Advertisement

ದೀಪಾವಳಿ; ಪೆಟ್ರೋಲ್‌, ಡೀಸೆಲ್‌ ಅಗ್ಗ; ರಾಜ್ಯಗಳೂ ವ್ಯಾಟ್‌ ಇಳಿಕೆ ಮಾಡಲು ಕೇಂದ್ರ ಸಲಹೆ

10:36 AM Nov 04, 2021 | Team Udayavani |

ನವದೆಹಲಿ: ದೀಪಾವಳಿ ಹಿಂದಿನ ದಿನವೇ ಕೇಂದ್ರ ಸರ್ಕಾರ ದೇಶದ ಜನರಿಗೆ ಪೆಟ್ರೋಲ್‌, ಡೀಸೆಲ್‌ ವಿಚಾರದಲ್ಲಿ ಖುಷಿ ಸಂಗತಿಯೊಂದನ್ನು ನೀಡಿದೆ. ಪ್ರತಿ ಲೀ.ಪೆಟ್ರೋಲ್‌ ಮೇಲೆ 5 ರೂ. ಮತ್ತು ಡೀಸೆಲ್‌ ಮೇಲೆ 10 ರೂ. ಅಬಕಾರಿ ಸುಂಕವನ್ನು ಕಡಿಮೆ ಮಾಡಿದೆ. ಈ ನಿರ್ಧಾರ ಗುರುವಾರದಿಂದಲೇ ಜಾರಿಗೆ ಬಂದಿದೆ.

Advertisement

ಈ ಬಗ್ಗೆ ಕೇಂದ್ರ ವಿತ್ತ ಸಚಿವಾಲಯ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದೆ. ಪೆಟ್ರೋಲ್‌ಗಿಂತ ಡೀಸೆಲ್‌ ಅಬಕಾರಿ ಸುಂಕ ಇಳಿಕೆ ಹೆಚ್ಚಾಗಿದೆ ಎಂದು ಹೇಳಿರುವ  ಸರ್ಕಾರ ದೇಶದ ಅರ್ಥ ವ್ಯವಸ್ಥೆಗೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಹಣದುಬ್ಬರ ಪ್ರಮಾಣ ಇಳಿಕೆಯಾಗಿ, ಜನರಲ್ಲಿ ಹೆಚ್ಚಿನ ಪ್ರಮಾಣದ ಖರೀದಿ ಹೆಚ್ಚಲಿದೆ. ಇದು ಮಧ್ಯಮ ವರ್ಗ ಮತ್ತು ಬಡವರಿಗೆ ನೆರವಾಗಲಿದೆ ಎಂದು ಹೇಳಿಕೊಂಡಿದೆ.

2020 ಮಾರ್ಚ್‌ನಿಂದ ಮೇ ಅವಧಿಯಲ್ಲಿ ಪೆಟ್ರೋಲ್‌- ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಕ್ರಮವಾಗಿ 13 ರೂ., 16 ರೂ.ಗಳಷ್ಟು ಇಳಿಕೆ ಮಾಡಿದ ಬಳಿಕದ ಗರಿಷ್ಠ ಇಳಿಕೆ ಇದಾಗಿದೆ.  2020 ಮೇ 5ರ ಬಳಿಕ ಪ್ರತಿ ಲೀಟರ್‌ ಪೆಟ್ರೋಲ್‌ಗೆ 38.78 ರೂ., ಪ್ರತಿ ಲೀಟರ್‌ ಡೀಸೆಲ್‌ ದರ 29.03 ರೂ. ಏರಿಕೆಯಾಗಿದೆ.

