Advertisement

ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚಳ : ಶೇ. 51ರಷ್ಟು ಜನರಿಂದ ಇತರ ವೆಚ್ಚಕ್ಕೆ ಕಡಿತ!

02:03 AM Feb 26, 2021 | Team Udayavani |

ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ದಾಖಲೆಯ ಮಟ್ಟವನ್ನು ತಲುಪಿವೆ. ಹಲವು ನಗರಗಳಲ್ಲಿ ಪೆಟ್ರೋಲ್‌ ಪ್ರತೀ ಲೀಟರ್‌ಗೆ 100 ರೂ. ಆಗಿದೆ. ಇದರಿಂದಾಗಿ ಜನಸಾಮಾನ್ಯರು ತಮ್ಮ ದೈನಂದಿನ ವೆಚ್ಚವನ್ನು ಸರಿದೂಗಿಸಲು ಹರಸಾಹಸ ಪಡುತ್ತಿದ್ದಾರೆ. ತೈಲ ಬೆಲೆಯಲ್ಲಾಗಿರುವ ಹೆಚ್ಚಳದಿಂದಾಗಿ ಶೇ. 51ರಷ್ಟು ಜನರು ತಮ್ಮ ಇತರ ವೆಚ್ಚಗಳಲ್ಲಿ ಕಡಿತಗೊಳಿಸುತ್ತಿದ್ದಾರೆ ಎಂಬುದು ಸಮೀಕ್ಷೆಯಿಂದ ಬಹಿರಂಗವಾಗಿದೆ.

Advertisement

ವ್ಯಾಟ್‌ ಕಡಿಮೆ ಮಾಡಬೇಕು
ಶೇ. 32ರಷ್ಟು ಜನರು, ರಾಜ್ಯ ಸರಕಾರಗಳು ಮೂಲ ಬೆಲೆಯಲ್ಲಿ ಶೇಕಡಾವಾರು ಬದಲು ಸಂಪೂರ್ಣ ಮೌಲ್ಯದ ಆಧಾರದ ಮೇಲೆ ಮೌಲ್ಯವರ್ಧಿತ ತೆರಿಗೆ(ವ್ಯಾಟ್‌)ಯನ್ನು ವಿಧಿಸಬೇಕು ಎಂದು ಹೇಳಿದ್ದಾರೆ. ಶೇ.47 ಜನರು ರಾಜ್ಯ ಸರಕಾರಗಳು ವ್ಯಾಟ್‌ ಕಡಿತಗೊಳಿಸಬೇಕು ಎಂದಿದ್ದಾರೆ. ಆದರೆ ಪ್ರಸ್ತುತ ವ್ಯಾಟ್‌ ಮಾದರಿಯು ಉತ್ತಮವಾಗಿದೆ ಎಂದು ಶೇ. 8ರಷ್ಟು ಗ್ರಾಹಕರು ಹೇಳಿದ್ದಾರೆ. ಹೆಚ್ಚುತ್ತಿರುವ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ಇಳಿಸಲು ರಾಜ್ಯ ಸರಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಶೇ. 79ರಷ್ಟು ಮಂದಿ ಆಗ್ರಹಿಸಿದ್ದಾರೆ

291 ಜಿಲ್ಲೆಗಳಲ್ಲಿ ಸಮೀಕ್ಷೆ
ಕಳೆದೊಂದು ವರ್ಷದಲ್ಲಿ ಪೆಟ್ರೋಲ್-ಡೀಸೆಲ್‌ ಬೆಲೆ ತೀವ್ರವಾಗಿ ಹೆಚ್ಚಿದೆ. ಜನರು ಬೆಲೆ ಏರಿಕೆಯನ್ನು ಹೇಗೆ ನಿಭಾಯಿಸುತ್ತಿದ್ದಾರೆ ಎಂದು ತಿಳಿದುಕೊಳ್ಳಲು ಲೋಕಲ್‌ ಸರ್ಕಲ್ಸ್‌ ಈ ಸಮೀಕ್ಷೆಯನ್ನು ಕೈಗೊಂಡಿತ್ತು. ದೇಶದ 291 ಜಿಲ್ಲೆಗಳಲ್ಲಿ ಕೈಗೊಳ್ಳಲಾದ ಸಮೀಕ್ಷೆಯಲ್ಲಿ 22 ಸಾವಿರಕ್ಕೂ ಹೆಚ್ಚು ಜನರ ಅಭಿಪ್ರಾಯವನ್ನು ಸಂಗ್ರಹಿಸಲಾಗಿತ್ತು.

