Advertisement

ಪೆಟ್ರೋಲು, ಡೀಸೆಲ್‌ ಜಿಎಸ್‌ಟಿಯಡಿ ಬರಲಿ: ಗ್ರಾಹಕರಿಗೇಕಿಲ್ಲ ಲಾಭ?

12:19 PM Sep 16, 2017 | |

ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಅರ್ಧಕ್ಕರ್ಧ ಕಡಿಮೆಯಾಗಿದೆ. ಆದರೆ ದೇಶದಲ್ಲಿ ಪೆಟ್ರೋಲು ಮತ್ತು ಡೀಸೆಲ್‌ ಬೆಲೆ ಮಾತ್ರ ಒಂದೇ ಸವನೆ ಹೆಚ್ಚಾಗುತ್ತಿದೆ. ಸದ್ಯ ಮಹಾನಗರಗಳಲ್ಲಿ ಪೆಟ್ರೋಲು ಮತ್ತು ಡೀಸೆಲ್‌ ಬೆಲೆ 2014ರಲ್ಲಿದ್ದ ಸ್ಥಿತಿಗೆ ತಲುಪಿದೆ. ಮುಂಬಯಿಯಲ್ಲಿ ಪೆಟ್ರೋಲು 80 ರೂ. ಸನಿಹದಲ್ಲಿದೆ. ಬೆಂಗಳೂರು, ಕೋಲ್ಕತ್ತ, ದಿಲ್ಲಿ, ಚೆನ್ನೈಯ ಮತ್ತಿತರ ನಗರಗಳಲ್ಲಿ 70ರಿಂದ 75ರೂ.ಆಸುಪಾಸಿನಲ್ಲಿದೆ. ನಿತ್ಯ ಬೆಲೆ ಪರಿಷ್ಕರಿಸುವ ವ್ಯವಸ್ಥೆಯನ್ನು ಅಳವಡಿಸಿಕೊಂಡ ಬಳಿಕ ಪೈಸೆಗಳ ಲೆಕ್ಕದಲ್ಲಿ ಬೆಲೆ ಏರುತ್ತಾ ಹೋಗಿರುವುದು ಗಮನಕ್ಕೆ ಬಂದಿಲ್ಲ. ಈ ವ್ಯವಸ್ಥೆ ಜಾರಿಗೆ ಬಂದ ಬಳಿಕ ಪೆಟ್ರೋಲು ಮತ್ತು ಡೀಸೆಲ್‌ ಬೆಲೆ ಸುಮಾರು 7 ರೂ. ಹೆಚ್ಚಾಗಿದೆ. ಹಿಂದೆ 15 ದಿನಗಳಿಮ್ಮೆ 2-3 ರೂಪಾಯಿ ಹೆಚ್ಚಾದಾಗ ಒಮ್ಮೆಲೆ ಇದರ ಬಿಸಿ ತಟ್ಟಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದವು.ಜಿಎಸ್‌ಟಿ ಜಾರಿಗೆ ಬಂದ ದಿನ ಸುಮಾರು 3 ರೂ. ಇಳಿಕೆಯಾಗಿರುವುದು ಬಿಟ್ಟರೆ ಅನಂತರ ನಿತ್ಯವೂ ಹೆಚ್ಚಳವೇ ಆಗುತ್ತಿದೆ. ಪೆಟ್ರೋಲು ಮತ್ತು ಡೀಸೆಲ್‌ ಬೆಲೆ ಹೆಚ್ಚಳದ ಬಿಸಿ ಜನರಿಗೆ ಮುಟ್ಟಲಾರಂಭಿಸಿದೆ. ಆಹಾರ ಬೆಲೆಯುಬ್ಬರವಾಗುತ್ತಿದ್ದು, ಇದರಿಂದ ಬಡ ಮತ್ತು ಮಧ್ಯಮ ವರ್ಗದವರ ಬದುಕು ದುಸ್ತರವಾಗುತ್ತಿದೆ. ಆಗಸ್ಟ್‌ನಲ್ಲಿ ಸಗಟು ಆಹಾರ ಬೆಲೆಯುಬ್ಬರ ಶೇ.5.75ಕ್ಕೇರಿತ್ತು. ಎಲ್ಲ ಅಗತ್ಯ ವಸ್ತುಗಳ ಬೆಲೆ ಹೆಚ್ಚುತ್ತಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಜನರ ಜೇಬಿಗೆ ಇನ್ನಷ್ಟು ಕತ್ತರಿ ಬೀಳಲಿದೆ. ಆದರೆ ಸರಕಾರ ಇದರ ಪರಿವೇ ಇಲ್ಲದಂತೆ ವರ್ತಿಸುವುದನ್ನು ನೋಡುವಾಗ ಆಶ್ಚರ್ಯವಾಗುತ್ತದೆ. 

