿಯಲ್ಲಿ ಇಂದು ಮಂಗಳವಾರ ಪೆಟ್ರೋಲ್ ಲೀಟರ್ ದರ 72.38 ರೂ. ಇದು 2014ರ ಮಾರ್ಚ್ ನಂತರದ ಗರಿಷ್ಠ ದರವಾಗಿದೆ ಎಂದು ಸರಕಾರಿ ಒಡೆತನದ ತೈಲ ಕಂಪೆನಿಗಳ ದಿನವಹಿ ಇಂಧನ ದರ ಪಟ್ಟಿ ತಿಳಿಸುತ್ತದೆ.
ಕಳೆದ ವರ್ಷ ಡಿಸೆಂಬರ್ ಮಧ್ಯದ ಬಳಿಕ ಪೆಟ್ರೋಲ್ ದರ 3.31 ರೂ. ಏರಿದೆ. ಮುಂಬಯಿಯಲ್ಲಿ ಪೆಟ್ರೋಲ್ ದರ 80 ರೂ. ದಾಟಿದ್ದು ಇದು ದೇಶದಲ್ಲೇ ಅತ್ಯಂತ ದುಬಾರಿಯಾಗಿದೆ.
ಮುಂಬಯಿಯಲ್ಲಿ ಡೀಸಿಲ್ ಲೀಟರ್ ದರ 67.30 ರೂ. ಆಗಿದೆ. ಮುಂಬಯಿಯಲ್ಲಿ ವ್ಯಾಟ್ ದರ ಹೆಚ್ಚಿರುವದೇ ಇದಕ್ಕೆ ಕಾರಣವಾಗಿದೆ. ಡಿಸೆಂಬರ್ ಮಧ್ಯದ ಬಳಿಕ ಡೀಸಿಲ್ ದರ ಲೀಟರ್‌ಗೆ 4.86 ರೂ. ಏರಿದೆ ಎಂದು ತೈಲ ಕಂಪೆನಿಗಳು ತಿಳಿಸಿವೆ.
ಅಂತಾರಾಷ್ಟ್ರೀಯ ಕಚ್ಚಾ ತೈಲ ದರಗಳು ನಿರಂತರವಾಗಿ ಏರುತ್ತಿರುವುದೇ ದೇಶದಲ್ಲಿ ಪೆಟ್ರೋಲ್, ಡೀಸಿಲ್ ದರ ಏರಿಕೆಗೆ ಕಾರಣವಾಗಿದೆ.