ಕಲಬುರಗಿ: ಕೋವಿಡ್ 19 ಸೋಂಕು ಭೀತಿ ಹಿನ್ನೆಲೆಯಲ್ಲಿ ಜನರ ಓಡಾಟ ನಿಯಂತ್ರಿಸಲು ಪೆಟ್ರೋಲ್ ಬಂಕ್‌ಗಳ ಬಂದ್ ಕುರಿತು ಜಿಲ್ಲಾಡಳಿತ ಹೊರಡಿಸಿದ ಆದೇಶ ಗೊಂದಲ ಮೂಡಿಸಿದೆ.
ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಜಿಲ್ಲಾದ್ಯಂತ ಎಲ್ಲ ಬಂಕ್‌ಗಳನ್ನು ಅನಿರ್ದಿಷ್ಟ ಅವಧಿಯವರೆಗೆ ಮುಚ್ಚಿಸಿ ಜಿಲ್ಲಾಧಿಕಾರಿ ಶರತ್ ಬಿ. ಆದೇಶ ಹೊರಡಿಸಿದ್ದರು. ಈ ಆದೇಶ ಹೊರಬೀಳುತ್ತಿದ್ದಂತೆ ಸಾರ್ವಜನಿಕರು ಪೆಟ್ರೋಲ್, ಡೀಸೆಲ್ ತುಂಬಿಸಿಕೊಳ್ಳಲು ಬಂಕ್ ಗಳತ್ತ ದಾಂಗುಡಿ ಇಟ್ಟರು. ಬಂಕ್‌ಗಳಲ್ಲಿ ಜನ ಜಮಾವಣೆಗೊಂಡ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕಾಗಮಿಸಿ ತಕ್ಷಣದಿಂದಲೇ ಬಂಕ್ ಗಳನ್ನು ಬಂದ್ ಮಾಡಿ ಮಾಲೀಕರಿಗೆ ಹೇಳಿ ಬಂದ್ ಮಾಡಿಸಿದರು.
ಇದಾದ ಒಂದು ಗಂಟೆ ಅವಧಿಯೊಳಗೇ ತಮ್ಮ ಆದೇಶವನ್ನು ಜಿಲ್ಲಾಧಿಕಾರಿಗಳು ಮಾರ್ಪಾಡು ಮಾಡಿದರು. ಅಗತ್ಯ ಅನುಸಾರಗಾಗಿ ಎಲ್ಲರಿಗೂ ಇಂಧನ ಲಭ್ಯತೆ ಇರಲಿದೆ. ಪ್ರಥಮವಾಗಿ ವೈದ್ಯರು, ಆರೋಗ್ಯ ಸಿಬ್ಬಂದಿಗೆ ಆದ್ಯತೆ, ಎರಡನೇ ಅಗತ್ಯ ವಸ್ತುಗಳ ಸಾಗಾಟಗಾರರು ನಂತರದಲ್ಲಿ ಸಾರ್ವಜನಿಕವಾಗಿ ಎಲ್ಲರಿಗೂ ಇಂಧನ ಸಿಗಲಿದೆ ಎಂದು ಹೇಳಿದರು.
ಆದರೆ, ಶನಿವಾರ ಬೆಳಗ್ಗೆ ಮತ್ತೆ ತಮ್ಮ ಆದೇಶವನ್ನು ಬದಲಿಸಿ ಈ ಮೊದಲು ಹೊರಡಿಸಿದ ಆದೇಶವನ್ನೇ ಮರು ಜಾರಿ ಮಾಡಿದರು. ಮುಂದಿನ ಆದೇಶದವರೆಗೂ ಎಲ್ಲ ಪೆಟ್ರೋಲ್ ಬಂಕ್‌ಗಳು ಮುಚ್ಚಬೇಕು ಎಂದು ಸೂಚಿಸಿದರು. ಅಲ್ಲದೇ, ಸರ್ಕಾರಿ ವಾಹನಗಳು, ವೈದ್ಯರು, ವೈದ್ಯಕೀಯ ಸಿಬ್ಬಂದಿ, ಆ್ಯಂಬುಲೆನ್ಸ್‌ಗಳು, ಔಷಧಿ ವ್ಯಾಪಾರಿಗಳು, ಪತ್ರಕರ್ತರು ಮತ್ತು ಕೆಲ ಅವಶ್ಯ ಸೇವಾ ವಲಯದ ಇಲಾಖೆಗಳು ಮತ್ತು ಸರ್ಕಾರಿ ನೌಕರರಿಗೆ ಈ ಆದೇಶ ಅನ್ವಯಿಸಿಲ್ಲ. ಇವರಿಗೆ ಇಂಧನ ತುಂಬುವಾಗ ಗುರುತಿನ ಚೀಟಿ ಪರಿಶೀಲಿಸಬೇಕೆಂದು ಪೆಟ್ರೋಲ್ ಮಾಲೀಕರಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳ ಈ ಆದೇಶದಿಂದ ಪೆಟ್ರೋಲ್ ಬಂಕ್ ಮಾಲೀಕರು ಗೊಂದಲಕ್ಕೀಡಾದರು. ಕೆಲ ಪೆಟ್ರೋಲ್ ಬಂಕ್‌ಗಳನ್ನು ಸಂಪೂರ್ಣವಾಗಿ ಬಂದ್ ಮಾಡಿದರು. ಅಲ್ಲದೇ, ತುರ್ತು ಸೇವೆ ಒದಗಿಸುವರಿಗೂ ಪೆಟ್ರೋಲ್ ಬಿಸಿ ತಟ್ಟಿತು. ಹೋಂ ಕ್ವಾರೆಂಟೈನ್‌ನಲ್ಲಿದ್ದವರ ತಪಾಸಣೆಗೆ ಹೋಗಬೇಕಾದ ಆರೋಗ್ಯ ಸಿಬ್ಬಂದಿ, ಪೆಟ್ರೋಲ್ ಹಾಕಿಸಿಕೊಳ್ಳಲು ಹೋದರೆ ಬಂಕ್ ಸಿಬ್ಬಂದಿ ಪೆಟ್ರೋಲ್ ತುಂಬಲಿಲ್ಲ. ಗುರುತಿನ ಚೀಟಿ ತೋರಿಸಿದರೂ ಸಹ ಬಂಕ್‌ನವರು ಪೆಟ್ರೋಲ್ ಹಾಕದ ಘಟನೆಗಳು ನಡೆದವು.