Advertisement

ಹಿಂದಿನ ಯುಪಿಎ ಸರಕಾರದ ಆಡಳಿತವಿದ್ದಾಗ ಕಚ್ಚಾತೈಲ ಬೆಲೆ ಬ್ಯಾರಲ್‌ಗೆ 120 ಡಾಲರ್‌ ತನಕ ಏರಿತ್ತು. ಆಗ ಪೆಟ್ರೋಲು ಬೆಲೆಯೂ 80 ರೂ. ದಾಟಿತ್ತು. ಆದರೆ ಮೋದಿ ಪ್ರಧಾನಿಯಾದ ಬಳಿಕ ಕಚ್ಚಾತೈಲ ಬೆಲೆ ಬ್ಯಾರಲ್‌ಗೆ 28 ರೂ. ಆದರೂ ಪೆಟ್ರೋಲು ಮತ್ತು ಡೀಸಿಲ್‌ ಬೆಲೆಯಲ್ಲಿ ಹೇಳಿಕೊಳ್ಳುವಂತಹ ಇಳಿಕೆ ಆಗಲಿಲ್ಲ. ಪ್ರಸ್ತುತ ಕಚ್ಚಾತೈಲ ಬೆಲೆ ಬ್ಯಾರಲ್‌ಗೆ 50 ಡಾಲರ್‌ ಇದೆ. ಈ ಲೆಕ್ಕದಲ್ಲಿ ಗರಿಷ್ಠ ಎಂದರೆ 45 ರೂ.ಗೆ ಪೆಟ್ರೋಲು ಸಿಗಬೇಕಿತ್ತು. ಆದರೆ ಹತ್ತಾರು ತೆರಿಗೆಗಳ ಪರಿಣಾಮವಾಗಿ ಪೆಟ್ರೋಲು ಈಗಲೂ ದುಬಾರಿಯಾಗಿ ಉಳಿದಿದೆ. ಈ ವಿಚಾರದಲ್ಲಿ ನಮ್ಮ ನೆರೆಯ ಪಾಕಿಸ್ಥಾನ, ಬಾಂಗ್ಲಾದೇಶಗಳೇ ವಾಸಿ. ಈ ನೆರೆ ದೇಶಗಳಲ್ಲಿ ನಮಗಿಂತ ಪೆಟ್ರೋಲು ಬೆಲೆ ಬಹಳಷ್ಟು ಕಡಿಮೆಯಿದೆ ಹಾಗೂ ಕಚ್ಚಾತೈಲ ಬೆಲೆ ಇಳಿಕೆಯಾದಾಗಲೆಲ್ಲ ಲಾಭ ಗ್ರಾಹಕರಿಗೆ ಸಿಗುತ್ತದೆ. ಈ ಬೆಲೆ ಇಳಿಕೆಯಾದಾಗ ಅದರ ಲಾಭವನ್ನು ಜನರಿಗೆ ನೀಡುವ ಬದಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿವಿಧ ರೀತಿಯ ತೆರಿಗೆ ಮತ್ತು ಮೇಲೆ¤ರಿಗೆ ವಿಧಿಸಿ ಬೊಕ್ಕಸ ತುಂಬಿಸಿಕೊಳ್ಳುತ್ತಿರುವುದೇ ಈ ಅಗತ್ಯ ಇಂಧನಗಳ ಬೆಲೆ ಸದಾ ಗಗನಮುಖೀಯಾಗಿರುವುದಕ್ಕೆ ಕಾರಣ.  ತೈಲ ಸಂಸ್ಕಾರಣಾಗಾರದಿಂದ ಪೆಟ್ರೋಲು ಹೊರಬರುವಾಗ ಅದರ ಬೆಲೆ ಬರೀ ರೂ. 26.65 ಇರುತ್ತದೆ. ಸಾಗಾಟ ವೆಚ್ಚ ಸೇರಿ ತೈಲ ಕಂಪೆನಿಗಳಿಗೆ ಬರುವಾಗ 30.70 ರೂ. ಆಗುತ್ತದೆ. ಆದರೆ ಪೆಟ್ರೋಲು ಪಂಪ್‌ಗ್ಳಲ್ಲಿ 70-71 ರೂಗೆ ಮಾರಾಟವಾಗುತ್ತದೆ. ಅಂದರೆ ಪೆಟ್ರೋಲು ಬೆಲೆಯಲ್ಲಿ ಅರ್ಧಕ್ಕರ್ಧ ಭಾಗ ತೆರಿಗೆ ಒಳಗೊಂಡಿರುತ್ತದೆ. ತೆರಿಗೆ ವ್ಯಾಪ್ತಿಗೆ ಬರುವ ಬಹುತೇಕ ಎಲ್ಲ ವಸ್ತುಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದಿದ್ದರೂ ಪೆಟ್ರೋಲು ಮತ್ತು ಡೀಸೆಲ್‌ನ್ನು ಹೊರಗಿಡಲಾಗಿದೆ. ಈ ಎರಡು ಇಂಧನಗಳಿಗೆ ಈಗಲೂ ವ್ಯಾಟ್‌ ಅನ್ವಯವಾಗುತ್ತದೆ. ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ವ್ಯಾಟ್‌ ಆಯಾಯ ರಾಜ್ಯಕ್ಕೆ ತಕ್ಕಂತೆ ಬದಲಾಗುತ್ತದೆ. ಹೀಗಾಗಿ ರಾಜ್ಯದಿಂದ ರಾಜ್ಯಕ್ಕೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯಲ್ಲಿ ಸುಮಾರು 9 ರೂ. ತನಕ ವ್ಯತ್ಯಾಸವಿರುತ್ತದೆ. 2014ರಿಂದೀಚೆಗೆ ಕೇಂದ್ರ ಸರಕಾರ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕವನ್ನು ಶೇ. 54 ಏರಿಸಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಪೆಟ್ರೋಲಿಯಂ ಉತ್ಪನ್ನಗಳು ಸುಲಭವಾಗಿ ಬೊಕ್ಕಸ ತುಂಬಿಸಿಕೊಳ್ಳುವ ಮಾರ್ಗವಾಗಿದೆ. 

ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಮಾತ್ರ ಬೆಲೆ ಕಡಿಮೆಯಾಗಲಿದೆ ಎಂದು ಎರಡು ದಿನಗಳ ಹಿಂದೆಯಷ್ಟೇ ಈ ಖಾತೆಯನ್ನು ನಿರ್ವಹಿಸುತ್ತಿರುವ ಧರ್ಮೇಂದ್ರ ಪ್ರಧಾನ್‌ ಹೇಳಿದ್ದಾರೆ. ಪ್ರಸ್ತುತ ಇರುವ ಕಚ್ಚಾತೈಲ ಬೆಲೆಯೇ ಆಧಾರದಲ್ಲಿ ಹೇಳುವುದಾದರೆ ಪೆಟ್ರೋಲಿಯಂ ಉತ್ಪನ್ನಗಳು ಜಿಎಸ್‌ಟಿ ವ್ಯಾಪ್ತಿಗೆ ಬಂದರೆ ಬೆಲೆ ಅರ್ಧದಷ್ಟು ಕಡಿಮೆಯಾಗಬೇಕು. ಗರಿಷ್ಠ ಶೇ. 28 ಜಿಎಸ್‌ಟಿ ವಿಧಿಸಿದರೂ ಪೆಟ್ರೋಲು ಬೆಲೆ ಲೀಟರಿಗೆ 44 ರೂ. ಆಗಬಹುದು. ಮೇಲೆ¤ರಿಗೆ ವಿಧಿಸಿ 50 ರೂ.ಗೆ ಪೆಟ್ರೋಲು ಕೊಟ್ಟರೂ ಸಾಕು. ಇಂತಹ ಒಂದು ಸುವರ್ಣ ಯುಗ ಬರಬೇಕಾದರೆ ಸರಕಾರ ದೃಢ ಸಂಕಲ್ಪ ಮಾಡಬೇಕಷ್ಟೆ.

Advertisement

Udayavani is now on Telegram. Click here to join our channel and stay updated with the latest news.

Next