ರಾಜ್ಯಗಳೂ ಇಳಿಕೆ ಮಾಡಲಿ:
ರಾಜ್ಯ ಸರ್ಕಾರಗಳೂ ಕೂಡ ಪೆಟ್ರೋಲ್‌, ಡೀಸೆಲ್‌ಗೆ ಸ್ಥಳೀಯ ಮಟ್ಟದಲ್ಲಿ ಇರುವ ಮೌಲ್ಯ ವರ್ಧಿತ ತೆರಿಗೆ (ವ್ಯಾಟ್‌) ಇಳಿಕೆ ಮಾಡಬೇಕು. ಈ ಮೂಲಕ ಸಾರ್ವಜನಿಕರಿಗೆ ಉಂಟಾಗುವ ಹೊರೆ ತಗ್ಗಿಸಲು ಕ್ರಮ ಕೈಗೊಳ್ಳಬೇಕು ಎಂದು ವಿತ್ತ ಸಚಿವಾಲಯ ಸಲಹೆ ಮಾಡಿದೆ.

ಇದನ್ನೂ ಓದಿ:ಹಸಿರಾಯಿತು ಬರಡು ಭೂಮಿ! 30 ಸಾವಿರ ಗಿಡ ಬೆಳೆಸಿದ ನಿಸರ್ಗ ಪ್ರೇಮಿಗಳು

Advertisement

ಬಸವಳಿದಿರುವ ಜನರು:
ಇತ್ತೀಚಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲದ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿತ್ತು. ನ.1ರಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ದರ 226 ರೂ. ಏರಿಕೆಯಾಗಿತ್ತು. ಹೀಗಾಗಿ, ಬೆಂಗಳೂರಿನಲ್ಲಿ ಅದರ ಬೆಲೆ 2,021 ರೂ. ಆಗಿದೆ. ಬುಧವಾರ ಶೇ.1.2ರಷ್ಟು ಅಂದರೆ ಪ್ರತಿ ಬ್ಯಾರೆಲ್‌ಗೆ 83.74 ಅಮೆರಿಕನ್‌ ಡಾಲರ್‌ನಷ್ಟಾಗಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿದ್ದಂತೆಯೇ ಸರ್ಕಾರಿ ಸ್ವಾಮ್ಯದ ತೈಲಕಂಪನಿಗಳು ದಿನ ವಹಿ ಸರಾಸರಿ 35 ಪೈಸೆ ಏರಿಕೆ ಮಾಡುತ್ತಿದ್ದವು. ಸೆ.1ರಂದು ಪ್ರತಿ ಲೀಟರ್‌ ಪೆಟ್ರೋಲ್‌ಗೆ 104.84 ರೂ. ಆಗಿದ್ದದ್ದು ನ.2ರಂದು 113.93 ರೂ. ವರೆಗೆ ಜಿಗಿದಿತ್ತು. ಸೆ.1ರಂದು ಪ್ರತಿ ಲೀಟರ್‌ ಡೀಸೆಲ್‌ಗೆ 94.19 ರೂ. ಇದ್ದದ್ದು ನ.1ರಂದು 104.50 ರೂ. ವರೆಗೆ ಏರಿಕೆಯಾಗಿತ್ತು. ಅ.24ರಿಂದ ನ.2ರ ವರೆಗೆ ಬೆಂಗಳೂರಿಗೆ ಸಂಬಂಧಿಸಿದಂತೆ ಇರುವ ಪೆಟ್ರೋಲ್‌ ದರ ಏರಿಕೆ ಗಮನಿಸುವುದಾದರೆ ಒಂದು ಲೀಟರ್‌ಗೆ 2.95 ರೂ. ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಪ್ರತಿ ಲೀಟರ್‌ ಡೀಸೆಲ್‌ ದರ 2.64 ರೂ. ಏರಿಕೆಯಾಗಿದೆ. ಹೀಗಾಗಿ, ದೇಶವಾಸಿಗಳು ತೈಲೋತ್ಪನ್ನಗಳ ದರದಲ್ಲಿ ಇಳಿಕೆಯಾಗಲಿ ಎಂದು ಯೋಚಿಸುತ್ತಿರುವಂತೆಯೇ ಕೇಂದ್ರ ಸರ್ಕಾರದಿಂದ ಅಬಕಾರಿ ಸುಂಕ ಇಳಿಕೆಯ ನಿರ್ಧಾರ ಪ್ರಕಟವಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next