ಹೊಸದಿಲ್ಲಿ : ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ ಇಂದು ಮಂಗಳವಾರ ಲೀಟರ್‌ಗೆ 73.95 ರೂ. ತಲುಪಿದ್ದು ಆ ಮೂಲಕ ಅದು ನಾಲ್ಕು ವರ್ಷಗಳ ಗರಿಷ್ಠ ಮಟ್ಟವನ್ನು ತಲುಪಿದೆ. ಇದೇ ರೀತಿ ಡೀಸಿಲ್ ಲೀಟರ್ ದರ ಸಾರ್ವಕಾಲಿಕ ಎತ್ತರದ ಮಟ್ಟವಾಗಿ 64.82 ರೂ.ಗೆ ಏರಿದೆ.
ಪೆಟ್ರೋಲ್ ಬೆಲೆ ಗಗನಮುಖೀಯಾಗಿರುವುದರಿಂದ ಇಂಧನದ ಮೇಲಿನ ಅಬಕಾರಿ ಸುಂಕವನ್ನು ಇಳಿಸಬೇಕೆಂಬ ಕೂಗು ಮತ್ತೆ ಬಲವಾಗಿ ಕೇಳಿಸಲಾರಂಭಿಸಿದೆ. ಆದರೆ ಸರಕಾರ ‘ಈಗ ಸದ್ಯಕ್ಕೆ ಅಬಕಾರಿ ಸುಂಕವನ್ನು ಇಳಿಸಲಾಗದು’ ಎಂದು ಖಂಡ ತುಂಡವಾಗಿ ಹೇಳಿದೆ.
ಎರಡನೇ ಸುತ್ತಿನ ಅಬಕಾರಿ ಸುಂಕ ಕಡಿತ ಮಾಡಲಾಗುವುದೇ ಎಂಬ ಪ್ರಶ್ನೆಗೆ ಹಣಕಾಸು ಕಾರ್ಯದರ್ಶಿ ಹಸ್‌ಮುಖ್ ಆಧಿಯಾ ಅವರು “ಸದ್ಯಕ್ಕಿಲ್ಲ; ಹಾಗೆ ಮಾಡುವಾಗ ನಾವು ನಿಮಗೆ ತಿಳಿಸುತ್ತೇವೆ’ ಎಂದು ಸಂಕ್ಷಿಪ್ತ ಉತ್ತರ ನೀಡಿದರು.
ಕಳೆದ ವರ್ಷ ಜೂನ್ ತಿಂಗಳಿಂದ ತೈಲ ಕಂಪೆನಿಗಳು ದಿನ ನಿತ್ಯ ಇಂಧನ ಬೆಲೆಯನ್ನು ಪರಿಷ್ಕರಿಸುತ್ತಿವೆ. ಇಂದು ಮಂಗಳವಾರ ಪೆಟ್ರೋಲ್ ಬೆಲೆ ಲೀಟರ್‌ಗೆ 12 ಪೈಸೆ ಮತ್ತು ಡೀಸಿಲ್ ಬೆಲೆ ಲೀಟರ್‌ಗೆ 13 ಪೈಸೆಯನ್ನು ದಿಲ್ಲಿಯಲ್ಲಿ ಏರಿಸಲಾಗಿರುವುದು ಇಂಡಿಯನ್ ಆಯಿಲ್ ಇಂಧನ ಧಾರಣೆ ಅಧಿಸೂಚನೆಯು ತಿಳಿಸಿದೆ.
ದಿಲ್ಲಿಯಲ್ಲಿ ಇಂದು ಮಂಗಳವಾರ ಚಾಲ್ತಿಯಲ್ಲಿರುವ ದರದ ಪ್ರಕಾರ ಪೆಟ್ರೋಲ್ ಬೆಲೆ ಲೀಟರ್‌ಗೆ 76.06, ಡೀಸಿಲ್ ಲೀಟರ್‌ಗೆ 64.69. (2018ರ ಫೆ.7ರಂದು ಲೀಟರ್ ಡೀಸಿಲ್ ಬೆಲೆ 64.82 ರೂ. ಇತ್ತು).
2017ರ ಅಕ್ಟೋಬರ್‌ನಲ್ಲಿ ಸರಕಾರ ಇಂಧನ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 2 ರೂ. ಇಳಿಸಿತ್ತು.