ಬೆಂಗಳೂರು: ರಾಜ್ಯದಲ್ಲಿ ನಾಯಕ, ನಾಯ್ಕ, ಬೇಡ, ಬೇಡರ, ವಾಲ್ಮೀಕಿ, ತಳವಾರ ಸಮುದಾಯಗಳನ್ನು ಪರಿಶಿಷ್ಟ ಪಂಗಡ (ಎಸ್ಟಿ) ಪಟ್ಟಿಯಿಂದ ಕೈಬಿಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಈ ವಿಚಾರವಾಗಿ ಡಾ| ಬಿ.ಆರ್.ಅಂಬೇಡ್ಕರ್ ಪರಿಶಿಷ್ಟ ಜಾತಿಗಳ ಒಕ್ಕೂಟದ ಪರವಾಗಿ ಮಹೇಂದ್ರ ಕುಮಾರ ಮಿಶ್ರಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾ| ಪ್ರಸನ್ನ ಬಿ. ವರಾಲೆ ಹಾಗೂ ನ್ಯಾ| ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ಸ್ವಲ್ಪ ಹೊತ್ತು ಅರ್ಜಿದಾರರ ವಾದ ಆಲಿಸಿದ ನ್ಯಾಯಪೀಠ, ಯಾವ ಸಮುದಾಯವನ್ನು ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿಸಬೇಕು ಎಂಬುದು ಶಾಸನಸಭೆ ನೀತಿಯ ಭಾಗವಾಗಿದೆ. ಇದರ ಮೌಲ್ಯಮಾಪನ ಅಥವಾ ಪರಾಮರ್ಶೆಯನ್ನು ನ್ಯಾಯಾಲಯ ಕೈಗೆತ್ತಿಗೊಳ್ಳುವುದು ಸಮಂಜಸವಲ್ಲ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವ್ಯಾಪ್ತಿ ಸಾಗರದಷ್ಟು ವ್ಯಾಪಕವಾಗಿದೆ ಎಂಬುದು ಎಷ್ಟು ಸತ್ಯವೋ, ಆ ಸಾಗರಕ್ಕೂ ಒಂದು ದಂಡೆ ಇರುತ್ತದೆ ಅನ್ನುವುದೂ ಅಷ್ಟೇ ವಾಸ್ತವ ಅನ್ನುವುದನ್ನು ಮರೆಯುವಂತಿಲ್ಲ. ಹೀಗಾಗಿ ಈ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲು ಬಯಸುವುದಿಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿತು.
ಎಲ್ಲಿಯವರೆಗೆ ನಾಯಕ, ನಾಯ್ಕ, ಬೇಡ, ಬೇಡರ, ವಾಲ್ಮೀಕಿ ಮತ್ತು ತಳವಾರ ಸಮುದಾಯಗಳು ಶಾಸನಾತ್ಮಕವಾಗಿ ಮುಂದುವರಿಯಲಿವೆಯೋ ಅಲ್ಲಿಯವರೆಗೆ ಆ ಸಮುದಾಯಗಳ ಸದಸ್ಯರು ಸಕ್ಷಮ ಪ್ರಾಧಿಕಾರದಿಂದ ಸಾಮಾಜಿಕ ಸ್ಥಿತಿಗತಿಯ ಪ್ರಮಾಣಪತ್ರ ಪಡೆಯಲು ಅರ್ಹರು. ಇದು ಶಿಕ್ಷಣ, ಉದ್ಯೋಗ, ಚುನಾವಣೆ ಮತ್ತು ಇತ್ಯಾದಿ ಮೀಸಲಾತಿಗೂ ಅನ್ವಯಿಸುತ್ತದೆ. ಈ ಕಾರಣಕ್ಕಾಗಿಯೇ ಅವರು 1989ರ ಕಾಯ್ದೆ ಅಡಿ ದೌರ್ಜನ್ಯದಿಂದ ರಕ್ಷಣೆ ಪಡೆಯಲು ಅರ್ಹರಾಗಿದ್ದಾರೆ ಎಂದು ನ್ಯಾಯಪೀಠ ತಿಳಿಸಿದೆ.