ಸುಂಕದಲ್ಲಿ ಇಳಿಕೆ ಸಾಧ್ಯತೆ ಇಲ್ಲ
ಕೊರೊನಾದ ಹಿನ್ನೆಲೆಯಲ್ಲಿ ನೆಲಕಚ್ಚಿದ್ದ ದೇಶದ ಆರ್ಥಿಕತೆಯನ್ನು ಹಳಿಗೆ ತರುವ ಪ್ರಯತ್ನದಲ್ಲಿ ಕೇಂದ್ರ ಸರಕಾರ ನಿರತವಾಗಿರುವುದರಿಂದ ಸದ್ಯಕ್ಕಂತೂ ಪೆಟ್ರೋಲ್‌ ಮೇಲೆ ವಿಧಿಸುತ್ತಿರುವ ಸುಂಕದಲ್ಲಿ ಇಳಿಕೆ ಮಾಡುವ ಸಾಧ್ಯತೆ ತೀರಾ ಕಡಿಮೆ. ತೈಲೋತ್ಪನ್ನಗಳಿಂದ ಸರಕಾರಕ್ಕೆ ಸಾಕಷ್ಟು ಪ್ರಮಾಣದಲ್ಲಿ ಆದಾಯ ಹರಿದುಬರುತ್ತಿರುವುದರಿಂದ ಅದಕ್ಕೆ ಕತ್ತರಿ ಹಾಕುವಂಥ ಯಾವುದೇ ಕ್ರಮವನ್ನೂ ಕೇಂದ್ರ ಸರಕಾರ ಕೈಗೊಳ್ಳದು ಎನ್ನಲಾಗಿದೆ. ಪಂಚರಾಜ್ಯ ವಿಧಾನಸಭೆ ಚುನಾವಣೆ ವೇಳೆಗೆ ಸರಕಾರ ಇಂಥ ಕ್ರಮಕ್ಕೆ ಮುಂದಾದರೂ ಅಚ್ಚರಿ ಇಲ್ಲ ಎಂಬುದು ರಾಜಕೀಯ ಪಂಡಿತರ ವಿಶ್ಲೇಷಣೆ. ಇನ್ನು ರಾಜ್ಯ ಸರಕಾರಗಳ ಬೊಕ್ಕಸವೂ ಬರಿದಾಗಿರುವುದರಿಂದ ವ್ಯಾಟ್‌ನಲ್ಲಿ ಕಡಿತವಾಗುವ ಸಾಧ್ಯತೆಗಳಿಲ್ಲ. ಕೆಲವೊಂದು ರಾಜ್ಯಗಳ ಸರಕಾರಗಳು ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಣ ವ್ಯಾಟ್‌ನಲ್ಲಿ ಕಡಿತ ಮಾಡಿದ್ದು ಆ ಮೂಲಕ ಗ್ರಾಹಕರ ಮೇಲಿನ ಹೊರೆಯನ್ನು ಕಿಂಚಿತ್‌ ಕಡಿಮೆ ಮಾಡಿವೆ.

ಉಳಿತಾಯಕ್ಕೂ ಬಿತ್ತು ಕತ್ತರಿ
ಶೇ. 21ರಷ್ಟು ಜನರು ಪೆಟ್ರೋಲ್‌ ಮತ್ತು ಡೀಸೆಲ್‌ನ ಬೆಲೆಯಲ್ಲಾಗಿರುವ ಹೆಚ್ಚಳವನ್ನು ಸರಿದೂಗಿಸಲು ಅಗತ್ಯ ವಸ್ತುಗಳ ಖರೀದಿಗಾಗಿ ತಾವು ಮಾಡುತ್ತಿದ್ದ ವೆಚ್ಚದಲ್ಲಿ ಅಲ್ಪ ಪ್ರಮಾಣದ ಕಡಿತ ಮಾಡಿದ್ದಾರೆ. ಶೇ. 14ರಷ್ಟು ಜನರು ಮಾಸಿಕವಾಗಿ ಉಳಿತಾಯಕ್ಕಾಗಿ ಮೀಸಲಿಡುತ್ತಿದ್ದ ಮೊತ್ತದಲ್ಲಿ ಕಡಿತ ಮಾಡಿದ್ದಾರೆ. ಇನ್ನು ಶೇ. 43ರಷ್ಟು ಜನರು ಪ್ರಯಾಣ, ಮನೆಯಿಂದಲೇ ಕೆಲಸ ಅಥವಾ ಇತರ ಕಾರಣಗಳಿಂದಾಗಿ ತಮ್ಮ ಮಾಸಿಕ ಪೆಟ್ರೋಲ್‌ ಅಥವಾ ಡೀಸೆಲ್‌ ಬಿಲ್‌ ಈ ಮೊದಲಿಗಿಂತ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. ಅದೇ ಸಮಯದಲ್ಲಿ ಶೇ. 2ರಷ್ಟು ಜನರು ಪೆಟ್ರೋಲ್‌ ಮತ್ತು ಡೀಸೆಲ್‌ಗಾಗಿ ಯಾವುದೇ ಹಣವನ್ನು ಖರ್ಚು ಮಾಡುವುದಿಲ್ಲ ಎಂದಿದ್ದಾರೆ ಎಂದು ಸಮೀಕ್ಷಾ ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next